ಕೃಷಿಯಲ್ಲಿ ಅತಿಯಾದ ರಾಸಾಯನಿಕ, ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್‌.ವಿ.ಸುರೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೃಷಿಯಲ್ಲಿ ಅತಿಯಾದ ರಾಸಾಯನಿಕ, ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್‌.ವಿ.ಸುರೇಶ್‌ ಅಭಿಪ್ರಾಯಪಟ್ಟಿದ್ದಾರೆ.

‘ವಿಶ್ವ ಮಣ್ಣು ದಿನಾಚರಣೆ’ ಅಂಗವಾಗಿ ‘ಆರೋಗ್ಯಕರ ನಗರಗಳಿಗೆ-ಆರೋಗ್ಯಕರ ಮಣ್ಣು’ ಘೋಷವಾಕ್ಯದಡಿ ವಿವಿಯಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಪೀಳಿಗೆಯವರು ಕೃಷಿಯಲ್ಲಿ ಅತಿಯಾದ ರಾಸಾಯನಿಕ, ಕೀಟನಾಶಕಗಳನ್ನು ಬಳಸಿ ಮಣ್ಣಿನಲ್ಲಿರುವ ಫಲವತ್ತತೆಯನ್ನು ನಾಶ ಮಾಡುತ್ತಿದ್ದಾರೆ. ನಗರೀಕರಣ, ಕೈಗಾರಿಕಾ ಪ್ರದೇಶಗಳ ಹೆಚ್ಚಳದಿಂದಾಗಿಯೂ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದ್ದು ಸಾವಯವ ಅಂಶ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಗರ ಪ್ರದೇಶಗಳಲ್ಲಿ ತ್ಯಾಜ್ಯ ಪದಾರ್ಥಗಳು ಸರಿಯಾಗಿ ವಿಲೇವಾರಿಯಾಗದೆ ಭಾರೀ ಲೋಹದ ಅಂಶ, ಮೈಕ್ರೋ ಪ್ಲಾಸ್ಟಿಕ್‌ನಂತಹ ಅಂಶಗಳು ಹೆಚ್ಚಾಗಿ ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ತ್ಯಾಜ್ಯ ವಿಂಗಡಣೆಗೆ ನಾಗರಿಕರು ಆದ್ಯತೆ ನೀಡಬೇಕು. ಮನೆಯಲ್ಲಿ ಕಾಂಪೋಸ್ಟ್‌ ತಯಾರಿಸಿ ಕೈತೋಟಕ್ಕೆ ಬಳಸಬಹುದು ಅಥವಾ ಮಾರಾಟ ಮಾಡಬಹುದು ಎಂದು ವಿವಸರಿಸಿದರು.

ಇದೇ ಸಂದರ್ಭದಲ್ಲಿ ಮಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ವಸ್ತು ಪ್ರದರ್ಶನ, ಬೀದಿ ನಾಟಕ ಏರ್ಪಡಿಸಲಾಗಿತ್ತು. ಕಾಂಪೋಸ್ಟ್‌ ತಯಾರಿಕೆ, ಮಳೆ ನೀರು ಕೊಯ್ಲು, ಜೈವಿಕ ಗೊಬ್ಭರ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ತೋಟಗಾರಿಕಾ ಇಲಾಖೆ ಅಪರ ನಿರ್ದೇಶಕ ಕೆ.ಎಂ.ಪರಶಿವಮೂರ್ತಿ, ಜಿಕೆವಿಕೆ ಕೃಷಿ ವಿಭಾಗದ ಮುಖ್ಯಸ್ಥ ಡಾ.ಎನ್‌.ಬಿ.ಪ್ರಕಾಶ್‌, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎ.ಬಿ.ಪಾಟೀಲ್‌ ಉಪಸ್ಥಿತರಿದ್ದರು.