ಸಾರಾಂಶ
ಹಾವೇರಿ: ಒಬ್ಬ ಮನುಷ್ಯ ಮತ್ತೊಬ್ಬನನ್ನು ಪ್ರೀತಿಸುವ ತಾಯಿ ಗುಣದ ಕಾವ್ಯ ಬರೆದ ಸತೀಶ ಕುಲಕರ್ಣಿ ಅವರು ಮನುಷ್ಯ ಸಂಬಂಧಗಳ ಸೇತುವೆ ಕಟ್ಟಿದವರು. ಮೃದು ಮನಸ್ಸಿನ ಅವರ ಕಾವ್ಯದಲ್ಲಿ ಬೆಂಕಿಯಂತಹ ಕಾವು ಇದೆ. ಕಟ್ಟತೇವ ನಾವು ಕಟ್ಟತೇವ ಎಂಬ ಒಂದು ಕ್ರಾಂತಿ ಗೀತೆ ಇದಕ್ಕೊಂದು ಮಾದರಿ. ಇಂತಹ ಕವಿಯ ಬಗ್ಗೆ ಚರ್ಚೆ ಚಿಂತನ ಮಂಥನ ನಡೆದದ್ದು ಅರ್ಥಪೂರ್ಣವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಉಮೇಶಪ್ಪ ಎಚ್. ಹೇಳಿದರು.ನಗರದ ಎಸ್. ಭಗತ್‌ಸಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಸತೀಶ ಕುಲಕರ್ಣಿ ಅವರ ೭೪ನೇ ಜನ್ಮದಿನ ಅಂಗವಾಗಿ ಏರ್ಪಡಿಸಿದ್ದ ಬದುಕು ಬರಹ ಕುರಿತು ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಭಗತ್‌ಸಿಂಗ್ ಕಾಲೇಜಿನ ಸಂಸ್ಥಾಪಕ ಸತೀಶ ಎಂ.ಬಿ. ಮಾತನಾಡಿ, ನಮ್ಮ ನಡುವೆ ಇರುವ ಸತೀಶ ಕುಲಕರ್ಣಿ ಅವರಂತಹ ಒಳ್ಳೆಯ ಕವಿಯ ಮೇಲೆ ಕಾಲಕಾಲಕ್ಕೆ ವಿಚಾರ ಸಂಕಿರಣಗಳು ನಡೆಯಬೇಕು. ಅವರು ನಾಳಿನ ಭರವಸೆಯಾಗಿರುವ ಜನರ ಕವಿ ಎಂದರು. ಈ ಸಂದರ್ಭದಲ್ಲಿ ಸಂಘಟನೆ ಮತ್ತು ಬಂಡಾಯ ಚಳವಳಿ ಕುರಿತು ಪತ್ರಕರ್ತ ಮಾಲತೇಶ ಅಂಗೂರ ಮಾತನಾಡಿ, ಬೆಂಕಿ ಹಚ್ಚುವ ಕಾಲದಲ್ಲಿ, ಮನುಷ್ಯ ಪ್ರೀತಿಯ ಕಾವ್ಯ ಬರೆದವರು ಸತೀಶರು ಜನಪರ ಕಾಳಜಿಗಳನ್ನು ಬಿತ್ತುತ್ತ ಹೊಸ ಹುಡುಗರನ್ನು ಕಟ್ಟಿಕೊಂಡು ಹೋರಾಟ ಮಾಡಿದ್ದಾರೆ. ಎಲ್ಲವನ್ನು ತಿಂದು ಹಾಕುವ ಪ್ರಸ್ತುತ ಸಮಾಜದ ಆಗು ಹೋಗುಗಳಿಗೆ ಅವರದು ದಿಟ್ಟ ದನಿ ಎಂದರು. ರಂಗಸಂಗದದಾರಿ ವಿಷಯ ಕುರಿತು ಕಲಾವಿದ ಕೆ.ಆರ್. ಹಿರೇಮಠ ಮಾತನಾಡಿ, ಅತ್ಯಂತ ಸೂಕ್ಷ್ಮವಾಗಿ ಜ್ವಲಂತ ಸಮಸ್ಯೆಗಳನ್ನು ಎತ್ತಿಕೊಂಡು ೩೧ ನಾಟಕಗಳನ್ನು ಬರೆದಿದ್ದಾರೆ. ಒಬ್ಬ ಸಾಮಾನ್ಯ ಮೆಚ್ಚುವ ರೀತಿಯಲ್ಲ ಇವರ ಎಲ್ಲ ನಾಟಕಗಳು ಜನಜಾಗೃತಿ ಮಾಡಿವೆ ಎಂದರು. ಸತೀಶ ಕಾವ್ಯ ಮತ್ತು ಸಾಹಿತ್ಯ ಕುರಿತು ಡಾ. ಅಂಬಿಕಾ ಹಂಚಾಟೆ ಅವರು ಇಂದಿನ ಐ.ಟಿ.ಬಿ.ಟಿ ಕಂಪನಿಗಳ ಕುರಿತು ಬರೆದ ಕಂಪನಿ ಸವಾಲ್ ಸಂಕಲನ, ದೇಶ ಕಾಲದ ಅನಾಹುತಗಳ ಕುರಿತು ವಿಷಾದಯೋಗ ಕಾವ್ಯ ಬರೆದವರು. ಎಂಥ ಓದುಗರನ್ನೂ ಗಾಢವಾಗಿ ಕಾಡಬಲ್ಲವು. ನೀರಲ್ಲಿ ಕರಗುವ ಸುಣ್ಣದಂತೆ ಸಮಾಜ ಶುದ್ಧೀಕರಿಸುವ ಗುಣವುಳ್ಳ ಕಾವ್ಯ ಎಂದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಮುಂದಿನ ವರ್ಷ ೭೫ ತುಂಬುವ ಸಂದರ್ಭದಲ್ಲಿ ಅಭಿನಂದನಾ ಗ್ರಂಥವೊಂದನ್ನು ಸತೀಶರ ಕುರಿತು ತರುವ ಯೋಜನೆ ಇದ್ದು, ತಮ್ಮೆಲ್ಲರ ಸಹಕಾರ ಬೇಕೆಂದು ಹೇಳಿದರು. ಡಾ.ನಾಗರಾಜ ದ್ಯಾಮನಕೊಪ್ಪ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಪ್ರಭು ಗುರಪ್ಪನವರ ಮಾತನಾಡಿದರು. ಈ ಸಂದರ್ಭದಲ್ಲಿ ಕುಲಕರ್ಣಿ ಮತ್ತು ಅವರ ಪತ್ನಿ ಕಾಂಚನಾ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಲೀಲಾವತಿ ಪಾಟೀಲ, ರುದ್ರಪ್ಪ ಜಾಬೀನ, ಪರಿಮಳಾ ಜೈನ್, ಅನಿತಾ ಮಂಜುನಾಥ, ರಾಜೇಶ್ವರಿ ಬಿಷ್ಟನಗೌಡ್ರ, ಸಿ.ಎಸ್. ಮರಳಿಹಳ್ಳಿ, ಕೆ. ಎನ್. ಜಾನ್ವೇಕರ್, ರೇಣುಕಾ ಗುಡಿಮನಿ, ದೀಪಾ ಗೋನಾಳ, ಬಸವರಾಜ ಮುಳಗುಂದ, ಜುಬೇದಾ ನಾಯಕ್, ನೇತ್ರ ಅಂಗಡಿ, ರಾಜೇಶ್ವರಿ ಸಾರಂಗಮಠ ಇತರರು ಪಾಲ್ಗೊಂಡಿದ್ದರು.ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಚಂದ್ರಶೇಖರ ಮಾಳಗಿ ಸ್ವಾಗತಿಸಿದರು. ಜಿ.ಎಂ. ಓಂಕಾರಣ್ಣನವರ ನಿರೂಪಿಸಿದರು. ಮಹಾಂತೇಶ ಮರಿಗೂಳಪ್ಪನವರ ವಂದಿಸಿದರು.