ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ಮುಖ್ಯ: ಡಾ. ಎನ್.ಟಿ. ಶ್ರೀನಿವಾಸ್

| Published : Jul 11 2025, 11:48 PM IST

ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ಮುಖ್ಯ: ಡಾ. ಎನ್.ಟಿ. ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕೂಡ್ಲಿಗಿ ಪಟ್ಟಣದ ಜ್ಞಾನಭಾರತಿ ಬಿಇಡಿ ಕಾಲೇಜಿನಲ್ಲಿ ಕೂಡ್ಲಿಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೂಡ್ಲಿಗಿ: ಪತ್ರಿಕೋದ್ಯಮ ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆಯುತ್ತಿದೆ. ಇಂತಹ ವ್ಯವಹಾರಿಕ ಜಗತ್ತಿನಲ್ಲಿ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಸಾಮಾಜಿಕ ಜವಾಬ್ದಾರಿ, ಅಂತಃಕರಣ ಮನೋಭಾವದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಪಟ್ಟಣದ ಜ್ಞಾನಭಾರತಿ ಬಿಇಡಿ ಕಾಲೇಜಿನಲ್ಲಿ ಕೂಡ್ಲಿಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಮಾಧ್ಯಮಗಳ ಭರಾಟೆಯಲ್ಲಿ ಪತ್ರಿಕೋದ್ಯಮ ಗತವೈಭವ ಕಳೆದುಕೊಳ್ಳುತ್ತಿದ್ದರೂ ಪತ್ರಿಕೆಗಳೇ ಇಂದಿಗೂ ಹಿಂದೆಯೂ ಮುಂದೆಯೂ ಜ್ಞಾನದ ಕಣಜಗಳಾಗಿವೆ ಎಂದರು.

ಜನಪ್ರತಿನಿಧಿಗಳು, ಅಧಿಕಾರಿಗಳು ದಿಕ್ಕು ತಪ್ಪಿದಾಗ ತಿದ್ದಿ ದಾರಿ ತೋರಿಸುವ ಮಹತ್ತರ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಹೀಗಾಗಿ ಹಿರಿಯ ಪತ್ರಕರ್ತರು ಇಂದಿಗೂ ತಮ್ಮ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಅಂಥವರ ಹಾದಿಯಲ್ಲಿ ಯುವ ಪತ್ರಕರ್ತರು ಸಾಗಬೇಕಿದೆ ಎಂದರು.

ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶ್ ದೊಡ್ಮನಿ ಮಾತನಾಡಿ, ಪತ್ರಕರ್ತರಿಗೆ ವರದಿ ಮಾಡುವುದಷ್ಟೇ ಕೆಲಸವಲ್ಲ, ತಮ್ಮ ಕಾಳಜಿ, ಮೌಲ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಬಂದಿದೆ. ಜನಪರ ಕಾಳಜಿ ಪತ್ರಕರ್ತರ ಧ್ಯೇಯವಾಗಬೇಕು ಎಂದರು.

ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ. ರವಿಕುಮಾರ್, ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ, ಕೂಡ್ಲಿಗಿ ಪಪಂ ಅಧ್ಯಕ್ಷ ಕೆ. ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಶುಕೂರ್, ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಕಂಠಾಪುರ ವೆಂಕಟೇಶ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ಕಾಂಗ್ರೆಸ್ ಯುವ ಧುರೀಣರಾದ ಬಣವಿಕಲ್ಲು ಯರ್ರಿಸ್ವಾಮಿ, ಟಿ.ಜಿ. ನಾಗರಾಜಗೌಡ, ಎಂ.ಬಿ. ಅಯ್ಯನಹಳ್ಳಿ ಅಜ್ಜನಗೌಡ, ವಿಜಯನಗರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಲಕ್ಷ್ಮಣ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ವೆಂಕೋಬನಾಯಕ, ಜಿಲ್ಲಾ ಸಂಘದ ಸಿ.ಕೆ. ನಾಗರಾಜ ಭಾಗವಹಿಸಿದ್ದರು.