ಸಾರಾಂಶ
ಬಳ್ಳಾರಿ: ಮಾನವ ಕಲ್ಯಾಣಕ್ಕೆ ಸಹಕಾರಿಯಾಗಿರುವ ಸಮಾಜ ಕಾರ್ಯವು ವಿಶ್ವ ಮಾನ್ಯತೆ ಪಡೆದಿದೆ. ಇಂದಿಗೂ ಸಾಮಾಜಿಕ ಕಾಳಜಿ ಇರುವ ವೃತ್ತಿಪರ ಸಮಾಜ ಕಾರ್ಯಕರ್ತರ ಸಾಮಾಜಿಕ ಸೇವೆಯು ಶ್ಲಾಘನೀಯ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.
ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ವತಿಯಿಂದ ವಿವಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಸಮಾಜ ಕಾರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳನ್ನು ಕಾಪಾಡುವಲ್ಲಿ, ಶೋಷಿತ ಮಹಿಳೆಯರು, ಮಕ್ಕಳು, ವೃದ್ಧರು, ಅನಾಥರು ಮತ್ತು ದೀನ ದುರ್ಬಲರನ್ನು ಆರೈಕೆ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು ಕೃತಜ್ಞತೆಯಿಂದ ನೆನೆಯುವ ದಿನವಾಗಿ ವಿಶ್ವ ಸಮಾಜ ಕಾರ್ಯ ದಿನವನ್ನು 1983ರಿಂದ ಸಾಮಾಜಿಕ ಕಾರ್ಯಕರ್ತರ ಅಂತಾರಾಷ್ಟ್ರೀಯ ಒಕ್ಕೂಟವು ಆಚರಿಸುತ್ತಾ ಬಂದಿದೆ. ಪ್ರಪಂಚದಾದ್ಯಂತ ಪ್ರತಿ ಮಾರ್ಚ್ ತಿಂಗಳ ಮೂರನೇ ಮಂಗಳವಾರ ವಿಶ್ವ ಸಮಾಜ ಕಾರ್ಯ ದಿನವನ್ನು ಆಚರಿಸಲಾಗುವುದು ಎಂದು ಹೇಳಿದರು.
ಕುಲಸಚಿವ ಎಸ್.ಎನ್. ರುದ್ರೇಶ್ ಮಾತನಾಡಿ, ಬುದ್ಧ, ಬಸವ ಅಂಬೇಡ್ಕರ್, ಲೋಹಿಯಾ, ಶಾಂತವೇರಿ ಗೋಪಾಲ ಗೌಡರ ತತ್ವಾದರ್ಶಗಳು ಇಂದಿನ ವಿದ್ಯಾರ್ಥಿ ಸಮಾಜ ಕಾರ್ಯಕರ್ತರಿಗೆ ಮಾದರಿಯಾಗಿವೆ ಎಂದರು.ಕರ್ನಾಟಕ ಕಂಡ ಅಪರೂಪದ ಸಮಾಜ ಸೇವಕ, ನಾಡಿಗೆ ನಾಡೇ ನೆನೆಯುತ್ತಿರುವ ಡಾ. ಪುನೀತ್ ರಾಜ್ ನಮಗೆ ಆದರ್ಶರು ಮತ್ತು ಹೊಸಪೇಟೆಯಲ್ಲಿ ತನ್ನ ಹದಿನೇಳನೇ ವಯಸ್ಸಿಗೆ ತಮ್ಮ ದುಡಿಮೆಯ ಬಹುಪಾಲನ್ನು ಅನಾಥ ಮತ್ತು ಅಂಗವಿಕಲ ಮಕ್ಕಳಿಗೆ ಮೀಸಲಿರಿಸಿ ಸೇವೆ ಮಾಡುತ್ತಿರುವ ಕಾವ್ಯಾ ನಮಗೆ ಆದರ್ಶವೆಂದು ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಂ. ಸಾಲಿ ಕಾರ್ಯಕ್ರಮದಲ್ಲಿ ಸ್ಮರಿಸಿದರು.
ವಿಭಾಗದ ಮುಖ್ಯಸ್ಥರಾದ ಪ್ರೊ. ಗೌರಿ ಮಾಣಿಕ ಮಾನಸ, ಆದಿಕವಿ ಮಹರ್ಶಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ರಶ್ಮಿ ರಾಣಿ ಅಗ್ನಿಹೋತ್ರಿ, ಭವಿತಾ, ಡಾ. ಕುಮಾರ್ ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))