ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ಎಲ್ಲರಿಗೂ ಹೊಟ್ಟೆಪಾಡು ಮುಖ್ಯ. ಆದರೆ, ಅದಕ್ಕಿಂತಲೂ ಮುಖ್ಯವಾದದ್ದು ಸಾಮಾಜಿಕ ಜವಾಬ್ದಾರಿ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಯುತ್ತಿರುವ ಅನೇಕ ಕಾರ್ಯಗಳು ಸಾಮಾಜಿಕ ಜವಾಬ್ದಾರಿಯಿಂದ ಕೂಡಿವೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-2 ಯೋಜನಾಧಿಕಾರಿ ಮಾಧವ ಹೇಳಿದರು.ನಗರದ ಶ್ರೀರಾಮ ನಗರದ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಶಿವಮೊಗ್ಗ ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ನವಜೀನೊತ್ಸಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಬದುಕು ಎಂದರೆ ಹೇಗೋ ಬದುಕುವುದಲ್ಲ. ಸಮಾಜ ಶ್ಲಾಘಿಸುವಂತೆ ಬದುಕಬೇಕು. ಆಗ ಕುಟುಂಬ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ಸಮಾಜ ಪ್ರತಿಯೊಬ್ಬರನ್ನು ಗಮನಿಸುತ್ತಿರುತ್ತದೆ. ನಮ್ಮಿಂದ ಸಮಾಜಕ್ಕೆ ಕೊಡುಗೆ ದೊರೆತಾಗ ಮಾತ್ರ ನಮಗೂ ಸಮಾಜದಿಂದ ಪ್ರತಿಸ್ಪಂದನೆ ದೊರೆಯಲು ಸಾಧ್ಯ ಎಂದರು.ಶ್ರೀಮಂತಿಕೆಯಿಂದ ಮಾತ್ರವೇ ಕುಟುಂಬಕ್ಕೆ ನೆಮ್ಮದಿ ನೀಡಲು ಸಾಧ್ಯವಿಲ್ಲ. ಉತ್ತಮ ರೀತಿ ಬದುಕಿದಾಗ ಸಮಾಜ ಶ್ಲಾಘಿಸುತ್ತದೆ. ಇದರಿಂದ ತಂದೆ-ತಾಯಿ, ಹೆಂಡತಿ ಮಕ್ಕಳಿಗೆ ನೆಮ್ಮದಿ ನೀಡಲು ಸಾಧ್ಯ. ಆದ್ದರಿಂದ ಮದ್ಯಪಾನದಿಂದ ದೂರವಿದ್ದು, ಉತ್ತಮ ಬದುಕು ಸಾಗಿಸಿ ಎಂದು ಸಲಹೆ ನೀಡಿದರು.
ಸಂತೋಷ್ ರೈಸ್‌ಮಿಲ್ ಮಾಲೀಕ ಸುಧಾಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಮುಖಂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಲ್. ಯಶೋಧರಯ್ಯ ಅಧ್ಯಕ್ಷತೆವಹಿಸಿದ್ದರು. ಚಿತ್ರದುರ್ಗ ಜಿಲ್ಲಾ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗರಾಜ್ ಕುಲಾಲ್ ನವಜೀವನ ಸದಸ್ಯರಿಗೆ ಮದ್ಯವರ್ಜನೆ ಬಗ್ಗೆ ಮಾರ್ಗದರ್ಶನ ನೀಡಿದರು.ರಾಮನಗರ ಗ್ರಾಮದ ಸಂಸ್ಥಾಪಕ ಶ್ರಮಜೀವಿ ಮರಿಸಿದ್ದಯ್ಯನವರ ಪುತ್ರ ಎಸ್.ಎಂ.ರಮೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕರುಣಾ ಮೂರ್ತಿ, ಜಯರಾಮ್ ಗೊಂದಿ, ಪಾರ್ವತಮ್ಮ, ಕಾವೇರಮ್ಮ, ರಾಜು ರೇವಣಕರ್ ಮುಖಂಡ ಮಹೇಶ್ ಕುಮಾರ್ ಎಚ್.ಆರ್, ವರಲಕ್ಷ್ಮೀ, ಭಾರತಿ, ಲತಾ, ಜಯಲಕ್ಷ್ಮೀ ಹಾಗೂ ಸೇವಾ ಪ್ರತಿನಿಧಿಗಳು ಒಕ್ಕೂಟ ಪದಾಧಿಕಾರಿಗಳು, ಸಂಘದ ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.
- - - -ಡಿ10ಬಿಡಿವಿಟಿ1:ಕಾರ್ಯಕ್ರಮವನ್ನು ಸಂತೋಷ್ ರೈಸ್‌ಮಿಲ್ ಮಾಲೀಕ ಸುಧಾಕರ್ ಶೆಟ್ಟಿ ಉದ್ಘಾಟಿಸಿದರು.