ವಿಶೇಷ ಮಕ್ಕಳನ್ನು ಪೋಷಕರು ಶಾಲೆಗೆ ಕರೆತಂದು ಬಿಟ್ಟುಹೋದ ಬಳಿಕ ಅವರ ಶಿಕ್ಷಣದ ಜತೆಗೆ ದೈಹಿಕ ವ್ಯಾಯಾಮ, ಥೆರಪಿ, ಶಿಸ್ತು, ದೈನಂದಿನ ಚಟುವಟಿಕೆ ಹಾಗೂ ಸಂಪೂರ್ಣ ಆರೈಕೆಯ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ.

ಕುಷ್ಟಗಿ: ಮಾತು, ನಡೆ, ದೈನಂದಿನ ಚಟುವಟಿಕೆಯಲ್ಲೂ ವಿಶೇಷ ಆರೈಕೆಯ ಅಗತ್ಯವಿರುವ ಮಕ್ಕಳ ಬದುಕಿಗೆ ಸಣ್ಣ ನೆರವೂ ದೊಡ್ಡ ಭರವಸೆಯಾಗುತ್ತದೆ. ಅಂತಹ ಮಕ್ಕಳ ಶಿಕ್ಷಣ, ಚಿಕಿತ್ಸೆ ಹಾಗೂ ಆರೈಕೆಗೆ ಸಮಾಜದ ಸಹಕಾರ ಅತ್ಯಗತ್ಯ ಎಂದು ಕುಷ್ಟಗಿಯ ಇನ್ನರ್‌ವೀಲ್‌ ಕ್ಲಬ್ ಐಎಸ್‌ಒ ವಂದನಾ ಗೋಗಿ ಹೇಳಿದರು.

ಗದಗ-ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಗೆ ಇನ್ನರ್‌ವೀಲ್‌ ಕ್ಲಬ್ ವತಿಯಿಂದ ಭೇಟಿ ನೀಡಿ ವಿವಿಧ ನೆರವು, ಸಹಾಯಧನ ವಿತರಿಸಿ ಅವರು ಮಾತನಾಡಿದರು. ಸದಸ್ಯರಿಂದ ಸಂಗ್ರಹಿಸಿದ ಹಣದಿಂದ ಶಾಲೆಯ ದುಸ್ಥಿತಿಯಲ್ಲಿದ್ದ ಒಂದು ಕೊಠಡಿಯ ದುರಸ್ತಿಗೆ ಆರ್ಥಿಕ ನೆರವು ನೀಡಲಾಯಿತು. ಮಕ್ಕಳ ದೈಹಿಕ ಸಾಮರ್ಥ್ಯ ವೃದ್ಧಿ ಹಾಗೂ ಥೆರಪಿಗೆ ಅಗತ್ಯವಿರುವ ವ್ಯಾಯಾಮ ಸಾಮಗ್ರಿ ಮತ್ತು ಉಪಕರಣಗಳನ್ನು ವಿತರಿಸಲಾಯಿತು. ಊಟದ ವ್ಯವಸ್ಥೆಗೆ ಸಹಕಾರ ನೀಡಿದರು.

ವಿಶೇಷ ಮಕ್ಕಳನ್ನು ಪೋಷಕರು ಶಾಲೆಗೆ ಕರೆತಂದು ಬಿಟ್ಟುಹೋದ ಬಳಿಕ ಅವರ ಶಿಕ್ಷಣದ ಜತೆಗೆ ದೈಹಿಕ ವ್ಯಾಯಾಮ, ಥೆರಪಿ, ಶಿಸ್ತು, ದೈನಂದಿನ ಚಟುವಟಿಕೆ ಹಾಗೂ ಸಂಪೂರ್ಣ ಆರೈಕೆಯ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಅವರ ಸೇವೆ ಕೇವಲ ಬೋಧನೆಗೆ ಸೀಮಿತವಾಗದೆ ಮಕ್ಕಳ ಬದುಕನ್ನು ರೂಪಿಸುವ ಮಹತ್ವದ ಕಾರ್ಯವಾಗಿದ್ದು, ಇನ್ನರ್‌ವೀಲ್‌ ಕ್ಲಬ್ ವತಿಯಿಂದ ಕಳೆದ ಕೆಲವು ವರ್ಷಗಳಿಂದಲೂ ಶಾಲೆಗೆ ಸಾಧ್ಯವಾದಷ್ಟು ನೆರವು ನೀಡಲಾಗುತ್ತಿದ್ದು, ಈ ವರ್ಷವೂ ಮಕ್ಕಳ ಅಗತ್ಯವನ್ನು ಅರಿತು ಸೇವಾ ಕಾರ್ಯ ಕೈಗೊಳ್ಳಲಾಗಿದೆ. ನಮ್ಮ ಸೇವಾ ಕಾರ್ಯವೂ ಮುಂದುವರಿಯಲಿದೆ ಎಂದು ಹೇಳಿದರು.

ಕ್ಲಬ್ ಅಧ್ಯಕ್ಷೆ ಗೌರಮ್ಮ ಕುಡುತಿನಿ, ಸುದೀಪ್ತಾ ಕಾಖಂಡಕಿ, ಕಾರ್ಯದರ್ಶಿ ಶ್ರೀದೇವಿ ಮಸ್ಕಿಮಠ ಉಪಸ್ಥಿತರಿದ್ದರು.

ಈ ಮಕ್ಕಳಿಗೆ ಕೇವಲ ಶಿಕ್ಷಣವಷ್ಟೇ ಸಾಕಾಗುವುದಿಲ್ಲ. ಪ್ರೀತಿ, ಆರೈಕೆ, ನಿರಂತರ ತರಬೇತಿ ಹಾಗೂ ಸಮಾಜದ ಬೆಂಬಲವೂ ಅಗತ್ಯ. ನಾವು ನೀಡುವ ನೆರವು ಮಕ್ಕಳ ಮುಖದಲ್ಲಿ ಮೂಡುವ ಒಂದು ನಗುವಿಗೆ ಕಾರಣವಾದರೆ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ ಎಂದು ಕುಷ್ಟಗಿ ಐಎಸ್‌ಒ ಇನ್ನರ್‌ವೀಲ್‌ ಕ್ಲಬ್ನ ವಂದನಾ ಗೋಗಿ ತಿಳಿಸಿದ್ದಾರೆ.