ಸಾರಾಂಶ
ಬಾಳೆಹೊನ್ನೂರು: ಸದಸ್ಯರ ನಡುವಿನ ಪರಸ್ಪರ ಸ್ನೇಹ, ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವ ಭಾವನೆಗಳು ಸಂಘ- ಸಂಸ್ಥೆಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತವೆ ಎಂದು ದಿವ್ಯಭಾರತಿ ಮಹಿಳಾ ಮಂಡಳಿ ಅಧ್ಯಕ್ಷೆ ಜ್ಯೋತಿ ಜಗದೀಶ್ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಸ್ನೇಹ ದಿನಾಚರಣೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಂಘ- ಸಂಸ್ಥೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವುದರಿಂದ ಮಹಿಳೆಯರು ಮುಂಚೂಣಿಗೆ ಬರಲು ಸಾಧ್ಯವಿದೆ. ಮಹಿಳೆಯರು ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಿದ್ದು, ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಮಹಿಳೆ ಇಂದು ಅಬಲೆಯಲ್ಲ, ಸಬಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ ಮಹಿಳಾ ಮಂಡಳಿಯು ಪ್ರಸಕ್ತ ಸಾಲಿನಲ್ಲಿ ವಿನೂತನ ಕಾರ್ಯಕ್ರಮಗಳನ್ನು ಸದಸ್ಯರಿಗಾಗಿ ಏರ್ಪಡಿಸುವ ಪ್ರಯತ್ನವನ್ನೂಮಾಡಲಿದೆ ಎಂದರು.
ಸ್ನೇಹ ದಿನಾಚರಣೆ ಅಂಗವಾಗಿ ಕೇಕನ್ನು ಕತ್ತರಿಸಿ ಪರಸ್ಪರ ಹಂಚಿಕೊಂಡು ಫ್ರೆಂಡ್‌ಶಿಫ್ ಬ್ಯಾಂಡನ್ನು ವಿನಿಮಯ ಮಾಡಿಕೊಳ್ಳಲಾಯಿತು.ಸ್ವಾತಂತ್ರ‍್ಯ ಹೋರಾಟಗಾರರ ಬಗೆಗಿನ ಭಾಷಣ ಸ್ಪರ್ಧೆಯಲ್ಲಿ ಹತ್ತಕ್ಕೂ ಹೆಚ್ಚು ಸದಸ್ಯರು ಸ್ಪರ್ಧಿಗಳಾಗಿ ಭಾಗವಹಿಸಿದ್ದು, ಜ್ಯೋತಿ ಮೂರ್ತಿ (ಪ್ರಥಮ), ಡಯಾನ (ದ್ವಿತೀಯ) ಬಹುಮಾನ ಪಡೆದರು.
ಪೂರ್ವಾಧ್ಯಕ್ಷೆ ಜ್ಯೋತಿ ಮೂರ್ತಿ, ಸವಿತಾ ಮೂರ್ತಿ, ಶೈಲಜಾ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.ಮಹಿಳಾ ಮಂಡಳಿ ಕಾರ್ಯದರ್ಶಿ ವರ್ಷಾ ವೆಂಕಿ, ಖಜಾಂಚಿ ಶಬ್ರೀನ್ ತಾಜ್, ಸದಸ್ಯರಾದ ಕವಿತಾ ಕೇಶವ್, ರೇವತಿ ಧರ್ಮರಾಜ್, ನಿರ್ಮಲಾ, ವಿಜಯಲಕ್ಷ್ಮೀ ಮತ್ತಿತರರು ಹಾಜರಿದ್ದರು.