ಶಿಕ್ಷಕರ ಮೇಲಿದೆ ಸಾಮಾಜಿಕ ಹೊಣೆಗಾರಿಕೆ: ಫಾಲ್ಗುಣ ಗೌಡ

| Published : Oct 28 2024, 01:10 AM IST

ಸಾರಾಂಶ

ಉದ್ಯೋಗ ಸಿಗಲು ಕೌಶಲ್ಯವನ್ನು ಹೊಂದಿರಬೇಕು. ಆ ಕೌಶಲ್ಯವನ್ನು ಹೊಂದಲು ಪೂರಕವಾಗಿ ನಮ್ಮ ಕೆಎಲ್ಇ ಸಂಸ್ಥೆಯು ವಿವಿಧ ತರಬೇತಿಗಳನ್ನು ನಡೆಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು

ಅಂಕೋಲಾ: ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಿ, ಗೌರವಿಸಿ ವೃತ್ತಿಪರತೆಯನ್ನು ಬೆಳೆಸಿಕೊಂಡು ಮಾನವೀಯತೆ, ಸಜ್ಜನಿಕೆ, ಸರಳತೆ, ಉದಾರಗುಣ ಹಾಗೂ ವಾತ್ಸಲ್ಯದ ಜತೆ ಯುವಕರನ್ನು ಸನ್ಮಾರ್ಗದಲ್ಲಿ ಸಾಗುವಂತೆ ಮಾಡುವ ಸಾಮಾಜಿಕ ಹೊಣೆಗಾರಿಕೆ ಹೊಂದಿದ್ದಾರೆ ಎಂದು ಪಿಎಂ ಪಿಯು ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ತಿಳಿಸಿದರು.ಪಟ್ಟಣದ ಕೆಎಲ್ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ವಿದ್ಯಾರ್ಥಿ ಒಕ್ಕೂಟ ಹಾಗೂ ಎನ್‌ಎಸ್‌ಎಸ್ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಅಶ್ವತ್ಥನಾರಾಯಣ ಹೆಗಡೆ, ಉದ್ಯೋಗ ಸಿಗಲು ಕೌಶಲ್ಯವನ್ನು ಹೊಂದಿರಬೇಕು. ಆ ಕೌಶಲ್ಯವನ್ನು ಹೊಂದಲು ಪೂರಕವಾಗಿ ನಮ್ಮ ಕೆಎಲ್ಇ ಸಂಸ್ಥೆಯು ವಿವಿಧ ತರಬೇತಿಗಳನ್ನು ನಡೆಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕೆಎಲ್ಇ ಸಂಸ್ಥೆಯ ಪದವಿ ಹಾಗೂ ಪೂರ್ವ ಮಹಾವಿದ್ಯಾಲಯದ ಆಡಳಿತಾಧಿಕಾರಿ ಡಾ. ಮಿನಲ್ ನಾರ್ವೇಕರ ಹಾಗೂ ಉಪನ್ಯಾಸಕಿ ಡಾ. ಸ್ಮಿತಾ ಘಾತರಪೇಕರ ಉಪಸ್ಥಿತರಿದ್ದರು. ಉಪನ್ಯಾಸಕಿ ಕಾಂಚನಾ ನಾಯ್ಕ ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಎನ್‌ಎಸ್‌ಎಸ್ ಅಧಿಕಾರಿ ವಿದ್ಯಾ ತಾಂಡೇಲ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜಯಾ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಶಾನಭಾಗ ಸ್ವಾಗತಿಸಿದರು. ಜ್ಞಾನೇಶ್ವರಿ ನಾಯ್ಕ ನಿರೂಪಿಸಿದರು. ಜ್ಯೋತಿ ನಾಯ್ಕ ವಂದಿಸಿದರು. ಸದೃಢ ದೇಹ, ಮನಸ್ಸಿಗೆ ಕ್ರೀಡೆ ಪೂರಕ

ಸಿದ್ದಾಪುರ: ಸ್ಥಳೀಯ ಎಂಜಿಸಿ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ ಮತ್ತು ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸರ್ಟಿಫಿಕೇಟ್ ಕೋರ್ಸ್ ಅಡಿಯಲ್ಲಿ ೧೨ ದಿನಗಳ ಟೇಬಲ್ ಟೆನ್ನಿಸ್ ತರಬೇತಿಯ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು.

ಶಿಬಿರದ ಮುಖ್ಯ ತರಬೇತುದಾರ ವಿನಯ ಉದಯಕುಮಾರ ಧಾರವಾಡ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆ ಮನುಷ್ಯನನ್ನು ಸದೃಢವಂತನನ್ನಾಗಿ ಮಾಡುತ್ತದೆ. ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಮನೋಭಾವವನ್ನು ಬೆಳೆಸುತ್ತದೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಜಗನ್ನಾಥ ಮೊಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದವಿ ಕಾಲೇಜಿನ ಸಹಾಯಕ ನಿರ್ದೇಶಕ ಶ್ರೀಪಾದ ಹೆಗಡೆ ಉಪಸ್ಥಿತರಿದ್ದರು. ೧೨ ದಿನಗಳ ಕಾಲ ಟೇಬಲ್ ಟೆನ್ನಿಸ್ ತರಬೇತಿ ನೀಡಿದ ವಿನಯ ಉದಯಕುಮಾರ ಅವರನ್ನು ಸನ್ಮಾನಿಸಲಾಯಿತು.ಭಾಗವಹಿಸಿದ ೧೦ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ದೈಹಿಕ ಶಿಕ್ಷಣ ನಿರ್ದೇಶಕ ಸಾಗರ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ಆಶಿತಾ ಗೌಡರ್ ನಿರೂಪಿಸಿದರು. ಕು. ದಿವ್ಯಾ ಹೆಗಡೆ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಐಕ್ಯುಎಸಿ ಸಂಚಾಲಕರಾದ ಪ್ರೊ. ಕಿರಣಕುಮಾರ ವಿ. ವಂದಿಸಿದರು.