ಕೇಂದ್ರ ಸರ್ಕಾರಿ ಅನುಮೋದಿತ ‘ಐ ಕ್ಯಾನ್ ಫೌಂಡೇಶನ್ ಇಂಡಿಯಾ’ ವತಿಯಿಂದ ವಿಶ್ವ ಮಾನವೀಯತೆ ದಿನಾಚರಣೆ ಅಂಗವಾಗಿ ನೀಡಲಾಗುವ ‘ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ-2026’ಅನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಹಾಗೂ ಕೊಡವ ಮುಸ್ಲಿಂ ಶಿಕ್ಷಣ ನಿಧಿ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಅವರಿಗೆ ಪ್ರದಾನ ಮಾಡಲಾಯಿತು.
ಪೊನ್ನಂಪೇಟೆ: ಕೇಂದ್ರ ಸರ್ಕಾರಿ ಅನುಮೋದಿತ ‘ಐ ಕ್ಯಾನ್ ಫೌಂಡೇಶನ್ ಇಂಡಿಯಾ’ ವತಿಯಿಂದ ವಿಶ್ವ ಮಾನವೀಯತೆ ದಿನಾಚರಣೆ ಅಂಗವಾಗಿ ನೀಡಲಾಗುವ ‘ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ-2026’ಅನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಹಾಗೂ ಕೊಡವ ಮುಸ್ಲಿಂ ಶಿಕ್ಷಣ ನಿಧಿ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಅವರಿಗೆ ಪ್ರದಾನ ಮಾಡಲಾಯಿತು.ಪ್ರಶಸ್ತಿಯನ್ನು ನವದೆಹಲಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದ ಸದಸ್ಯ ಕಮಲ್ಜಿತ್ ಶೇರಾವತ್ ಸಮರ್ಪಣೆ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸೂಫಿ ಹಾಜಿ, ಸಮಾಜ ಸೇವೆ ಎಂಬುದು ಕೇವಲ ಒಂದು ನಿರ್ದಿಷ್ಟ ಚೌಕಟ್ಟಿಗೆ ಅಥವಾ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅದಕ್ಕೆ ಯಾವುದೇ ಭೌಗೋಳಿಕ, ಆರ್ಥಿಕ ಮತ್ತು ಸಾಮಾಜಿಕ ಗಡಿಗಳಿಲ್ಲ. ಸಮಾಜ ಸೇವೆ ಎಂಬುದು ಕೇವಲ ಪ್ರಚಾರ ಅಥವಾ ಪ್ರಶಸ್ತಿಗಾಗಿ ಮಾಡುವ ವಸ್ತುವಲ್ಲ. ಅದು ನಮ್ಮೊಳಗಿನ ಮಾನವೀಯತೆಯಿಂದ ಹೊರಹೊಮ್ಮಬೇಕಾದ ಕರ್ತವ್ಯವಾಗಬೇಕು ಎಂದು ಹೇಳಿದರು.ದೆಹಲಿ ಸರ್ಕಾರದ ಮಾಜಿ ಶಿಕ್ಷಣ ಸಚಿವ ರಾಜ್ ಕುಮಾರ್ ಆನಂದ್, ದೆಹಲಿಯ ನಿವೃತ್ತ ಪೊಲೀಸ್ ಆಯುಕ್ತ ಲಕ್ಷ್ಮೀನಾರಾಯಣ್ ರಾವ್, ಸಿಎನ್ಎನ್ ನ್ಯೂಸ್ 18ರ ಹಿರಿಯ ಸಂಪಾದಕ ಪಲ್ಲವಿ ಘೋಷ್, ದೆಹಲಿ ವಿವಿಯ ಉನ್ನತ ಶಿಕ್ಷಣ ವಿಭಾಗದ ವೃತ್ತಿಪರ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಪ್ರೊ. ಗೀತಾ ಸಿಂಗ್, ರಾಷ್ಟ್ರೀಯ ವೈದ್ಯಕೀಯ ಆಯೋಗದ ಮೌಲ್ಯಮಾಪನ ಮತ್ತು ಮೌಲ್ಯನಿರ್ಧಾರ ಮಂಡಳಿ ಸದಸ್ಯರಾದ ಡಾ. ಜೀತು ಲಾಲ್ ಮೀನಾ, ಕೇಂದ್ರ ಗುಪ್ತಚರ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಲಾಲ್ ಚತುರ್ವೇದಿ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಮಾಜಿ ನಿರ್ದೇಶಕ ಡಾ. ಚೌಹಾರಿ ಲಾಲ್, ಐ ಕ್ಯಾನ್ ಫೌಂಡೇಶನ್ ಇಂಡಿಯಾ ಮುಖ್ಯಸ್ಥ ಗೌರವ ಗೌತಮ್ ಪಾಲ್ಗೊಂಡಿದ್ದರು.