ಸಮಾಜಮುಖಿ ಚಿಂತನೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಹಾಗೂ ಸಾರ್ವಜನಿಕರಿಂದ ಸದಾಕಾಲ ಮನ್ನಣೆ ದೊರೆಯಲಿದ್ದು, ಬ್ಯಾಡಗಿ ವರ್ತಕರ ಸಂಘದ ವತಿಯಿಂದ ನಿರ್ಮಿಸಲಾಗಿರುವ ಬೃಹತ್ ಕಲ್ಯಾಣ ಮಂಟಪ ನಿರ್ಮಾಣ ಅದರ ಮುಂದುವರಿದ ಭಾಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಬ್ಯಾಡಗಿ: ಸಮಾಜಮುಖಿ ಚಿಂತನೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಹಾಗೂ ಸಾರ್ವಜನಿಕರಿಂದ ಸದಾಕಾಲ ಮನ್ನಣೆ ದೊರೆಯಲಿದ್ದು, ಬ್ಯಾಡಗಿ ವರ್ತಕರ ಸಂಘದ ವತಿಯಿಂದ ನಿರ್ಮಿಸಲಾಗಿರುವ ಬೃಹತ್ ಕಲ್ಯಾಣ ಮಂಟಪ ನಿರ್ಮಾಣ ಅದರ ಮುಂದುವರಿದ ಭಾಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಶಿಡೇನೂರ ರಸ್ತೆಯಲ್ಲಿ ಮೆಣಸಿನಕಾಯಿ ವರ್ತಕರ ಸಂಘದ ವತಿಯಿಂದ ₹ 8 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸಿದ್ದೇಶ್ವರ ಕನ್ವೆನ್ಷನ್ ಸೆಂಟರ್ ಬೃಹತ್ ಕಲ್ಯಾಣ ಮಂಟಪ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಮೆಣಸಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿರುವ ಇಲ್ಲಿನ ವರ್ತಕರು ಸಂಘವನ್ನು ರಚಿಸಿಕೊಂಡಿದ್ದು ತನ್ಮೂಲಕ ಶೈಕ್ಷಣಿಕ ಸಂಸ್ಥೆಗಳು ಹಾಗೂ ಮುಕ್ತಿಧಾಮ ನಿರ್ಮಿಸಿದ್ದು, ಇದೀಗ ಕಲ್ಯಾಣ ಮಂಟಪ ನಿರ್ಮಿಸುವ ಮೂಲಕ ದೂರದೃಷ್ಟಿ ಚಿಂತನೆಗಳಿಂದ ಜಿಲ್ಲೆಯಲ್ಲಿಯೇ ಬ್ಯಾಡಗಿ ಹತ್ತು ಹಲವು ಕ್ಷೇತ್ರಗಳಲ್ಲಿ ಮಾದರಿ ತಾಲೂಕಾಗಿ ಗುರುತಿಸಿಕೊಂಡಿದೆ ಎಂದರು.

ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ನೇತೃತ್ವದಲ್ಲಿ ಎಪಿಎಂಸಿಯಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ತಮ್ಮ ಮೇಲೂ ಪ್ರಭಾವ ಬೀರಿದ್ದು, ಅವರ ಕಾರ್ಯಗಳನ್ನು ಪ್ರೇರಣೆಯಾಗಿ ಪಡೆದುಕೊಂಡು ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿಯೂ ಕೆಲವು ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದಾಗಿ ತಿಳಿಸಿದರು.ಅಭಿವೃದ್ಧಿಯ ಚಿಂತನೆ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ವರ್ತಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣಗೊಂಡಿದ್ದು ಸಂತಸದ ಸಂಗತಿ, ಬ್ಯಾಡಗಿಯಲ್ಲಿ ಮುಖ್ಯರಸ್ತೆ ಅಗಲೀಕರಣ ಸೇರಿದಂತೆ ಕೆಲವು ಅಭಿವೃದ್ಧಿ ಕಾರ್ಯಗಳು ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರ ಮುಂದಾಳತ್ವದಲ್ಲಿ ನಡೆಯುತ್ತಿದ್ದು, ಅವರ ಸಾಮಾಜಿಕ ಕಾಳಜಿ ಹಾಗೂ ಅಭಿವೃದ್ಧಿಯ ಚಿಂತನೆ ಶ್ಲಾಘನೀಯ ಎಂದರು.

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ವರ್ತಕರ ಸಂಘವು ಸಮಾಜಮುಖಿ ಕಾರ್ಯಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಿಸುವ ಮೂಲಕ ಮತ್ತೊಂದು ಮಹತ್ವದ ಸಾಮಾಜಿಕ ಕಾರ್ಯ ಕೈಗೊಂಡಿದೆ ಎಂದು ಶ್ಲಾಘಿಸಿದರು.

ಬಹುದಿನಗಳ ಕನಸು ನನಸು: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬ್ಯಾಡಗಿ ಜನರ ಬಹುದಿನಗಳ ಕನಸಾಗಿದ್ದ ಸುಸಜ್ಜಿತ ಕಲ್ಯಾಣ ಮಂಟಪ ಇದೀಗ ನನಸಾಗಿದೆ. ವರ್ತಕರ ಸಂಘದ ಪರಿಶ್ರಮ, ಶ್ರಮ ಹಾಗೂ ಸಹಕಾರದಿಂದ ಭವ್ಯ ಕಟ್ಟಡ ನಿರ್ಮಾಣಗೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪಂಚ ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಸುಸಜ್ಜಿತ ಕಲ್ಯಾಣ ಮಂಟಪದ ಕೊರತೆಯಿಂದ ಬ್ಯಾಡಗಿ ಜನರು ಮದುವೆ ಹಾಗೂ ಇತರ ಸಮಾರಂಭಗಳಿಗಾಗಿ ಹಾವೇರಿ, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ದೂರದ ನಗರಗಳಿಗೆ ತೆರಳಬೇಕಾಗುತ್ತಿತ್ತು, ಇದೀಗ ಬೆಂಗಳೂರಿನ ಮಾದರಿಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣವಾಗಿದ್ದು, ಇದರಿಂದ ಸಾರ್ವಜನಿಕರ ಅಲೆದಾಟ ತಪ್ಪಲಿದೆ ಎಂದರು.

ಜನರ ಅನುಕೂಲಕ್ಕಾಗಿ: ಪ್ರಾಸ್ತಾವಿಕವಾಗಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ, ಜನರ ಅನುಕೂಲಕ್ಕಾಗಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ, ಇದಕ್ಕೆ ವರ್ತಕರು ಹಾಗೂ ಉದ್ಯಮಿಗಳು ಸಹಕಾರ ನೀಡಿದ್ದಾರೆ, ಹಣ ಸಂಪಾದಿಸುವ ಉದ್ದೇಶದಿಂದ ಈ ಕಟ್ಟಡ ನಿರ್ಮಿಸಿಲ್ಲ, ಬದಲಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿದೆ ಎಂದರು. ರಾಜು ಮೋರಗೇರಿ ಸ್ವಾಗಿಸಿದರು. ಎ.ಟಿ. ಪೀಠದ ನಿರೂಪಿಸಿದರು. ಈ ವೇಳೆ ವರ್ತಕರ ಸಂಘದ ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ಸಾರ್ವಜನಿಕರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಜೀವನದಲ್ಲಿ ಹಣ ಮತ್ತು ಆಸ್ತಿಗಿಂತ ಮಾನವೀಯತೆ, ಪರಸ್ಪರ ಗೌರವ, ಪ್ರೀತಿ ಹಾಗೂ ಸಂಬಂಧಗಳಿಗೆ ಹೆಚ್ಚಿನ ಮಹತ್ವವಿದೆ. ಆಧುನಿಕ ಜೀವನಶೈಲಿಯ ಬೆನ್ನತ್ತುವ ಸಂದರ್ಭದಲ್ಲಿ ಜೀವನದ ಮೌಲ್ಯಗಳನ್ನು ಕಳೆದುಕೊಳ್ಳಬಾರದು. ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ನಡೆದುಕೊಳ್ಳಬೇಕು ಎಂದು ಸಾಣೇಹಳ್ಳಿ ಶಾಖಾಮಠದ ತರಳಬಾಳು ಪಂಡಿತಾರಾಧ್ಯ ಶಿವಾಚಾರ್ಯಶ್ರೀಗಳು ಹೇಳಿದರು. ಬ್ಯಾಡಗಿ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರ ಕೊಡುಗೆ ಸಾಕಷ್ಟಿದೆ. ಅವರ ದೂರದೃಷ್ಟಿಯ ಅಭಿವೃದ್ಧಿ ಕಾರ್ಯಗಳ ಸಾಲಿಗೆ ಇದೀಗ ಸುಸಜ್ಜಿತ ಕಲ್ಯಾಣ ಮಂಟಪ ಸೇರ್ಪಡೆಯಾಗಿದೆ. ಇಂತಹ ಯೋಜನೆಗಳು ಪಟ್ಟಣದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿವೆ ಹುಕ್ಕೇರಿಮಠದ ಸದಾಶಿವಶ್ರೀಗಳು ಹೇಳಿದರು.

ಆಡಂಬರದ ಜೀವನಕ್ಕಿಂತ ಮೌಲ್ಯಯುತ ಹಾಗೂ ಸರಳ ಜೀವನದಿಂದ ನೆಮ್ಮದಿ ಸಾಧ್ಯ, ಆದರೆ ಮನುಷ್ಯ ಆಡಂಬರದ ಬದುಕಿಗೆ ಹೆಚ್ಚು ಒತ್ತು ನೀಡುತ್ತಿರುವುದು ನೈತಿಕ ಮೌಲ್ಯಗಳ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಕಾಗಿನೆಲೆ ಕನಕಗುರು ಪೀಠದ ಡಾ.ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.