ಬರೆಯುವ ಕೈಗಳಿಗೆ ಸತ್ಯ ಹೇಳುವ ಧೈರ್ಯವಿರಬೇಕು. ಕೇಳುವ ಕಿವಿಗೆ ವಿಮರ್ಶೆ ಸ್ವೀಕರಿಸುವ ಸಂಯಮವಿರಬೇಕು. ಸಾಹಿತ್ಯದ ಕೊಂಡಿ ಕಳಚುತ್ತಿರುವ ಹೊತ್ತಿನಲ್ಲಿ ಮಾರ್ಗದರ್ಶನ ಮಾಡುವ ಸಾಹಿತ್ಯ ಕೃಷಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿಶ್ರಾಂತ ಕುಲಪತಿ ಡಾ. ಸಬಿಹಾ ಭೂಮಿಗೌಡ ಹೇಳಿದರು.
ಧಾರವಾಡ:
ಸಾಹಿತ್ಯ ಕೇವಲ ಸೃಜನಶೀಲ ಬರವಣಿಗೆಯಷ್ಟೇ ಅಲ್ಲ, ವಾಸ್ತವವನ್ನು ತೆರೆದಿಡುವ ಗಂಭೀರ ಸಂಶೋಧನೆ ಮಾಡಬೇಕು. ಸಾಹಿತ್ಯಿಕ ಚರ್ಚೆ ಕೇವಲ ಸಭಾಂಗಣಕ್ಕೆ ಸೀಮಿತವಾಗದೆ ಸಾಮಾನ್ಯ ಜನರನ್ನು ತಲುಪಬೇಕು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಡಾ. ಸಬಿಹಾ ಭೂಮಿಗೌಡ ಹೇಳಿದರು.ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಭವನದಲ್ಲಿ ಧಾರವಾಡ ಜಿಲ್ಲಾ 18ನೇ ಸಾಹಿತ್ಯ ಸಮ್ಮೇಳನಕ್ಕೆ ಸೋಮವಾರ ಚಾಲನೆ ನೀಡಿದ ಅವರು, ಬರೆಯುವ ಕೈಗಳಿಗೆ ಸತ್ಯ ಹೇಳುವ ಧೈರ್ಯವಿರಬೇಕು. ಕೇಳುವ ಕಿವಿಗೆ ವಿಮರ್ಶೆ ಸ್ವೀಕರಿಸುವ ಸಂಯಮವಿರಬೇಕು. ಸಾಹಿತ್ಯದ ಕೊಂಡಿ ಕಳಚುತ್ತಿರುವ ಹೊತ್ತಿನಲ್ಲಿ ಮಾರ್ಗದರ್ಶನ ಮಾಡುವ ಸಾಹಿತ್ಯ ಕೃಷಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜತೆಗೆ ಸಮಾಜದಲ್ಲಿ ಆಗುತ್ತಿರುವ ಅನೇಕ ಅಸಂವಿಧಾನಿಕ ಕೃತ್ಯಗಳನ್ನು ಸಾಹಿತ್ಯ ಕ್ಷೇತ್ರ ಕಟುವಾಗಿ ಟೀಕಿಸಬೇಕೆಂದರು.
ಸಾಹಿತ್ಯ ಚರಿತ್ರೆಯಲ್ಲಿ ಮಹಿಳಾ ಸಂವೇದನೆಗಳು ಇಂದು ಹೊಸ ಆಯಾಮ ಪಡೆಯುತ್ತಿವೆ. ಸ್ತ್ರೀವಾದಿ ಚಿಂತನೆಗಳು ಕೇವಲ ಪ್ರತಿರೋಧವಲ್ಲ, ಅವು ಸಮಾನತೆಯ ಹಾದಿ ತೋರಿಸುವ ಬೆಳಕು. ಸದಾ ಪ್ರಜ್ಞಲಿಸಬೇಕು. ಜಾಗತಿಕವಾಗಿ ತಲ್ಲಣ ಸೃಷ್ಟಿಸಿದ ಇರಾನ್-ಅಮೆರಿಕ-ಇಸ್ರೇಲ್ ಯುದ್ಧದಿಂದ ಅನೇಕ ಅಮಾಯಕ ಮುಗ್ಧ ಜೀವಗಳ ಕಗ್ಗೊಲೆ ನೋವಿನ ಸಂಗತಿ. ಇದರ ಬಗ್ಗೆ ಪ್ರತಿರೋಧ ಒಡ್ಡಬೇಕು ಎಂದ ಅವರು, ನೊಂದವರ ಪರ, ಇತರರ ನೋವು-ನಲಿವು, ಕಷ್ಟಕ್ಕೂ ಸಾಹಿತ್ಯ ಹಾಗೂ ಸಾಹಿತಿಗಳು ಗಟ್ಟಿಯಾಗಿ ಧ್ವನಿ ಎತ್ತಿ, ಯುವ ಜನರಲ್ಲಿ ಅನುಭೂತಿ ಬೆಳೆಸುವಲ್ಲಿ ಇಂತಹ ಸಮ್ಮೇಳನಗಳು ದಾರಿಯಾಗಬೇಕು ಎಂದರು.ಸಮ್ಮೇಳನಾಧ್ಯಕ್ಷೆ ಡಾ. ಹೇಮಾ ಪಟ್ಟಣಶೆಟ್ಟಿ ಅವರ 36 ಕೃತಿಗಳನ್ನು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ.ಸೋಮಶೇಖರ ಬಿಡುಗಡೆಗೊಳಿಸಿದರು. ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಧಾರವಾಡದ ಕೊಡುಗೆ ಅಪಾರ. ಕನ್ನಡ ಉಳಿಸಲು, ಪಾಲಿಕೆ ಕನ್ನಡ ಮಾಧ್ಯಮದಲ್ಲಿ ಓದಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಗೆ ₹ 25 ಸಾವಿರ ಪ್ರೋತ್ಸಾಹ ಧನ ನೀಡಲು ಘೋಷಿಸಿದೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಸ್.ಆರ್. ಗುಂಜಾಳ ಇದ್ದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಬಿ. ಮಾರುತಿ, ಶಂಕರ ಹಲಗತ್ತಿ, ನಿಂಗಯ್ಯ ಹಿರೇಮಠ, ಪ್ರಮೀಳಾ ಜಕ್ಕಣ್ಣವರ, ಮಹಾಂತೇಶ ನರೇಗಲ್ಲ ಇದ್ದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಪ್ರೊ. ಕೆ.ಎಸ್. ಕೌಜಲಗಿ ನಿರೂಪಿಸಿದರು. ಡಾ. ಎಸ್.ಎಸ್. ದೊಡಮನಿ ವಂದಿಸಿದರು.ಜಿಲ್ಲಾಡಳಿತಕ್ಕೆ ಅಂಗಡಿ ಎಚ್ಚರಿಕೆ!
ಕನ್ನಡ ಸಾಹಿತ್ಯ ಪರಿಷತ್ ಭವನ ಸೋರುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗೆ, ಶಾಸಕರಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಈ ನಡೆ ಬಹಳಷ್ಟು ನೋವು ತರಿಸಿದೆ. 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಉಳಿದಿರುವ ₹27 ಲಕ್ಷ ಅನುದಾನ ಸಾಹಿತ್ಯ ಪರಿಷತ್ತಿಗೆ ಜಮೆ ಮಾಡಬೇಕು. ಇಲ್ಲದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.ಸಮ್ಮೇಳನಕ್ಕೆ ಮೆರುಗು ತಂದ ಮೆರವಣಿಗೆಇದಕ್ಕೂ ಮುಂಚೆ ಕಸಾಪ ಸರ್ವಾಧ್ಯಕ್ಷೆ ಡಾ. ಹೇಮಾ ಪಟ್ಟಣಶೆಟ್ಟಿ ಹಾಗೂ ಸಿದ್ಧಲಿಂಗ ಪಟ್ಟಣಶೆಟ್ಟಿ ದಂಪತಿ ಭವ್ಯ ಮೆರವಣಿಗೆ ನಡೆಯಿತು. ಬಿಳಿ ಹೂವಿನ ಸೀರೆ ತೊಟ್ಟ ಡಾ. ಹೇಮಾ ಪಟ್ಟಣಶೆಟ್ಟಿ, ಸಫಾರಿ ಧರಿಸಿದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಕನ್ನಡ ಧ್ವಜ ಹಿಡಿದು ಅಲಂಕೃತ ತೆರೆದ ಸಾರೋಟ ಏರಿ ಕುಳಿತ ಬಳಿಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಜಗ್ಗಲಿಗಿ ಮೇಳ, ಡೊಳ್ಳು ಕುಣಿತ, ಮಹಿಳೆಯರ ಪೂರ್ಣಕುಂಭ, ಸಕಲ ವಾದ್ಯ ಮೇಳಗಳು ಮೆರುಗು ತುಂಬಿದವು. ನಾಡದೇವಿ ಭುವನೇಶ್ವರಿ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಕನ್ನಡಪರ ಜಯಘೋಷ ಮೊಳಗಿದವು.