ಕನ್ನಡಪ್ರಭ ವಾರ್ತೆ ಬೆಂಗಳೂರು

ಹಾಸಿಗೆ, ಸೋಫಾ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದು ಲಕ್ಷಾಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ತಲಘಟ್ಟಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಅಂಜಾನಪುರ ಸಮೀಪದ ಕೆಂಬತ್ತಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಕೆಂಬತ್ತಹಳ್ಳಿಯಲ್ಲಿ ಬೃಹತ್‌ ಹಾಸಿಗೆ ಗೋದಾಮು ಇದ್ದು, ಇಲ್ಲಿ ಹಾಸಿಗೆ ಮತ್ತು ಸೋಫಾ ತಯಾರಿಸಲಾಗುತ್ತದೆ. ಬೆಳಗ್ಗೆ ಸುಮಾರು 8.30ರ ಸುಮಾರಿಗೆ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಬೆಂಕಿಯಿಂದ ಗೋದಾಮಿನಲ್ಲಿ ದಟ್ಟ ಹೊಗೆ ಆವರಿಸಿದ ಪರಿಣಾಮ ಕೂಡಲೇ ಸ್ಥಳೀಯರು ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

9 ಗಂಟೆಗಳ ಕಾರ್ಯಾಚರಣೆ:

ಸುಮಾರು 9 ವಾಹನಗಳ ಜತೆ ಸ್ಥಳಕ್ಕೆ ದೌಡಾಯಿಸಿ ಬಂದ ಸಿಬ್ಬಂದಿ ಸಂಜೆ 6 ಗಂಟೆವರೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋದಾಮಿನನ ಒಳಗಡೆ ಇದ್ದ ಹತ್ತಿ, ಸಿದ್ದಪಡಿಸಿದ್ದ ಹಾಸಿಗೆ, ಸೋಫಾಗಳು ಮಾತ್ರವಲ್ಲದೆ, ಈ ಗೋದಾಮಿನ ಕಾಂಪೌಂಡ್‌ನೊಳಗೆ ನಿಲ್ಲಿಸಿದ್ದ ಮೂರು ಕಾರುಗಳು ಹಾಗೂ ಎರಡು ಗೂಡ್ಸ್ ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.


ಪರಿಣಾಮ ಈ ಗೋದಾಮು ಅಕ್ಕ-ಪಕ್ಕದಲ್ಲಿರುವ ಎರಡು ಅಪಾರ್ಟ್‌ಮೆಂಟ್‌ಗಳಿಗೂ ಬೆಂಕಿ ತಗುಲಿದ್ದರಿಂದ ಕಿಟಕಿ ಗಾಜುಗಳಿಗೂ ಹಾನಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿರುವ ನಿವಾಸಿಗಳನ್ನು ಮತ್ತೊಂದು ಬ್ಲಾಕ್‌ಗೆ ಸ್ಥಳಾಂತರಿಸಲಾಗಿದೆ. ಬೆಂಕಿಯ ದಟ್ಟ ಹೊಗೆ ಆಕಾಶದೆತ್ತರಕ್ಕೆ ಆವರಿಸಿದ್ದು, ಬೆಂಕಿ ಅವಘಡಕ್ಕೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ.

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.