ಸವಣೂರು: ನಮ್ಮ ದೇಶ ಜಗತ್ತಿನಲ್ಲಿಯೇ ಸಂಸ್ಕಾರಯುತ ದೇಶ. ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಅಲ್ಲಿ ಅಭಿವೃದ್ಧಿ, ಬೆಳವಣಿಗೆ, ನೆಮ್ಮದಿ, ಸುಖ, ಶಾಂತಿ ಇರುತ್ತದೆ ಎಂದು ಹಲವಾರು ಪುರಾಣ ಕತೆಯಲ್ಲಿ ನೋಡಬಹುದಾಗಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಡಾ. ವಿ.ಕೃ. ಗೋಕಾಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಅಂಗನವಾಡಿಗಳಿಗೆ ಅವಶ್ಯಕ ಪರಿಕರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹೆಣ್ಣು ತಾಯಿ ರೂಪದಲ್ಲಿ, ಸಹೋದರಿ ರೂಪದಲ್ಲಿ, ಮಡದಿಯಾಗಿ ಹಲವಾರು ತ್ಯಾಗಗಳನ್ನು ಮಾಡಿ, ಸಮಾಜ ಮುನ್ನಡೆಸುತ್ತಿದ್ದಾಳೆ. ಭಾರತ ದೇಶವನ್ನು, ಕರ್ನಾಟಕವನ್ನು ತಾಯಿಯ ರೂಪದಲ್ಲಿ ಕಾಣುತ್ತಿದ್ದೇವೆ. ನಮ್ಮ ದೇಶ ತಾಯಿಯನ್ನು ಪೂಜಿಸುವ ದೇಶವಾಗಿದೆ. ಹಲವಾರು ಧರ್ಮ ಗ್ರಂಥಗಳಲ್ಲಿ ತಾಯಂದಿರ ಪಾದದಲ್ಲಿ ಸ್ವರ್ಗವಿದೆ ಎಂದು ಹೇಳಲಾಗಿದೆ. ಅಷ್ಟೊಂದು ದೊಡ್ಡ ಸ್ಥಾನಮಾನ ತಾಯಿಗೆ ಇದೆ. ನಾವು ಎಲ್ಲಿಯ ವರೆಗೆ ಹೆಣ್ಣುಮಕ್ಕಳನ್ನು ಗೌರವಿಸುವುದಿಲ್ಲವೋ ಅಲ್ಲಿಯ ವರೆಗೆ ನಾವು ಒಳಿತನ್ನು ಕಾಣಲು ಅಸಾಧ್ಯ. ಹೆಣ್ಣು ಮಕ್ಕಳಿಗೆ ಗೌರವ ನೀಡಿದಾಗ ಮಾತ್ರ ನಾವು ಶುಖ ಶಾಂತಿ ನೆಮ್ಮದಿ ಕಾಣಬಹುದಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಉಮಾ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿದರು.ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರ್ದೇಶಕಿ ರೇವತಿ ಹಿರೇಮಠ, ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಇಒ ಬಿ.ಎಸ್. ಶಿಡೆನೂರ, ಪ್ರಮುಖರಾದ ಪ್ರೇಮಾ ಪಾಟೀಲ, ಎಂ.ಜೆ. ಮುಲ್ಲಾ, ರವಿ ಕರಿಗಾರ, ನಾಗಪ್ಪ ತಿಮ್ಮಾಪುರ, ರಮಾಕಾಂತ ಶೆಂಡಿಗೆ, ಶಂಕರ ಲಮಾಣಿ, ಬಾಷಾಸಾಬ್ ಅಂಗಡಿ ಪಾಲ್ಗೊಂಡಿದ್ದರು.
ಅಂಗನವಾಡಿ ಮೇಲ್ವಿಚಾರಕಿ ತೇಜಸ್ವಿನಿ ಕೊಂಡಿ ಕಾರ್ಯಕ್ರಮ ನಿರ್ವಹಿಸಿದರು.
ಗೃಹಲಕ್ಷ್ಮಿಯರಿಗೆ ಸನ್ಮಾನ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸೇರಿ ವಿವಿಧ ಗ್ರಾಮಗಳ ದೇವರಿಗೆ ಬೆಳ್ಳಿ-ಬಂಗಾರ ದೇಣಿಗೆ ನೀಡಿದ್ದಾರೆ. ಕುರುಬರಮಲ್ಲೂರ ಗ್ರಾಮದಲ್ಲಿ 30 ಗ್ರಾಂ ಬಂಗಾರ, 50 ಗ್ರಾಂ ಬೆಳ್ಳಿ ಆಭರಣವನ್ನು ಗ್ರಾಮದೇವಿಗೆ ನೀಡಿದ್ದಾರೆ. ಹೂವಿನಶಿಗ್ಲಿ ಗ್ರಾಮದ ಗವಿಸಿದ್ದೇಶ್ವರ ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಬೇವಿನಹಳ್ಳಿ ಗ್ರಾಮದಲ್ಲಿ 20 ಗ್ರಾಂ ಬಂಗಾರ ಆಭರಣ ಸೇರಿದಂತೆ ಸುಮಾರು ₹2 ಲಕ್ಷ ದೇಣಿಗೆ ಸಲ್ಲಿಸಿದ್ದಾರೆ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ತಾಲೂಕಿನ ಕಡಕೋಳ ಗ್ರಾಮದ ಅಂಗನವಾಡಿಯ ಗುರುಬಸಮ್ಮ ಯರೇಶಿಮಿ ಹಾಗೂ ಕಡಕೋಳ ಗ್ರಾಮದ ಯಲ್ಲವ್ವ ಮರಡೂರ ಅವರನ್ನು ಉತ್ತಮ ಅಂಗನವಾಡಿ ಶಿಕ್ಷಕರು ಎಂದು ಗುರುತಿಸಿ, ಸನ್ಮಾನಿಸಲಾಯಿತು.