ಸಾರಾಂಶ
ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಮುಖಾಂತರ ಸಮಾಜ ಸೇವೆಯನ್ನು ಮಾಡಿ ದೇಶದ ಅಭಿವೃದ್ಧಿಗೆ ಸಹಾಯಕವಾಗಬೇಕು ಎಂದು ಗಣ್ಯರು ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಮೂರ್ನಾಡು ವಿದ್ಯಾ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಕಿಯವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂದರ್ಭ ಮಾತನಾಡಿದ ಅವರು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ಕುರಿತು ವಿದ್ಯಾರ್ಥಿಗಳಿಗೆ ಅವರು ತಿಳಿಸಿಕೊಟ್ಟರು.
ಕಾರ್ಯಕ್ರಮವನ್ನು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಶನ್ ರೈ ಉದ್ಘಾಟಿಸಿ, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಮುಖಾಂತರ ಸಮಾಜ ಸೇವೆಯನ್ನು ಮಾಡಿ ದೇಶದ ಅಭಿವೃದ್ಧಿಗೆ ಸಹಾಯಕವಾಗಬೇಕು. ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಾರಾಣೆ ಗ್ರಾಮದ ಪ್ರಗತಿಪರ ರೈತರಾದ ಬಲ್ಯಾಟಂಡ ಕೌಶಿಕ್ ಕುಟ್ಟಯ್ಯನವರು ತಾವು ಮಾಡುತ್ತಿರುವ ಪ್ರಗತಿಪರ ಕೃಷಿ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುತ್ತಾ, ರಾಷ್ಟ್ರೀಯ ಸೇವಾ ಯೋಜನೆ ಮುಖಾಂತರ ವಿದ್ಯಾರ್ಥಿಗಳು ತಮ್ಮ ನೆಲ ಜಲದ ಸಂರಕ್ಷಣೆಗೆ ಬದ್ಧರಾಗಿರಬೇಕೆಂದು ಪ್ರೇರಣಾತ್ಮಕ ಮಾತುಗಳನ್ನಾಡಿದರು.ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ದಮಯಂತಿಯವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸರ್ವರನ್ನು ಸ್ವಾಗತಿಸಿದರು.
ಅನನ್ಯ ದೇವೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ ಕುಮಾರಿ ಪಂಚಮಿ ವಂದಿಸಿದರು.