ಕನ್ನಡಪ್ರಭ ವಾರ್ತೆ ಬಾಗಲಕೋಟೆಸಮಾಜದಲ್ಲಿ ಮಹಿಳೆಗೆ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಪರಿಪೂರ್ಣ ಸಮಾನತೆ ಸಾಧ್ಯ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಅವರು ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಮಾಜದಲ್ಲಿ ಮಹಿಳೆಗೆ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಪರಿಪೂರ್ಣ ಸಮಾನತೆ ಸಾಧ್ಯ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಅವರು ಪ್ರತಿಪಾದಿಸಿದರು.

ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶರಣಬಸವಾಶ್ರಮದಲ್ಲಿ ಜರುಗಿದ ಮಹಿಳಾ ಸಮಾನತೆ ದಿನಾಚರಣೆಯ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬಸವಣ್ಣ-ಅಂಬೇಡ್ಕರ್ ಅವರ ತ್ಯಾಗದ ಬದುಕು ಆದರ್ಶ. ಬಸವಣ್ಣನವರ ಕ್ರಾಂತಿಕಾರಿ ನಿರ್ಧಾರವನ್ನು ಸ್ಮರಿಸಿದ ಶ್ರೀಗಳು, 12ನೇ ಶತಮಾನದಲ್ಲೇ ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ಬಸವಣ್ಣನವರು ಬಾಲ್ಯದಲ್ಲೇ ಗೃಹತ್ಯಾಗ ಮಾಡಿ ಅನುಭವ ಮಂಟಪದ ಮೂಲಕ ಮಹಿಳೆಯರಿಗೆ ಸರಿಸಮಾನವಾದ ಆರ್ಥಿಕ, ಧಾರ್ಮಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ನೀಡಿದರು. ಅಕ್ಕನಾಗಮ್ಮ, ಅಕ್ಕಮಹಾದೇವಿ, ಸತ್ಯಕ್ಕ, ಭೊಂತಾದೇವಿ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕನಂತಹ ಶರಣೆಯರು ಸಮಾಜವನ್ನು ಮುನ್ನಡೆಸಲು ಬಸವಣ್ಣನವರ ಸ್ತ್ರೀಪರ ಕ್ರಾಂತಿಯೇ ಕಾರಣವಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್, ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ, ರಾಜಾರಾಮ್ ಮೋಹನ್ ರಾಯ್, ಇನ್ನಿತರ ದಾರ್ಶನಿಕರ ಕೊಡುಗೆಗಳನ್ನು ಸ್ಮರಿಸಿದ ಶ್ರೀಗಳು, ಇತಿಹಾಸದ ಪ್ರತಿ ಘಟ್ಟದಲ್ಲೂ ಮಹಿಳೆಯರ ಶಿಕ್ಷಣ ಹಾಗೂ ಜೀವಿಸುವ ಹಕ್ಕಿಗಾಗಿ ಕ್ರಾಂತಿಗಳು ನಡೆದಿವೆ. ಆದರೆ, ಇಂದಿನ ಆಧುನಿಕ ಯುಗದಲ್ಲೂ ಮಹಿಳೆಯರ ಸವಾಲುಗಳು ಹೊಸ ಸ್ವರೂಪ ಪಡೆದುಕೊಂಡಿವೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಕೀಲೆ ಶಿಲ್ಪಾ ಕೊಪ್ಪ ಮಾತನಾಡಿ, ಮಹಿಳೆಯರು ಯಾವುದೇ ಭಯ ಅಥವಾ ಹಿಂಜರಿಕೆ ಇಲ್ಲದೆ ತಮಗೆ ದೊರೆಯುವ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕು. ಪುರುಷರು ಮಹಿಳೆಯರಿಗೆ ಹಾಗೂ ಮಹಿಳೆಯರು ಕುಟುಂಬದ ಇತರ ಸದಸ್ಯರಿಗೆ ಪರಸ್ಪರ ಪ್ರೋತ್ಸಾಹ ನೀಡಿದಾಗ ಸದೃಢ ಕುಟುಂಬ ಮತ್ತು ಸಮಾಜ ನಿರ್ಮಾಣ ಸಾಧ್ಯ. ಶಾಲೆಯಿಂದ ಹೊರಗುಳಿದ ಮಕ್ಕಳು, ಬಾಲ್ಯವಿವಾಹಕ್ಕೆ ಒಳಗಾಗುವ ಮಕ್ಕಳು, ಬಾಲಕಾರ್ಮಿಕರು ಹಾಗೂ ದೌರ್ಜನ್ಯಕ್ಕೊಳಗಾದ ಮಕ್ಕಳ ಬಗ್ಗೆ ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

ಕುಂಬಾರ ಗುರುಪೀಠದ ಬಸವ ಗುಂಡಯ್ಯ ಶ್ರೀಗಳು ಮಾತನಾಡಿ, ಮಹಿಳೆ ಸಬಲಳಾದರೆ ಕುಟುಂಬ ಸಬಲವಾಗುತ್ತದೆ; ಕುಟುಂಬ ಸಬಲವಾದರೆ ಸಮಾಜ ಮತ್ತು ರಾಷ್ಟ್ರವೂ ಬಲಿಷ್ಠವಾಗುತ್ತದೆ. ಮಹಿಳಾ ಸಮಾನತೆ ಕೇವಲ ಮಹಿಳೆಯರ ಹೋರಾಟವಾಗದೆ, ಸಮಾನ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ಉಪನ್ಯಾಸಕಿ ರೇಖಾ ಮ್ಯಾಗೇರಿ ಮಾತನಾಡಿ, ಮಹಿಳಾ ಸಮಾನತೆ ಎಂದರೆ ಕೇವಲ ಕಾನೂನಿನಲ್ಲಿ ಹಕ್ಕುಗಳನ್ನು ನೀಡುವುದಲ್ಲ. ಕುಟುಂಬದಿಂದ ಹಿಡಿದು ಸಮಾಜದ ಪ್ರತಿಯೊಂದು ಹಂತದಲ್ಲಿಯೂ ಮಹಿಳೆಯನ್ನು ಸಮಾನ ಪಾಲುದಾರಳಾಗಿ ಗೌರವಿಸುವುದು ಮುಖ್ಯ ಎಂದರು.

ಮಲ್ಲಿಕಾರ್ಜುನ ಕೋಲ್ಹಾರ ಮಾತನಾಡಿ, ಮಹಿಳಾ ಸಮಾನತೆಯ ಪರಿಕಲ್ಪನೆ ಹೊಸದಲ್ಲ. 12ನೇ ಶತಮಾನದಲ್ಲಿಯೇ ಬಸವಣ್ಣನವರ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನ ದೊರೆತಿತ್ತು. ಅಕ್ಕಮಹಾದೇವಿಯವರು ತಮ್ಮ ಬದುಕು ಮತ್ತು ವಚನಗಳ ಮೂಲಕ ಮಹಿಳಾ ಸ್ವಾತಂತ್ರ್ಯ, ಆತ್ಮಗೌರವ ಹಾಗೂ ಸಮಾನತೆಯ ಸಂದೇಶ ಸಾರಿದ್ದಾರೆ ಎಂದರು.

ಭೋವಿ ಗುರುಪೀಠದ ಶ್ರೀಕಾಂತ ದೇವರು ಹಾಗೂ ಅಮರೇಶ್ವರ ಶಾಸ್ತ್ರಿಗಳು ಸಮ್ಮುಖ ವಹಿಸಿದ್ದರು. ಮೀನಾಕ್ಷಿ ಬಟಕುರ್ಕಿ, ರತ್ನಕ್ಕ ರುದ್ರಾಕ್ಷಿ, ಶ್ರೀಪೀಠದ ಧರ್ಮದರ್ಶಿಗಳು ಹಾಗೂ ಅಕ್ಕನ ಬಳಗದವರು ಉಪಸ್ಥಿತಿಯಿದ್ದರು.

ಅಂಬೇಡ್ಕರ್ ಅವರ ಚಾರಿತ್ರಿಕ ನಿರ್ಧಾರವನ್ನು ಉಲ್ಲೇಖಿಸಿ, ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿದ್ದ ಡಾ.ಅಂಬೇಡ್ಕರ್ ಅವರು ಮಹಿಳೆಯರಿಗೆ ಆಸ್ತಿ ಹಕ್ಕು, ವಿವಾಹ ವಿಚ್ಛೇದನ ಮತ್ತು ಸಮಾನ ಹಕ್ಕುಗಳನ್ನು ಒದಗಿಸುವ ಹಿಂದು ಕೋಡ್ ಬಿಲ್ ಮಂಡಿಸಿದರು. ಆದರೆ, ಅದು ಸಂಸತ್ತಿನಲ್ಲಿ ಅಂಗೀಕಾರವಾಗದಿದ್ದಾಗ ತಮ್ಮ ಕೇಂದ್ರ ಮಂತ್ರಿ ಪದವಿಯನ್ನೇ ತ್ಯಾಗ ಮಾಡಿದರು. ಮಹಿಳೆಯರ ಸಮಾನತೆಗಾಗಿ ತಮ್ಮ ಅಧಿಕಾರವನ್ನೇ ತೃಣಕ್ಕೆ ಸಮಾನವಾಗಿ ಕಂಡ ಇಂತಹ ಮಹಾನಾಯಕರ ತ್ಯಾಗದ ಆಶಯಗಳನ್ನು ಸಮಾಜ ಇಂದಿಗೂ ಅರ್ಥೈಸಿಕೊಳ್ಳಬೇಕಿದೆ.

- ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಭೋವಿ ಗುರುಪೀಠ