ಭವಿಷ್ಯದ ದೃಷ್ಟಿಯಿಂದ ಮಣ್ಣು, ನೀರು ಸಂರಕ್ಷಿಸಬೇಕು: ಡಾ.ಅತೀಫ ಮುನಾವರಿ

| Published : Feb 12 2025, 12:31 AM IST

ಸಾರಾಂಶ

ಸೂಕ್ಷ್ಮ ಜೀವಿ, ಸಸ್ಯ ಹಾಗೂ ಪ್ರಾಣಿಗಳಂತೆ ಒಟ್ಟಿಗೆ ಸೇರಿರುವ ಎಲ್ಲಾ ಮಣ್ಣಿನ ಘಟಕಗಳ ಅನುಕೂಲಕರ ಪರಸ್ಪರ ಕ್ರಿಯೆಗಳಿಂದ ಮಣ್ಣಿನ ಆರೋಗ್ಯ ಉಂಟಾಗುತ್ತದೆ. ಕೃಷಿ ಭೂಮಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಹೆಚ್ಚು ಬಳಸಿದರೆ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಬೇಕಿರುವುದು ಪ್ರತಿಯೊಬ್ಬ ರೈತರ ಜವಾಬ್ದಾರಿ ಎಂದು ಮಂಡ್ಯ ವಿಸಿ ಫಾರಂನ ಮಣ್ಣು ವಿಜ್ಞಾನಿ ಡಾ.ಅತೀಫ ಮುನಾವರಿ ತಿಳಿಸಿದರು.

ತಾಲೂಕಿನ ದೇವಲಾಪುರದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಕೃಷಿ ಇಲಾಖೆಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಮತ್ತು ಜಲಾನಯನ ಅಭಿವೃದ್ಧಿ ಘಟಕ 2-0 ಯೋಜನೆಯಡಿ ಆಯೋಜಿಸಿದ್ದ ಜಲಾನಯನ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸೂಕ್ಷ್ಮ ಜೀವಿ, ಸಸ್ಯ ಹಾಗೂ ಪ್ರಾಣಿಗಳಂತೆ ಒಟ್ಟಿಗೆ ಸೇರಿರುವ ಎಲ್ಲಾ ಮಣ್ಣಿನ ಘಟಕಗಳ ಅನುಕೂಲಕರ ಪರಸ್ಪರ ಕ್ರಿಯೆಗಳಿಂದ ಮಣ್ಣಿನ ಆರೋಗ್ಯ ಉಂಟಾಗುತ್ತದೆ. ಕೃಷಿ ಭೂಮಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಹೆಚ್ಚು ಬಳಸಿದರೆ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ ಎಂದರು.

ರೈತರು ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೇ, ಮಣ್ಣಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಮಣ್ಣಿನ ಸವಕಳಿ ತಪ್ಪಿಸಲು ಬದುಗಳನ್ನು ನಿರ್ಮಿಸಿಕೊಳ್ಳಬೇಕು. ಇದಕ್ಕಾಗಿ ಕೃಷಿ ಇಲಾಖೆ ಜಲಾನಯನ ಅಭಿವೃದ್ಧಿ ಘಟಕ 2-0 ಯೋಜನೆಯ ಸೌಲಭ್ಯವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಜಲಾನಯನ ಯಾತ್ರೆ ಕೇವಲ ಜಾಗೃತಿ ಅಭಿಯಾನವಲ್ಲ. ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಜಲಾನಯನ ಅಭಿವೃದ್ಧಿ ಪದ್ಧತಿ ಅಳವಡಿಸಿಕೊಳ್ಳಬೇಕು. ಮಣ್ಣು ಮತ್ತು ನೀರನ್ನು ಈಗಿನಿಂದಲೇ ಸಂರಕ್ಷಣೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವಿದೆ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ಕಾರ್ಯಕ್ರಮ ಕುರಿತು ಜಂಟಿ ಕೃಷಿ ನಿರ್ದೇಶಕ ಅಶೋಕ್‌ ರೈತರಿಗೆ ಮಾಹಿತಿ ನಿಡಿದರು. ಇದೇ ವೇಳೆ ಮಣ್ಣು ಮತ್ತು ನೀರನ್ನು ಸಂರಕ್ಷಿಸುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಲಾನಯನ ಯಾತ್ರೆ ಪ್ರಯುಕ್ತ ರೈತ ಮಹಿಳೆಯರಿಗೆ ವಿವಿಧ ಸ್ಪರ್ಧೆ ಅಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಶಾಲಾ ಆವರಣದಲ್ಲಿ ಗಣ್ಯರು ವಿವಿಧ ಬಗೆಯ ಸಸಿಗಳನ್ನು ನೆಟ್ಟು ನೀರೆರದರು.

ಬಳಿಕ ದೇವಲಾಪುರ ಮತ್ತು ಗೊಲ್ಲರಹಳ್ಳಿ ಗ್ರಾಮಗಳಲ್ಲಿ ಸಂಚರಿಸಿದ ಜಲಾನಯನ ಯಾತ್ರೆ ಮಣ್ಣು ಮತ್ತು ನೀರು ಸಂರಕ್ಷಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿತು. ಉಪ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಆರ್. ಹರೀಶ್, ದೇವಲಾಪುರ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಎನ್.ಜೆ.ರಾಜೇಶ್, ಗ್ರಾಪಂ ಅಧ್ಯಕ್ಷ ಬೋರಯ್ಯ, ಮುಖ್ಯ ಶಿಕ್ಷಕ ನಾಗೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಟ್ಟಹಳ್ಳಿ ನರಸಿಂಹಮೂರ್ತಿ, ಕೃಷಿ ಅಧಿಕಾರಿ ಯುವರಾಜ್ ಸೇರಿದಂತೆ ಕೃಷಿ ಇಲಾಖೆಯ ಸಿಬ್ಬಂದಿ ವರ್ಗ ಮತ್ತು ರೈತರು ಪಾಲ್ಗೊಂಡಿದ್ದರು.