ಪ್ರೊ.ಜಯಪ್ರಕಾಶ್ ಗೌಡರಂತಹ ವ್ಯಕ್ತಿಗಳು ಸಮಾಜಕ್ಕೆ ಅಗತ್ಯ: ನಿರ್ಮಲಾನಂದನಾಥ ಸ್ವಾಮೀಜಿ

| Published : Feb 17 2025, 12:30 AM IST

ಸಾರಾಂಶ

ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ, ಜಗತ್ತಿನಲ್ಲಿ ಯಾವ ಯಾವ ವಿವಿಧ ಮಜಲುಗಳು ಇವೆಯೆ ಅವುಗಳು ಮಾಸದೆ ನಿಂತ ನೀರಾಗದೆ ಸದಾ ಚಲಿಸುವಂತೆ ಆಗಬೇಕಾದರೆ ಒಂದು ಪರಂಪರೆಯಿಂದ ಇನ್ನೊಂದು ಪರಂಪರೆಗೆ ರವಾನಿಸಬೇಕಾದರೆ ಪ್ರೊ.ಜೆಪಿಯಂತಹ ವ್ಯಕ್ತಿಗಳು ಸೃಷ್ಠಿಯಾಗಬೇಕು. ಇಲ್ಲದಿದ್ದರೆ ಎಲ್ಲವೂ ಅಳಿದು ಹಾಳಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜ್ಞಾನ ಪರಂಪರೆ, ವಿಜ್ಞಾನ ಪರಂಪರೆ ಯಾವುದು ಮಾಸದೆ, ನಿಂತ ನೀರಾಗದೆ ಸದಾ ಚಲಿಸುವಂತಾಗಲು ಪ್ರೊ.ಜಯಪ್ರಕಾಶ್ ಗೌಡರಂತಹ ವ್ಯಕ್ತಿಗಳು ಸಮಾಜಕ್ಕೆ ಅಗತ್ಯವಿದೆ ಎಂದು ಆದಿಚುಂಚನಗಿರಿ ಶ್ರೀಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರಥಮ ವರ್ಷದ ಪ್ರೊ.ಜಯಪ್ರಕಾಶ್ ಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ, ಜಗತ್ತಿನಲ್ಲಿ ಯಾವ ಯಾವ ವಿವಿಧ ಮಜಲುಗಳು ಇವೆಯೆ ಅವುಗಳು ಮಾಸದೆ ನಿಂತ ನೀರಾಗದೆ ಸದಾ ಚಲಿಸುವಂತೆ ಆಗಬೇಕಾದರೆ ಒಂದು ಪರಂಪರೆಯಿಂದ ಇನ್ನೊಂದು ಪರಂಪರೆಗೆ ರವಾನಿಸಬೇಕಾದರೆ ಪ್ರೊ.ಜೆಪಿಯಂತಹ ವ್ಯಕ್ತಿಗಳು ಸೃಷ್ಟಿಯಾಗಬೇಕು. ಇಲ್ಲದಿದ್ದರೆ ಎಲ್ಲವೂ ಅಳಿದು ಹಾಳಾಗುತ್ತದೆ ಎಂದರು.

ಪ್ರೊ.ಜೆಪಿ ಅವರ ಒಳಗಡೆ ಕಟು ಮನಸ್ಸಿನವರಾದರೂ ಹೊರಗೆ ಅವರ ಕಾಳಜಿ, ಜಡ್ಡುಗಟ್ಟಿದ ಸಮಾಜಕ್ಕೆ ಚಾಲಕ ಶಕ್ತಿ ಕೊಡುವ ಹಂಬಲ ನನಗೆ ಇಷ್ಟವಾಗಿದೆ. ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂಬ ಹಂಬಲ ಅವರಲ್ಲಿದೆ ಎಂದು ತಿಳಿಸಿದರು.

ಪ್ರೊ.ಜೆಪಿ ಅವರಿಗೆ ಯಾವುದೋ ಕಾಯಿಲೆ ಬಂದಿತ್ತೋ. ಇವರಲ್ಲಿರುವ ಹಂಬಲ, ಅದಮ್ಯ ಬುದ್ಧಿ ಶಕ್ತಿಯೂ ಕೂಡ ಈ ವ್ಯಕ್ತಿ ಇಲ್ಲೆ ಇದ್ದು ಇನ್ನಷ್ಟು ಸಮಾಜಕ್ಕೆ ಕೆಲಸ ಮಾಡಬೇಕು ಎಂದು ಸಾವು ಕೂಡ ಇನ್ನಷ್ಟು ಕಾಲ ದಾರಿ ಕೊಟ್ಟು ಹೋಗಿದೆ. ಅವರು ಕಾಯಿಲೆ ಅಲ್ಲ ಯಮನನ್ನು ಜಯಿಸಿದ ಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.

15 ರಿಂದ 20 ವರ್ಷಗಳ ಹಿಂದೆ ನಾನು ಚಿಕ್ಕಬಳ್ಳಾಪುರ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಪ್ರೊ.ಜಯಪ್ರಕಾಶ್ ಗೌಡರನ್ನು ನೋಡಿದ್ದೇನೆ. ಅವರಲ್ಲಿನ ನಿಖರ, ನಿರ್ಭೀತಿಯ ಮಾತುಕತೆ ನನಗೆ ಇಷ್ಟವಾಗಿತ್ತು. ಈಗ 75 ವರ್ಷ ತುಂಬಿದೆ. ಅವರ ಸಂತೋಷ, ಜ್ಞಾನ, ಪರಂಪರೆ ನಿಲ್ಲದೆ ಮುಂದುವರೆಯಬೇಕು. ಇಂತಹವರು 100 ವರ್ಷಗಳ ಜೀವನ ಪೂರೈಸಬೇಕು ಎಂದು ಹಾರೈಸಿದರು.

ಇದೇ ವೇಳೆ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಬೆಂಗಳೂರು ಜಲಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಂ ರಾಯಪುರ ಅವರಿಗೆ ಪ್ರೊ.ಜಯಪ್ರಕಾಶ್ ಗೌಡ ಸಂಘಟನಾ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿಯನ್ನು ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಅವರಿಗೆ ತಲಾ 50 ಸಾವಿರ ರು ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಸದಸ್ಯರಾದ ಬಿ.ರಾಮಕೃಷ್ಣ, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಕೆ.ಎಸ್.ಮಂಜುಳಾ ಪ್ರೊ.ಜಯಪ್ರಕಾಶ್ ಗೌಡ, ತಗ್ಗಹಳ್ಳಿ ವೆಂಕಟೇಶ್, ವಿಜಯಲಕ್ಷ್ಮಿ ರಘುನಂದನ್ ಸೇರಿದಂತೆ ಕರ್ನಾಟಕ ಸಂಘದ ಪದಾಧಿಕಾರಿಗಳು ಇದ್ದರು.