ಪ್ರಸ್ತುತ ದಿನಗಳಲ್ಲಿ ಆಕ್ಷನ್, ರೌಡಿಸಂ, ಪ್ರಣಯ ಹೀಗೆ ಹಲವು ಚಿತ್ರಗಳು ತೆರೆ ಬರುತ್ತಿದ್ದು ಕೇವಲ ಮನರಂಜನೆಗೆ ಸೀಮಿತವಾಗಿವೆ. ಆದರೆ ಸಮಾಜಮುಖಿ ಚಿಂತನೆ ಚಿತ್ರಗಳು ತೆರೆಗೆ ಬರುವುದು ಅಪರೂಪವಾಗಿದೆ ಎಂದು ಪ್ರಾಧ್ಯಾಪಕ ಡಾ.ಎಂ.ವಿ.ನಾರಾಜ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಸ್ತುತ ದಿನಗಳಲ್ಲಿ ಆಕ್ಷನ್, ರೌಡಿಸಂ, ಪ್ರಣಯ ಹೀಗೆ ಹಲವು ಚಿತ್ರಗಳು ತೆರೆ ಬರುತ್ತಿದ್ದು ಕೇವಲ ಮನರಂಜನೆಗೆ ಸೀಮಿತವಾಗಿವೆ. ಆದರೆ ಸಮಾಜಮುಖಿ ಚಿಂತನೆ ಚಿತ್ರಗಳು ತೆರೆಗೆ ಬರುವುದು ಅಪರೂಪವಾಗಿದೆ ಎಂದು ಪ್ರಾಧ್ಯಾಪಕ ಡಾ.ಎಂ.ವಿ.ನಾರಾಜ್ ಅಭಿಪ್ರಾಯಪಟ್ಟರು.

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯಿಂದ ಸಾಂಸ್ಕೃತಿಕ ಜನೋತ್ಸವದ ಅಂಗವಾಗಿ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾದ ಚಲನಚಿತ್ರೋತ್ಸವದ ಸಂವಾದದಲ್ಲಿ 2018ನೇ ಸಾಲಿನ ಅತ್ಯುತ್ತಮ ಚಿತ್ರವಾದ ‘ಒಂದಲ್ಲ ಎರಡಲ್ಲ’ ಮತ್ತು ‘2050 ಕೇರ್ ವಿಥ್ ಲವ್’ ಕಿರುಚಿತ್ರ ಕುರಿತು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ನಾಯಕರನ್ನಾಗಿ ಹೊಂದಿರುವ ಚಿತ್ರಗಳು ಅಪರೂಪ. ಅದರಲ್ಲೂ ‘ಒಂದಲ್ಲ ಎರಡಲ್ಲ’ ಸಿನಿಮಾ ಹಲವಾರು ಮೌಲ್ಯಯುತ ಅಂಶಗಳನ್ನು ಒಳಗೊಂಡಿದೆ. ನಿರ್ದೇಶಕರಾದ ಶ್ರೀ ಡಿ. ಸತ್ಯಪ್ರಕಾಶ್ ರವರು ಉತ್ತಮ ಕಥೆಗೆ ದೃಶ್ಯ ಸ್ವರೂಪ ನೀಡಿದ್ದಾರೆ. ಒಂದು ಮಗುವಿನ ಮುಗ್ಧತೆ ಮತ್ತು ತನ್ನ ಕಳೆದು ಹೋದ ಹಸುವಿನೊಂದಿಗಿನ ಸಂಬದದ ಬಗೆಗಿನ ನಿರ್ದೇಶಕರ ದೃಷ್ಟಿಕೋನ ಹಲವಾರು ಒಳ ಅರ್ಥಗಳನ್ನು ಹೊಂದಿದೆ ಎಂದರು.

ಮಗುವಿನ ಮನಸ್ಸು ಎಷ್ಟು ಪ್ರಕ್ಷುಬ್ಧ ಎಂಬುದನ್ನು ತೋರಿಸುತ್ತ ಸಮಾಜದಲ್ಲಿ ಇತ್ತೀಚೆಗೆ ಕಾಣೆಯಾಗುತ್ತಿರುವ ಮನುಷ್ಯ ಮನುಷ್ಯನ ಸಂಬಂದವನ್ನು ವಿಷದವಾಗಿ ತಿಳಿಸಿದ್ದಾರೆ. ಹಸುವನ್ನು ಹುಡುಕುತ್ತಾ ಸಮೀರಾ, ಅವನನ್ನು ಹುಡುಕುತ್ತಾ ಅವನ ಕುಟುಂಬ, ಕಳೆದು ಹೋದ ಮಗನ ಹುಡುಕುತ್ತಾ ವಯಸ್ಸಾದ ತಂದೆ, ಮಕ್ಕಳನ್ನು ಪಡೆಯುವ ಪ್ರಯತ್ನದಲ್ಲಿ ದಂಪತಿಗಳು ಹೀಗೆ ಎಲ್ಲರೂ ಏನನ್ನೋ ಹುಡುಕುತ್ತಲೇ ಸಿನಿಮಾದುದ್ದಕ್ಕೂ ಓಡುತ್ತಲೇ ಇರುತ್ತಾರೆ. ಒಂದೊಂದು ಹಂತದಲ್ಲಿ ಪರಿವರ್ತನೆ ಆಗುತ್ತ ಸಾಗುವ ಸಿನಿಮಾ ನೋಡಿ ಮಹಾ ಕವಿ ಕುವೆಂಪು ಅವರ ‘ಎಲ್ಲಿಯೂ ನಿಲ್ಲದಿರೂ ಮನೆಯನೆಂದು ಕಟ್ಟದಿರು’ ಎಂಬ ಸಾಲುಗಳನ್ನು ನೆನಪಿಗೆ ಬರುತ್ತವೆ ಎಂದರು.

20 ವರ್ಷಗಳ ಹಿಂದೆ ಕಳೆದು ಹೋದ ತನ್ನ 10 ವರ್ಷದ ಮಗನಿಗಾಗಿ ಕಾಯುತ್ತಿರುವ ಒಬ್ಬ ಕ್ರಿಶ್ಚಿಯನ್ ತಂದೆಗೆ ಎಲ್ಲರೂ ಕೀಳಾಗಿ ಕಾಣುತ್ತಿದ್ದ ಒಬ್ಬ ಬಡ ವ್ಯಕ್ತಿ ಮಗನಾಗಿ ದೊರೆಯುವ ಪ್ರಸಂಗದಲ್ಲೂ ಸಾಮಾನ್ಯ ಜನರಲ್ಲಿನ ಕೋಮಸಾಮರಸ್ಯವನ್ನು ತೋರಿಸುವಂತಹ ಉತ್ತಮ ಪ್ರಯತ್ನ ಇದರಲ್ಲಿದೆ ಎಂದು ತಿಳಿಸಿದರು.

ಹಾಸ್ಯದಿಂದಲೇ ಶುರುವಾಗುವ ಈ ಚಲನಚಿತ್ರ ಎಲ್ಲರನ್ನೂ ನಗಿಸುತ್ತಲೇ ಒಂದು ಉತ್ತಮ ಚಿಂತನೆಯೆಡೆಗೆ ಕರೆದೊಯ್ಯುತ್ತದೆ. ಅಂತಿಮದಲ್ಲಿ ರಾಜಕೀಯಕಷ್ಟೇ ಬಳಕೆಯಾಗುತ್ತಿರುವ ಕೋಮುವಿನ ಸಮಸ್ಯೆಗೆ ಸಾಮಾನ್ಯ ಜನ ಬಲಿಯಾಗುತ್ತಿದ್ದಾರೆ ಎನ್ನುವ ಸಂದೇಶ ಹೊಂದಿದೆ ಎಂದರು.

ಎಐಎಂಎಸ್ಎಸ್‌ನ ಅಖಿಲ ಭಾರತ ಉಪಾಧ್ಯಕ್ಷೆ ಅಪರ್ಣಾ ಬಿ.ಆರ್.ಮಾತನಾಡಿ, ನಾವು ಕಾರಣಗಳಿಲ್ಲದೆ ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದೆವು. ನಮ್ಮ ಪ್ರಾಧ್ಯಾಪಕರೊಬ್ಬರು ನೀವು ಅವರನ್ನು ದ್ವೆಷಿಸಲು ವೈಯಕ್ತಿಕವಾಗಿ 5 ಕಾರಣಗಳನ್ನು ಬರೆದು ತನ್ನಿ ಎಂದಾಗ ಎಷ್ಟು ಯೋಚಿಸಿದರೂ ಒಂದು ಕಾರಣವು ಸಿಗದಲಿಲ್ಲ. ರಾಜಕೀಯ ಹಿತಾಸಕ್ತಿಗೆ ನಡೆಸಿದ ಈ ಒಡೆದು ಆಳುವ ನೀತಿಯನ್ನು ಅರ್ಥ ಮಾಡಿಕೊಂಡಾಗ ನನ್ನಲ್ಲಿ ಪರಿವರ್ತನೆ ಆಯಿತು ಎಂದರು.

ಎಐಡಿವೈಒನ ರಾಜ್ಯ ಖಜಾಂಚಿ ಜಯಣ್ಣ, ರವಿಕುಮಾರ್ ಎಚ್.ಇದ್ದರು.