ಸಮಾಜಕ್ಕೆ ಆರೋಗ್ಯವಂತ ಮಗು ಅವಶ್ಯ

| Published : Sep 14 2024, 01:49 AM IST

ಸಾರಾಂಶ

ಮಕ್ಕಳು ಬೆಳೆಯುವ ಹಂತದಲ್ಲಿಯೇ ಉತ್ತಮ ಆರೋಗ್ಯವಂತರಾಗಿ ಬೆಳೆದಲ್ಲಿ ಮಾತ್ರ ಅವರ ಮುಂದಿನ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಕ್ಕಳು ಬೆಳೆಯುವ ಹಂತದಲ್ಲಿಯೇ ಉತ್ತಮ ಆರೋಗ್ಯವಂತರಾಗಿ ಬೆಳೆದಲ್ಲಿ ಮಾತ್ರ ಅವರ ಮುಂದಿನ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತಾಲೂಕಾಡಳಿತ, ನಗರಸಭೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಆಹಾರ ಪದ್ಧತಿ ಮತ್ತು ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಮಕ್ಕಳಲ್ಲಿರುವ ಅಪೌಷ್ಟಿಕತೆ ತಡೆಯಲು ಸರಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಗರ್ಭಿಣಿ, ಬಾಣಂತಿಯರ ನಿರ್ವಹಣೆಗೆ ಸಹ ಸೌಲಭ್ಯಗಳಿದ್ದು, ಅವುಗಳನ್ನು ತಲುಪಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದ್ದಾಗಿದೆ. ಮಗು ಹುಟ್ಟುವ ಪೂರ್ವ ಹಾಗೂ ನಂತರದಲ್ಲಿ ಏನು ಕೊಡಬೇಕು ಎಂಬುವುದನ್ನು ತಿಳಿಯಬೇಕಿದೆ. ಸರಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು. ಅಂದಾಗ ಮಾತ್ರ ಪೋಷಣ್‌ ಅಭಿಯಾನದ ಉದ್ದೇಶ ಸಫಲವಾಗುತ್ತದೆ ಎಂದರು.

ತಜ್ಞೆ ಡಾ.ರಮೀತ ಬಿ.ಇ ಮಾತನಾಡಿ, ಗರ್ಭಾವಸ್ಥ ಮಹಿಳೆಗೆ ಪೌಷ್ಟಿಕ ಆಹಾರದ ಅವಶ್ಯಕತೆ ಇದ್ದು, ಮನೆಯಲ್ಲಿ ಉಪಯುಕ್ತವಾಗ ಪದಾರ್ಥಗಳನ್ನು ಬಳಸಿಕೊಂಡು ನಿಯಮಿತ ಸಮಯದಲ್ಲಿ ಸೇವಿಸುತ್ತಾ ಬಂದಲ್ಲಿ ಮಗುವಿನ ಜೊತೆಗೆ ತಾಯಿ ಸಹ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ಕಲಬೆರಕೆ ಆಹಾರ, ವಿಶ್ರಾಂತಿ ರಹಿತ ಜೀವನ ಇವುಗಳಿಂದ ಅಶಕ್ತತೆ ಉಂಟಾಗುವುದು. ಜಾಹೀರಾತುಗಳಿಗೆ ಮಾರು ಹೋಗಿ ರಾಸಾಯನಿಕ ಯುಕ್ತ ಔಷಧಿಗಳನ್ನು ಸೇವಿಸುವುದು ಕೂಡಾ ಒಳ್ಳೆಯದಲ್ಲ ಎಂದರು.

ಜಿಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಮಾತನಾಡಿ, ಈ ಪೋಷಣ್‌ ಅಭಿಯಾನದ ಉದ್ದೇಶ ಮಕ್ಕಳಿಗಾಗಿ, ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ಕೊಡಬೇಕಾಗಿರುವುದು ಅವಶ್ಯ ಏಕೆಂದರೆ, ಪೋಷಕಾಂಶ ಮಕ್ಕಳ ಬೆಳೆವಣಿಗೆಗೆ ಸಹಕಾರಿಯಾದರೆ ಹದಿಹರೆಯದ ಹೆಣ್ಣು ಮಕ್ಕಳು ಮದುವೆಯಾಗಿ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ರಕ್ತಸ್ರಾವದಿಂದ ಬಳಲಬಾರದೆಂಬ ಉದ್ದೇಶದಿಂದ ಸರಕಾರ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಿರದೇ ನಿರಂತರ ಈ ಕಾರ್ಯ ಮುಂದುವರೆಯಬೇಕಾಗಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ 5 ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಪ್ರಭಾಕರ, ನಿರೂಪನಾಧಿಕಾರಿ ಮಂಜುನಾಥ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಮೇಶ ಸೂಳಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ವಿವಿಧ ಪೌಷ್ಟಿಕ ಆಹಾರ ಪದಾರ್ಥಗಳ ಪ್ರದರ್ಶನ ಮಾಡಲಾಯಿತು.

---ಕೋಟ್‌

ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯವನ್ನು ಖಾತ್ರಿಪಡಿಸುವ ಸಲುವಾಗಿ ಉತ್ತಮ ಪೋಷಣೆ ಅತೀ ಅವಶ್ಯವಾಗಿದೆ. ಇದರಿಂದ ಸದೃಢ ಮಕ್ಕಳು, ಸದೃಢ ಭಾರತವನ್ನು ನಿರ್ಮಿಸಲು ಸಾಕಾರವಾಗುತ್ತದೆ. ಅಂಗನವಾಡಿಯಲ್ಲಿ ಮಗುವಿಗೆ ನೀಡುವ ಆಹಾರ ಚಟವಟಿಕೆಗಳು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸದೃಢರನ್ನಾಗುವಂತೆ ಮಾಡಿ ಅವರ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ.

-ಚಂದ್ರಶೇಖರ ದಿಡ್ಡಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ