ಸಾರಾಂಶ
ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಎಂಬ ವಿಷಯ ಕುರಿತು ವಿಚಾರ ಮಂಡನೆ ಮಾಡಲಾಯಿತು. ಉತ್ತಮ ಸಮಾಜ ನಿರ್ಮಾಣಕ್ಕೆ ಕಾನೂನಿನ ಅವಶ್ಯಕತೆಯನ್ನು ವಿವರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಮೂರ್ನಾಡು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಕೋಟು ಪರಂಭುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿರಾಜಪೇಟೆಯ ವಕೀಲರಾದ ಬಿ ಬಿ ಮಾದಪ್ಪ ಅವರು ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಎಂಬ ವಿಷಯ ಕುರಿತು ವಿಚಾರ ಮಂಡಿಸಿದರು.ವಿದ್ಯಾರ್ಥಿಗಳಿಗೆ ಇರಬೇಕಾದ ಕಾನೂನಿನ ಅರಿವು ಪ್ರಜ್ಞೆ ಸರಿಯಾದ ರೀತಿಯಲ್ಲಿ ಕಾನೂನನ್ನು ಬಳಸಿಕೊಳ್ಳುವ ಮಾರ್ಗಗಳನ್ನು ಸವಿಸ್ತಾರವಾಗಿ ವಿವರಿಸಿ ಸರಿಯಾದ ರೀತಿಯ ಕಾನೂನಿನ ಬಳಕೆ ಗೊತ್ತಿದ್ದರೆ ಅದೇ ಕಾನೂನು ನಮಗೆ ಸಂವಿಧಾನಿಕ ರಕ್ಷಣೆಯನ್ನು, ಸಾಮಾಜಿಕ ಭದ್ರತೆಯನ್ನು ನೀಡುತ್ತದೆ ಎಂದು ಹೇಳಿದರು.
ಶಿಬಿರಾರ್ಥಿಗಳಿಗೆ ಮೊಬೈಲ್ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಬಗೆಗಿನ ಕಾನೂನಾತ್ಮಕ ವಿಚಾರವನ್ನು ವಿವರಿಸಿದರು. ಉತ್ತಮ ಸಮಾಜದ ನಿರ್ಮಾಣಕ್ಕೆ ಕಾನೂನಿನ ಅವಶ್ಯಕತೆಯನ್ನು ಶಿಬಿರಾರ್ಥಿಗಳಿಗೆ ವಿವರಿಸಿ ವಿದ್ಯಾರ್ಥಿಗಳನ್ನು ಪ್ರಶ್ನೆ ಕೇಳುವುದರ ಮುಖಾಂತರ ಪರಸ್ಪರ ಸಂವಹನವನ್ನು ನಡೆಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಕಿ ಕೂರ್ಗ್ನ ಜನರಲ್ ಸೆಕ್ರೆಟರಿ ಆದ ಅಮ್ಮಂದಿರ ಚೇತನ್ ವಿದ್ಯಾರ್ಥಿಗಳು ದೇಶದ ಭವಿಷ್ಯ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಆಯ್ಕೆಗಳು ಬಹಳ ಮುಖ್ಯ. ಉತ್ತಮ ಆಯ್ಕೆಗಳು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದೆಂದು ಹೇಳಿದರು.
ಶಿಬಿರದ ಅಧ್ಯಕ್ಷ ಸ್ಥಾನವನ್ನು ಮೂರ್ನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ನಂದಿಟಿರ ರಾಜ ಮಾದಪ್ಪನವರು ವಹಿಸಿದ್ದು ಎನ್ಎಸ್ಎಸ್ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು .ಕಾಕೋಟು ಪರಂಬುವಿನ ಗ್ರಾಮಸ್ಥರಾದ ನೆಲ್ಲಮಕ್ಕಡ ಮುತ್ತಪ್ಪ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ದಮಯಂತಿ ಉಪಸ್ಥಿತರಿದ್ದರು.