ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಸರ್ಕಾರಿ ಅಧಿಕಾರಿಗಳು ಜನ ಪ್ರತಿನಿಧಿಗಳ ಸಹಿತ ಸಮಾಜವನ್ನು ಸರಿದಾರಿಗೆ ತರುವಲ್ಲಿ ಪತ್ರಿಕೋದ್ಯಮ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುವಲ್ಲಿ ವಿಫಲರಾದಲ್ಲಿ ಕಾನೂನಾತ್ಮಕವಾಗಿ ಬದಲಾವಣೆ ತರಲು ಪರ್ತಕರ್ತರು ಶ್ರಮಿಸುತ್ತಿದ್ದಾರೆ ಎಂದು ಇಲ್ಲಿನ ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಶ್ಲಾಘಿಸಿದರು.ಪಟ್ಟಣದ ಸುದ್ದಿಮನೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ, ಶಿಕ್ಷಣ ಸಹಿತ ಎಲ್ಲ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸದೆ ನಿರ್ಲಕ್ಷಿಸಿದಾಗ ಕಾನೂನಾ ತ್ಮಕವಾಗಿ ಬದಲಾವಣೆ ತರುವಲ್ಲಿ ಪರ್ತಕರ್ತರ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು.ರಾಜ್ಯ ಪ್ರಶಸ್ತಿ ಪುರಸ್ಕೃತ, ಸರ್ವಜ್ಞ ಪತ್ರಿಕೆ ಸಂಪಾದಕ ಎಸ್.ಬಿ ಮಠದ್ ಮಾತನಾಡಿ, ಪರ್ತಕರ್ತರು ನಿರ್ಭೀತಿಯಿಂದ ಆಳುವ ವರ್ಗ, ಅಧಿಕಾರಿ ವರ್ಗದ ತಪ್ಪುಗಳನ್ನು ಹುಡುಕಿ ತೆಗೆದು ಪ್ರಕಟಿಸಿದಾಗ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಪ್ರತಿಯೊಬ್ಬ ಪರ್ತಕರ್ತ ಸೀಮಿತ ಚೌಕಟ್ಟಿನಲ್ಲಿ ನೀತಿ ಸಂಹಿತೆ ಯನ್ನು ಬಿಟ್ಟು ನಡೆಯಬಾರದು ಎಂದು ಕಿವಿಮಾತು ಹೇಳಿದರು.ಪಟ್ಟಣ ಠಾಣೆ ಪಿಎಸ್ಸೈ ಕೋಮಲಾಚಾರ್ ಮಾತನಾಡಿ, ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿರುವ ಪತ್ರಿಕೋದ್ಯಮದ ಮೂಲಕ ಪರ್ತಕರ್ತರು ಪ್ರಾಮಾಣಿಕ ವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಬದಲಾವಣೆ ಸಾಧ್ಯ ಎಂದ ಅವರು, ಈಚೆಗೆ ಟಿವಿ, ಮೊಬೈಲ್ ಹಾವಳಿಯಿಂದ ಪತ್ರಿಕೆ ಒದುಗರ ಸಂಖ್ಯೆ ಕಡಿಮೆ ಯಾಗಿದ್ದು, ಆದರೆ ಪತ್ರಿಕೆಯ ಮಹತ್ವ ಪಾವಿತ್ರ್ಯತೆ ಮಾತ್ರ ಕಳೆದುಕೊಂಡಿಲ್ಲ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ತಾ.ಕಾ.ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಬಿ.ಎಲ್. ಮಾತನಾಡಿ, ನಂಬಿಕೆಯ ಮಾಧ್ಯಮವಾಗಿ ಮುದ್ರಣ ಮಾಧ್ಯಮ ಜನತೆಯ ವಿಶ್ವಾಸಗಳಿಸಿದ್ದು, ಇದನ್ನು ಪರ್ತಕರ್ತರು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಪರ್ತಕರ್ತ ಅಂಗಡಿ ರಾಮಣ್ಣ, ಎಸ್.ಬಿ.ಮಠದ್ ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಸಿ.ವೇಣು ಗೋಪಾಲ್‌ರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಹುಚ್ರಾಯಪ್ಪ, ವಿ.ಟಿ ಅರುಣ್, ಸೋಮನಾಥ್, ತಾ.ಉಸ್ತುವಾರಿ ದೀಪಕ್ ಸಾಗರ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಇ.ಎಚ್ ಬಸವರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ, ಎಸ್.ಎಸ್.ರಾಘವೇಂದ್ರ, ಮುಖಂಡ ಎಚ್.ಟಿ.ಬಳಿಗಾರ್, ಸಿದ್ದಲಿಂಗಪ್ಪ, ಭಂಡಾರಿ ಮಾಲತೇಶ್, ನಿವೃತ್ತ ಯೋಧ ಬಸವರಾಜ್, ಕಾಂಚನ ಕುಮಾರ್, ಪಾಪಯ್ಯ, ಮಹದೇವಾಚಾರ್, ಮಂಜಾಚಾರ್, ಸುಭಾಷಚಂದ್ರ ಸ್ಥಾನಿಕ್ ಉಪಸ್ಥಿತರಿದ್ದರು. ಅರುಣ್ ಕುಮಾರ್ ಪ್ರಾರ್ಥಿಸಿ, ನವೀನ್ ಸ್ವಾಗತಿಸಿ, ರಘು ನಿರೂಪಿಸಿ ವಂದಿಸಿದರು.ಓದುಗರ ಹಿತ ಕಾಯ್ವುದು ಸವಾಲಿನ ಕೆಲಸ: ಮಠದ್ಅಮೇರಿಕಾದಲ್ಲಿ ಪರ್ತಕರ್ತರಿಗೆ ಶಾಸನ ಬದ್ಧ ರಕ್ಷಣೆಯಿದ್ದು, ಈ ಸೌಲಭ್ಯದಿಂದ ಇಲ್ಲಿನ ಪರ್ತಕರ್ತರು ಹೊರತಾಗಿದ್ದಾರೆ. ದೈಹಿಕ ಹಲ್ಲೆ ಸಹಿತ ಎಲ್ಲ ರೀತಿಯ ನೋವನ್ನು ಅನುಭವಿಸಿ ಸಮಾಜ ಸರಿದಾರಿಗೆ ತರಲು ಪತ್ರಕರ್ತ ಶ್ರಮಿಸಬೇಕಾಗಿದೆ. ಪ್ರತಿಯೊಂದು ಪತ್ರಿಕೆ, ಪತ್ರಕರ್ತರಿಗೆ ಓದುವ ವರ್ಗ ಬಹುಮುಖ್ಯವಾಗಿದ್ದು, ಓದುಗರ ಹಿತ ಕಾಪಾಡಬೇಕಾಗಿರುವುದು ಸವಾಲಿನ ಕಾರ್ಯವಾಗಿದೆ ಎಂದ ಎಸ್.ಬಿ. ಮಠದ್ ಅಧಿಕಾರಿ ವರ್ಗ ಜನಪ್ರತಿನಿಧಿಗಳನ್ನು ಹಿಡಿದಿಟ್ಟುಕೊಳ್ಳುವ ಗಟ್ಟಿತನವನ್ನು ಪತ್ರಕರ್ತರು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.