ವರ್ಷಪೂರ್ತಿ ನಮ್ಮೂರನ್ನು ಸ್ವಚ್ಛಗೊಳಿಸಿ ದುಡಿಯುವ ಪೌರಕಾರ್ಮಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಎಲ್ಲರೂ ಅವರಿಗೆ ಸಹಕಾರ ನೀಡಬೇಕು
ಮರಿಯಮ್ಮನಹಳ್ಳಿ: ಸ್ವಚ್ಛ ವಾತಾವರಣ ಹಾಗೂ ರೋಗರುಜಿಗಳ ನಿಯಂತ್ರವಾಗಲು ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲಾಗದು. ಅವರನ್ನು ಸಮಾಜ ಗೌರವಿಸಬೇಕು ಎಂದು ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಭಾಷ ಹೇಳಿದರು.
ಪಪಂ ಆವರಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ, ಪಪಂ ಕಾರ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡ 16ನೇ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ವರ್ಷಪೂರ್ತಿ ನಮ್ಮೂರನ್ನು ಸ್ವಚ್ಛಗೊಳಿಸಿ ದುಡಿಯುವ ಪೌರಕಾರ್ಮಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಎಲ್ಲರೂ ಅವರಿಗೆ ಸಹಕಾರ ನೀಡಬೇಕು. ಪೌರ ಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಸಮಾಜದ ಆರೋಗ್ಯ ಕಾಪಾಡಬೇಕು ಎಂದು ಹೇಳಿದರು.
ಪಪಂ ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ್ ಮಾತನಾಡಿ, ಪೌರಕಾರ್ಮಿಕರು ಸ್ವಚ್ಛಗೊಳಿಸುವ ಕಾರ್ಯದ ಜತೆಗೆ ನಾಗರಿಕರಿಗೆ ಜವಾಬ್ದಾರಿ ತಿಳಿಸುವ ಮಹತ್ತರ ಜವಾಬ್ದಾರಿ ಇದೆ. ಪೌರಕಾರ್ಮಿಕರ ಕುರಿತು ಸಾರ್ವಜನಿಕರು ಅವರನ್ನು ಗೌರವಿಸುವ ಮತ್ತು ಗುರುತಿಸುವಿಕೆ ಸಾರ್ವಜನಿಕರಿಂದಾಗಬೇಕು ಎಂದರು.ಪಪಂ ಉಪಾಧ್ಯಕ್ಷೆ ಲಕ್ಷ್ಮೀ ರೋಗಾಣಿ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷೆ ಹುಲಿಗಿ ಬಾಯಿ ರುದ್ರನಾಯ್ಕ್, ಸದಸ್ಯರಾದ ಬಿ.ಎಂ.ಎಸ್. ರಾಜೀವ್, ಎಸ್. ಮಹಮದ್, ಮರಡಿ ಸುರೇಶ, ಕೆ.ಮಂಜುನಾಥ, ಪರಶುರಾಮ, ಬಿ. ಸುರೇಶ್, ರುದ್ರನಾಯ್ಕ್, ಕೆ.ರವಿ, ರವಿಕಿರಣ್, ವೆಂಕಟೇಶ, ದುರುಗಪ್ಪ, ಪೌರಕಾರ್ಮಿಕರು ಸೇರಿದಂತೆ ಪಪಂ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮಹಾಂತೇಶ್ ನೆಲ್ಕುದ್ರಿ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.ಪ್ರತಿದಿನ ಸರ್ಕಾರಿ ವಸ್ತ್ರಸಂಹಿತೆಯಲ್ಲಿರುತ್ತಿದ್ದ ಪೌರಕಾರ್ಮಿಕರು ಬುಧವಾರ ಸಾಂಪ್ರದಾಯಿಕ ಬಟ್ಟೆ ಧರಿಸಿ ಪಪಂ ಕಾರ್ಯಾಲಯದಿಂದ ಪಟ್ಟಣದ ಲಕ್ಷ್ಮೀ ನಾರಾಯಣಸ್ವಾಮಿ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ಆಗಮಿಸಿ ಪೂಜೆ ಸಲ್ಲಿಸಿ ನಾಣೀಕೇರಿ ವೃತ್ತದ ಮೂಲಕ ಮುಖ್ಯಬೀದಿಯಲ್ಲಿ ಘೋಷಣೆಗಳೊಂದಿಗೆ ಸಭಾಂಗಣಕ್ಕೆ ಆಗಮಿಸಿದರು.