ಸಾಹಿತ್ಯದೆಡೆಗೆ ಹೊಸ ತಲೆಮಾರನ್ನು ಆಕರ್ಷಿಸಲು, ಸಾಹಿತ್ಯದ ವಿವಿಧ ಮಗ್ಗಲುಗಳನ್ನು ಪರಿಚಯಿಸುತ್ತಾ, ಪ್ರಸಕ್ತ ವಿದ್ಯಮಾನಗಳನ್ನು ತಳಸ್ಪರ್ಶಿಯಾಗಿ ತಿಳಿಸಲು ಸಮಾಜಮುಖಿ ಪ್ರಕಾಶ ಆರಂಭವಾಗಿದೆ. ಕಳೆದ 9 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಕಳೆದ ಎರಡು ವರ್ಷಗಳಿಂದ ಸಮಾಜಮುಖಿ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಸಮಾಜ ಮುಖಿ ಪ್ರಕಾಶ ವತಿಯಿಂದ ಬೆಂಗಳೂರಿನ ಪ್ಯಾಲೇಸ್ ರಸ್ತೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನ.28 ಮತ್ತು 29ರಂದು ಸಮಾಜ ಮುಖಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಪನಿಂದ ಕೃತಕ ಬುದ್ಧಿಮತ್ತೆಯವರೆಗೆ ವಚನದಿಂದ ಜೆನ್ ಝೀಯವರೆಗೆ ಎರಡು ದಿನಗಳ ಕಾಲ ಸಮ್ಮೇಳನದ 4 ವೇದಿಕೆಗಳಲ್ಲಿ 42 ಗೋಷ್ಠಿಗಳು ನಡೆಯಲಿವೆ ಎಂದರು.
ಸಾಹಿತ್ಯದೆಡೆಗೆ ಹೊಸ ತಲೆಮಾರನ್ನು ಆಕರ್ಷಿಸಲು, ಸಾಹಿತ್ಯದ ವಿವಿಧ ಮಗ್ಗಲುಗಳನ್ನು ಪರಿಚಯಿಸುತ್ತಾ, ಪ್ರಸಕ್ತ ವಿದ್ಯಮಾನಗಳನ್ನು ತಳಸ್ಪರ್ಶಿಯಾಗಿ ತಿಳಿಸಲು ಸಮಾಜಮುಖಿ ಪ್ರಕಾಶ ಆರಂಭವಾಗಿದೆ. ಕಳೆದ 9 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಕಳೆದ ಎರಡು ವರ್ಷಗಳಿಂದ ಸಮಾಜಮುಖಿ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.ಕನ್ನಡ ನಾಡಿನ ಉದ್ಯಮಗಳನ್ನು ಕರಕುಶಲತೆಗಳನ್ನು, ಆಹಾರ ವೈವಿಧ್ಯತೆಗಳನ್ನು ಪರಿಚಯಿಸುತ್ತಾ, ನಾಡಿನ ಅನನ್ಯತೆಯನ್ನು ಹೊಸ ತಲೆಮಾರಿಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತಿದೆ. ಶಿವಮೊಗ್ಗದ ಕುಪ್ಪಳ್ಳಿಯಲ್ಲಿ ವಿಚಾರ ಕ್ರಾಂತಿಯ ಹಗಲಿರುಳು ಕಾರ್ಯಾಗಾರವನ್ನು ನಡೆಸುವ ಮೂಲಕ ಬೌದ್ಧಿಕ ಶೋಧನೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ ಎಂದರು.
ಇದೇ ರೀತಿ ಮಹಾತ್ಮಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ರಾಮ್ ಮನೋಹರ್ ಲೋಹಿಯಾ ಅವರುಗಳ ವಿಚಾರಧಾರೆ ಹಾಗೂ ತಾತ್ವಿಕತೆಯನ್ನು ವಿದ್ಯಾರ್ಥಿ ಯುವಜನತೆಗೆ ಪರಿಚಯಿಸುವ ಸತ್ಯಮೇವ ಜಯತೆ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.ಸಮ್ಮೇಳನಗಳು ಜಾತ್ರೆಗಳಾಗುತ್ತಿವೆ ಎಂಬ ತಕರಾರಿಗೆ ಉತ್ತರವೆಂಬಂತೆ ಶಿಸ್ತುಬದ್ಧ, ಔಚಿತ್ಯ ಪೂರ್ಣವಾಗಿ ಮೊದಲ ವರ್ಷದ ಸಮ್ಮೇಳನ ನಡೆದಿದೆ ಎಂಬ ಸಾರ್ವಜನಿಕ ಅಭಿಪ್ರಾಯ ಮೂಡಿಬಂದಿದೆ. ಎರಡು ದಿನಗಳ ಸಮ್ಮೇಳನದಲ್ಲಿ 45ಕ್ಕೂ ಹೆಚ್ಚು ಗೋಷ್ಠಿಗಳು, 250ಕ್ಕೂ ಹೆಚ್ಚು ಸಂವಾದಕರು ಪಾಲ್ಗೊಂಡು ಸಾಹಿತ್ಯದ ಅಧಿಕೃತ ಚರ್ಚೆಯ ಜೊತೆಗೆ, ಸಮುದಾಯಿಕ ಬದುಕಿನ ವಿವಿಧ ಮಜಲುಗಳನ್ನು ಚರ್ಚಿಸಿ ಇತ್ಯಾತ್ಮಕ ನಿಲುವುಗಳ ಕಡೆ ಸಾಗಿದ್ದು ಸಮ್ಮೇಳನದ ಹೆಗ್ಗಳಿಕೆಯಾಗಿದೆ ಎಂದರು.
ಅದೇ ರೀತಿ ಈ ಬಾರಿಯೂ ಎರಡು ದಿನಗಳ ಸಮ್ಮೇಳನ ಆಯೋಜಿಸಿದ್ದು, ಕನ್ನಡ ಸಾಹಿತ್ಯದ ಪರಂಪರೆ, ಭಾಷೆ ಮತ್ತು ಸಮಾಜದ ನಡುವಣ ಸಂಬಂಧಗಳ ಆಯಾಮಗಳನ್ನು ಶೋಧಿಸಲಿಕ್ಕೆ ಸಾಧ್ಯವಾಗುವಂತೆ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.ಬಹುವಚನ ವೇದಿಕೆಯಲ್ಲಿ ಭಾರತೀಯ ಪ್ರಜಾಪ್ರಭುತ್ವದ ಸ್ಥಿತಿಗತಿ ಹೊರಳುವಿಕೆಯನ್ನು ಚರ್ಚಿಸುವ ಜೊತೆಗೆ ರಾಜ್ಯದ ಕನ್ನಡಪರ ಹೋರಾಟದ ನೆಲೆಗಳನ್ನು ಚರ್ಚಿಸಿ ಕನ್ನಡ ಸಂಶೋಧನೆಯ ದಿಕ್ಕು-ದಿಶೆಗಳನ್ನು ಅನಾವರಣಗೊಳಿಸುವ ಗೋಷ್ಠಿಯೂ ಇರಲಿದೆ ಎಂದರು.
ನ.28 ರಂದು ಖ್ಯಾತ ಸಾಹಿತಿಗಳಾದ ಹಂಪನಾ, ಎಂ.ವೀರಪ್ಪಮೊಯ್ಲಿ, ಆರ್.ಸುನಂದಮ್ಮ, ಎನ್.ಆರ್.ವಿಶುಕುಮಾರ್, ಬೈರಮಂಗಲ ರಾಮೇಗೌಡ ಅವರು ಸಮ್ಮೇಳನ ಉದ್ಘಾಟಿಸುವರು. ಹಲವು ವಿಚಾರಗಳ ಕುರಿತು ರಾಜ್ಯದ ಖ್ಯಾತನಾಮರೊಂದಿಗೆ ಗೋಷ್ಠಿಗಳು, ಚಿಂತನ-ಮಂಥನ ಕಾರ್ಯಕ್ರಮಗಳು ಎರಡು ದಿನಗಳ ಕಾಲ ನಡೆಯಲಿವೆ ಎಂದು ವಿವರಿಸಿದರು.ಈ ವೇಳೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮುಖಂಡರಾದ ಯರಹಳ್ಳಿ ಚಂದ್ರಣ್ಣ, ಕಾರಸವಾಡಿ ಮಹದೇವು ಇದ್ದರು.