ಸಮಾಜಕ್ಕೆ ಮಠಾಧೀಶರ ಮಾರ್ಗದರ್ಶನ ಅಗತ್ಯ: ಶಿವಾನಂದ ಶಿವಾಚಾರ್ಯ

| Published : Nov 11 2024, 12:50 AM IST

ಸಮಾಜಕ್ಕೆ ಮಠಾಧೀಶರ ಮಾರ್ಗದರ್ಶನ ಅಗತ್ಯ: ಶಿವಾನಂದ ಶಿವಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರದಲ್ಲಿ ಅಟವಿ ಮಹಾಸ್ವಾಮಿಗಳ 124ನೇ ಪುಣ್ಯಸ್ಮರಣೋತ್ಸವ, ಮಠಾಧ್ಯಕ್ಷ ಅಟವೀ ಶಿವಲಿಂಗ ಸ್ವಾಮೀಜಿಗಳ ಪೀಠಾರೋಹಣ ರಜತ ಮಹೋತ್ಸವ ಹಾಗೂ ಅಟವಿ ಮಲ್ಲಿಕಾರ್ಜುನ ದೇವರ ನಿರಂಜನ ನಿರಾಭಾರಿ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಭಾನುವಾರ ಧರ್ಮಸಭಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರುತಾಲೂಕಿನ ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರದಲ್ಲಿ ಅಟವಿ ಮಹಾಸ್ವಾಮಿಗಳ 124ನೇ ಪುಣ್ಯಸ್ಮರಣೋತ್ಸವ, ಮಠಾಧ್ಯಕ್ಷ ಅಟವೀ ಶಿವಲಿಂಗ ಸ್ವಾಮೀಜಿಗಳ ಪೀಠಾರೋಹಣ ರಜತ ಮಹೋತ್ಸವ ಹಾಗೂ ಅಟವಿ ಮಲ್ಲಿಕಾರ್ಜುನ ದೇವರ ನಿರಂಜನ ನಿರಾಭಾರಿ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಭಾನುವಾರ ಧರ್ಮಸಭಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಶ್ರೀ ಮಠದ ಅಟವಿ ಶಿವಲಿಂಗ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳು ಹಾಗೂ ಸಾಸನೂರು ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ನೇತೃತ್ವ ವಹಿಸಿದ್ದರು. ನಂತರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾ ಪೂಜೆ ಹಮ್ಮಿಕೊಳ್ಳಲಾಗಿತ್ತು.ನಂತರ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ನಡೆದ ಧರ್ಮಸಭಾ ಕಾರ್ಯಕ್ರಮವನ್ನು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಹಿರೇಮಠ ಶ್ರೀಗಳು, ಅಟವಿ ಶಿವಲಿಂಗ ಸ್ವಾಮೀಜಿಗಳು ಕಳೆದ 25 ವರ್ಷಗಳಿಂದ ಮಠದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ಈ ಭಾಗದಲ್ಲಿ ಮರೆಯಾಗಿರುವ ಪುರಾಣ, ಪ್ರವಚನ ಪರಂಪರೆಯನ್ನು ಸೃಷ್ಟಿಸಿದ ಕೀರ್ತಿ ಸ್ವಾಮೀಜಿಗಳಿಗೆ ಸಲ್ಲಬೇಕು ಎಂದರು.

79 ನೇ ವಯಸ್ಸು ಸಂದಿರುವ ಸಂದರ್ಭದಲ್ಲಿ ಸ್ವಾಮೀಜಿಗಳು ಮಠಕ್ಕೆ ಸಮರ್ಥ ಉತ್ತರಾಧಿಕಾರಿಯನ್ನು ನೇಮಕ ಮಾಡಿದ್ದಾರೆ. ನಾಳೆ ಅಟವಿ ಶಿವಲಿಂಗ ಸ್ವಾಮೀಜಿಗಳು ಮಲ್ಲಿಕಾರ್ಜುನ ದೇವರಿಗೆ ತಮ್ಮ ಗುರುತ್ವವನ್ನು ಧಾರೆ ಎರೆಯಲಿದ್ದಾರೆ ಎಂದು ಹೇಳಿದರು. ನಾವು ಧಾರ್ಮಿಕ ಸಂಕಷ್ಟ ಕಾಲದಲ್ಲಿದ್ದೇವೆ. ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸ್ವಾಮೀಜಿಗಳ ಪಾತ್ರ ಪ್ರಮುಖವಾಗಿದೆ. ಜನಗಣತಿಯಂತೆ ಮನೆಮನೆಯಲ್ಲೂ ದೀಕ್ಷಾ ಗಣತಿ ಮಾಡಬೇಕಾದ ಅಗತ್ಯವಿದೆ. ಲಿಂಗ ದೀಕ್ಷೆ ಕಡ್ಡಾಯ ಮಾಡಬೇಕಾಗಿದೆ. ಸ್ವಾಮೀಜಿಗಳು ಭಕ್ತರ ಮನೆ ಹೊಕ್ಕು ಲಿಂಗ ದೀಕ್ಷೆ ಮಾಡಿಸಬೇಕು ಎಂದು ಸಲಹೆ ಮಾಡಿದರು.ಈಗ ತ್ರಿಕಾಲ ಪೂಜೆ ಮಾಡುವವರಿಲ್ಲ, ಕನಿಷ್ಟ ವಾರಕ್ಕೊಮ್ಮೆ ಸಾಮೂಹಿಕ ಶಿವಪೂಜೆ ಮಾಡುವಂತಹ ಪದ್ದತಿ ಅನುಸರಿಸಬೇಕು. ಮಠಗಳಲ್ಲಿ ಇಂತಹ ಪೂಜೆಗೆ ವ್ಯವಸ್ಥೆಯಾಗಬೇಕು. ಈ ಮೂಲಕ ನಮ್ಮ ಆಚಾರ, ವಿಚಾರ ಸಂಪ್ರದಾಯ, ಪರಂಪರೆಯನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಹಸಿದವರಿಗೆ ಅನ್ನ ಇಕ್ಕುವುದು, ಜ್ಞಾನ ನೀಡುವುದು ನಮ್ಮ ಮಠಗಳ ಪರಂಪರೆ. ಜಗತ್ತಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಭರತ ಖಂಡ ಧಾರ್ಮಿಕ ಬೀಡು. ಹಲವಾರು ಧರ್ಮಗಳು ತಮ್ಮ ಧರ್ಮ ಪ್ರಚಾರಕ್ಕಾಗಿ ಶ್ರದ್ಧಾಕೇಂದ್ರ ಸ್ಥಾಪಿಸಿ ನಾಡಿನುದ್ದಕ್ಕೂ ಪ್ರಚಾರ ಮಾಡುತ್ತಿವೆ. ನಮ್ಮ ರಾಜ್ಯದಲ್ಲಿ ಅನೇಕ ಮಠಗಳು ಸಮಾಜದ ಜೀವನಾಡಿಯಾಗಿರುವ ವಿಶೇಷ ಪರಂಪರೆ ಹೊಂದಿವೆ ಎಂದರು. ಅಟವಿ ಶಿವಲಿಂಗ ಸ್ವಾಮೀಜಿ ಮಾತನಾಡಿ, ಈಗಿನವರಿಗೆ ಧರ್ಮ ಶ್ರದ್ಧೆ ಕಡಿಮೆಯಾಗಿದೆ. ನಮ್ಮ ಆಚಾರವಿಚಾರಗಳನ್ನು ಮರೆಯುತ್ತಿದ್ದಾರೆ. ನಮ್ಮ ಆಚಾರ, ಪದ್ದತಿ, ಸಂಸ್ಕಾರ, ಪರಂಪರೆಯ ಮಹತ್ವವನ್ನು ಹಿರಿಯರು ಮಕ್ಕಳಿಗೆ ತಿಳಿಸಬೇಕು. ಸ್ವಾಮೀಜಿಗಳು ಭಕ್ತರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಅಟವೀ ಮಠಕ್ಕೆ ಉತ್ತರಾಧಿಕಾರಿಯಾಗಿ ಮಲ್ಲಿಕಾರ್ಜುನ ದೇವರನ್ನು ನೇಮಿಸಲಾಗಿದೆ. ಇವರನ್ನು ಭಕ್ತರ ಮಡಿಲಿಗೆ ಹಾಕುತ್ತಿದ್ದೇವೆ ಭಕ್ತಿಯ ಹಾಲು ಕುಡಿಸಿ ಶಕ್ತಿ ತುಂಬಿರಿ ಎಂದರು.ಸೋಮವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ನಿರಾಭಾರಿ ನಿರಂಜನ ಜಂಗಮ ದೀಕ್ಷೆ ಚಿನ್ಮಯಿ ಅನುಗ್ರಹ ಕಾರ್ಯಕ್ರಮ ನಡೆಯಲಿದೆ. ಅಟವಿ ಶಿವಲಿಂಗ ಸ್ವಾಮೀಜಿಗಳ ಅಧ್ಯಕ್ಷತೆಯ ಈ ಕಾರ್ಯಕ್ರಮದಲ್ಲಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ತಾಳಗುಪ್ಪ ಮಠದ ಸಿದ್ಧವೀರ ಸ್ವಾಮೀಜಿ, ಅರಕೆರೆಮಠದ ಶಿವಲಿಂಗಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಗುಡ್ಡದ ಆನ್ವೇರಿ ಮಠದ ಶಿವಯೋಗೀಶ್ವರ ಸ್ವಾಮೀಜಿಗಳ ಪೌರೋಹಿತ್ಯದಲ್ಲಿ ಮಲ್ಲಿಕಾರ್ಜುನ ದೇವರಿಗೆ ಚಿನ್ಮಯ ಅನುಗ್ರಹ ನೀಡಲಾಗುವುದು.

ಸಾಸನೂರು ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅರಕೆರೆ ಮಠದ ಶಿವಲಿಂಗ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಗುಡ್ಡದಾನ್ವೇರಿ ಮಠದ ಶಿವಯೋಗೀಶ್ವರ ಸ್ವಾಮೀಜಿ, ಅಟವಿ ಮಲ್ಲಿಕಾರ್ಜುನ ದೇವರು,ತುಮಕೂರು ನಗರ ವೀರಶೈವ ಸಮಾಜ ಅಧ್ಯಕ್ಷ, ಮಠದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಟಿ.ಬಿ.ಶೇಖರ್, ಮಠದ ಆಡಳಿತ ಮಂಡಳಿ ಟ್ರಸ್ಟಿಗಳಾದ ಸಿ.ಮಹದೇವಪ್ಪ, ಬೆಟ್ಟಯ್ಯ, ಜಗದೀಶ್ಚಂದ್ರ, ರವಿಶಂಕರ್, ಮಂಜುನಾಥ್ ಬದ್ನಾಳ್, ಮುಖಂಡರಾದ ಕೋರಿ ಮಂಜುನಾಥ್, ಟಿ.ಸಿ.ಓಹಿಲೇಶ್ವರ್, ಅತ್ತಿರೇಣುಕಾನಂದ, ಶಿವಕುಮಾರ್, ಶಿವಲಿಂಗಮ್ಮ, ಹೆಬ್ಬಾಕ ಮಲ್ಲಿಕಾರ್ಜುನ್, ನಂಜಯ್ಯ,ರಾಜೇಂದ್ರಕುಮಾರ್, ವಿಶ್ವನಾಥ್ ಅಪ್ಪಾಜಪ್ಪ, ಚಂದ್ರಶೇಖರ್, ಟಿ.ಆರ್.ಅನುಸೂಯಮ್ಮ, ಬಾಲಚಂದ್ರ, ಶ್ರೀಧರ್ ಮೊದಲಾದವರು ಭಾಗವಹಿಸಿದ್ದರು.