ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಹಳ್ಳಿಯ ಮುಗ್ಧ ಕೂಲಿ ಕಾರ್ಮಿಕರಿಗೆ ಕಡಿಮೆ ಬಡ್ಡಿದರದಲ್ಲಿ ಸರ್ಕಾರಿ ಯೋಜನೆಯಡಿ ಸಾಲ ಕೊಡಿಸುವುದೆಂದು ಪುಲಾಯಿಸಿ ಲಕ್ಷಾಂತರ ರು. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಪೊಲೀಸರು ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ.ಈ ಪ್ರಕರಣದ ಬಗ್ಗೆ ಶುಕ್ರವಾರ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನುಭಾಗ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳು ಹಾಗೂ ಬ್ರಹ್ಮಾವರದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಹಾಗೂ ಓರ್ವ ಸಿಬ್ಬಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ಸಂತ್ರಸ್ತರಾದ ಮಂಜುನಾಥ, ರಾಮ ನಾಯ್ಕ, ಚಂದ್ರ ನಾಯ್ಕ, ಗೋಪಾಲ ನಾಯ್ಕ, ಗಣಪ ನಾಯ್ಕ, ದಿನೇಶ್ ನಾಯ್ಕ, ಮಹೇಶ ಮುಂತಾದವರೆಲ್ಲ ಕುಂದಾಪುರದ ಹೆಂಗವಳ್ಳಿ ಗ್ರಾಮದ ಅನಕ್ಷರಸ್ಥ ಕೃಷಿ ಕೂಲಿಕಾರ್ಮಿಕರಾಗಿದ್ದಾರೆ. ಈ ಪ್ರಕರಣದ ಮೊದಲ ಸಂತ್ರಸ್ತ ಮಂಜುನಾಥ, ಅವರಿಗೆ ಆರೋಪಿಗಳು ತಾವು ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸೊಸೈಟಿಯಲ್ಲಿ ಸದಸ್ಯರಾಗಿದ್ದು, ಸೊಸೈಟಿಯ ಮ್ಯಾನೇಜರ್ ಪರಿಚಯವಿದೆ. ಅವರ ಮೂಲಕ ಕಡಿಮೆ ಬಡ್ಡಿಗೆ ಸರ್ಕಾರಿ ಯೋಜನೆಗಳ ಸಾಲ ತೆಗೆಸಿ ಕೊಡುತ್ತೇವೆ ಎಂದು ನಂಬಿಸಿ, ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮುಂತಾದ ದಾಖಲೆಗಳೊಂದಿಗೆ ಅನೇಕ ಫಾರಂಗಳಲ್ಲಿ ಹಾಗೂ ಖಾಲಿ ಕಾಗದಗಳಲ್ಲಿ ಸಹಿ ಪಡೆದುಕೊಂಡರು. ಸೊಸೈಟಿಯ ಸದಸ್ಯತ್ವ ಕಾರ್ಡ್ ಮನೆಗೆ ಬರುತ್ತದೆ, ನಂತರ ಸಾಲ ಸಿಗುತ್ತದೆ ಎಂದು ಹೇಳಿದ್ದರು.
ಆದರೆ, ತಿಂಗಳು ಕಳೆದರೂ ಸದಸ್ಯತ್ವದ ಕಾರ್ಡ್ ಬರಲಿಲ್ಲ. ಬದಲಾಗಿ ಸೊಸೈಟಿಯಿಂದ ೨ ಲಕ್ಷ ರು. ಸಾಲಕ್ಕೆ ಕೂಡಲೇ ಬಡ್ಡಿ ಕಟ್ಟಬೇಕೆಂದು ನೊಟೀಸು ಬಂತು. ಈ ಬಗ್ಗೆ ಮಂಜುನಾಥ ಸೊಸೈಟಿಗೆ ಹೋಗಿ ಕೇಳಿದಾಗ ಅವರು ಸಾಲ ಪಡೆದಿರುವುದಕ್ಕೆ ದಾಖಲೆಗಳನ್ನು ತೋರಿಸಿದರು. ಗಾಬರಿಯಾದ ಮಂಜುನಾಥ ಬ್ರಹ್ಮಾವರ ಠಾಣೆಗೆ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ಸಂದರ್ಭದಲ್ಲಿ ಹೆಂಗವಳ್ಳಿ ಗ್ರಾಮದ ಅನೇಕ ಕೃಷಿ ಕೂಲಿ ಕಾರ್ಮಿಕರಿಗೆ ಇದೇ ರೀತಿ ಮೋಸವಾಗಿರುವುದು ಪತ್ತೆಯಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ನಾಲ್ಕೂ ಆರೋಪಿಗಳೂ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.ಈ ಮಧ್ಯೆ ಈ ಅಮಾಯಕರಿಗೆ ಸಾಲ ನೀಡಿದ ಬ್ರಹ್ಮಾವರದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸಾಲ ವಸೂಲಾತಿಗಾಗಿ ದೂರದ ಬೆಳಗಾವಿಯ ಸಹಕಾರಿ ದಾವಾ ಪಂಚಾಯ್ತಿ ನ್ಯಾಯಾಲಯದಲ್ಲಿ ದಾವೆಯನ್ನೂ ಹೂಡಿದೆ.ಈ ಬಗ್ಗೆ ಮಾಹಿತಿ ನೀಡಿದ ಡಾ.ರವಿಂದ್ರನಾಥ ಶ್ಯಾನುಭಾಗ್ ಅವರು ತಮ್ಮ ಪ್ರತಿಷ್ಠಾನ ಈ ಅಮಾಯಕರಿಗೆ ಮಾರ್ಗದರ್ಶನ ಮತ್ತು ಕಾನೂನು ನೆರವು ನೀಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರಾದ ಮಂಜುನಾಥ್ ನಾಯ್ಕ್, ರಾಮ ನಾಯ್ಕ, ಚಂದ್ರ ನಾಯ್ಕ ಮತ್ತಿತರರಿದ್ದರು.