ಸಾರಾಂಶ
ಹುಬ್ಬಳ್ಳಿ:
ವಿಕಲಚೇತನರನ್ನು ಸಮಾಜದಲ್ಲಿ ಗುರುತಿಸುವ ಕೆಲಸವಾಗಬೇಕು. ಉತ್ತಮ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು ಎಂದು ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಜೀತೇಂದ್ರ ಮಜೇಥಿಯಾ ಹೇಳಿದರು.ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಜಿಲ್ಲಾಡಳಿತ, ಜಿಪಂ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಅದಮ್ಯ ಚೇತನ ಫೌಂಡೇಶನ್, ಮಜೇಥೀಯಾ ಫೌಂಡೇಶನ್, ಹುಬ್ಬಳ್ಳಿ ಸಕ್ಷಮ ಕರ್ನಾಟಕ ಉತ್ತರ ಪ್ರಾಂತ, ಆಶಾಕಿರಣ ಕಿಮ್ಸ್ ಹುಬ್ಬಳ್ಳಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ "ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ " ವಿಶ್ವ ಸಂಸ್ಥೆಯ ಘೋಷವಾಕ್ಯದಡಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ಫೌಂಡೇಶನ್ ವತಿಯಿಂದ ವಿಶೇಷಚೇತನರಿಗೆ ಕೃತಕ ಅಂಗಾಂಗ ಜೋಡಣೆ ಸಲಕರಣೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.ಐ.ಕೆ. ಲಕ್ಕುಂಡಿ ಮಾತನಾಡಿ, ಜಿಲ್ಲೆಯಲ್ಲಿ ಕೌಶಲ್ಯ ಕೇಂದ್ರ ಸ್ಥಾಪನೆ, ವಿಶೇಷಚೇತನರಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವುದು, ತರಬೇತಿ ಕೇಂದ್ರ ಸ್ಥಾಪನೆ, ಹೆಚ್ಚಿನ ಸಾಲಸೌಲಭ್ಯ ಕಲ್ಪಿಸುವುದು, ಸಂಗೀತ ಶಾಲೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ವಕೀಲ ಎಸ್.ಎಸ್. ಪಾಟೀಲ, ಸೆಲ್ಕೋ ಕಂಪನಿಯ ಮ್ಯಾನೇಜರ್ ರಾಜೇಂದ್ರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆ. ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಇಕ್ವಿಪ್ ಇಂಡಿಯಾದ ವಿಜಯ, ಡಿ.ಡಿ. ಮೇಚಣ್ಣವರ, ತಾರಾ ಫರ್ನಾಂಡಿಸ್, ರಾಜಕುಮಾರ, ಕವಿತಾ ಮೇಗೂರು, ವಿಜಯ ಹಿರೇಮಠ, ಅಶೋಕ ಜೋಶಿ, ಜೆ.ಕೆ. ಪಾಸ್ತೆ, ಪಿ.ವಿ. ದತ್ತಿ, ರೇಖಾ, ಎಂ.ಆರ್.ಡಬ್ಲ್ಯೂ ಚನ್ನಮ್ಮ, ಎಂ.ಆರ್.ಜಿ. ರೇಣುಕಾ, ಮಹಾಂತೇಶ ಕುರ್ತಕೋಟಿ ಸೇರಿದಂತೆ ಹಲವರಿದ್ದರು.ಗಮನ ಸೆಳೆದ ಮಕ್ಕಳ ನೃತ್ಯ
ವಿಶೇಷಚೇತನ ವಿದ್ಯಾರ್ಥಿಗಳು ತಮ್ಮ ನೃತ್ಯಗಳ ಮೂಲಕ ನೋಡುಗರ ಗಮನ ಸೆಳೆದರು. ಆಂಜನೇಯನ ಮಹಿಮೆ, ವಿಘ್ನ ವಿನಾಯಕನ ಮಹಿಮೆ, ಕ್ರೀಡಾ ಮನೋಭಾವ, ಚನ್ನಪ್ಪ ಚನ್ನಗೌಡ ಸೇರಿದಂತೆ ವಿವಿಧ ನೃತ್ಯಗಳು ನೋಡುಗರ ಮೆಚ್ಚುಗೆ ಪಡೆದುಕೊಂಡವು. ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ್ ಮತ್ತು ಮಜಾ ಭಾರತ ಖ್ಯಾತಿಯ ಬಸವರಾಜ ಗುಡ್ಡಪ್ಪನವರ ಅವರ ಹಾಸ್ಯ ಕಾರ್ಯಕ್ರಮ ಮನರಂಜನೆ ನೀಡಿತು.