ಮಣ್ಣು ಬೆಲೆ ಕಟ್ಟಲಾಗದ ಸಂಪತ್ತು: ಸಿ.ಚಂದನ್ ಗೌಡ

| Published : Sep 09 2024, 01:33 AM IST

ಮಣ್ಣು ಬೆಲೆ ಕಟ್ಟಲಾಗದ ಸಂಪತ್ತು: ಸಿ.ಚಂದನ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಣ್ಣು ನಮ್ಮನ್ನೆಲ್ಲ ಹೊತ್ತ ತಾಯಿ. ಆದ್ದರಿಂದ ಕೇವಲ ನಮ್ಮ ಕಾಲಡಿಯ ಮಣ್ಣು ಎಂಬ ಅಸಡ್ಡೆ ಯಾರೊಬ್ಬರೂ ತೋರದಿರಿ. ಮಣ್ಣಿನ ಬಗ್ಗೆ ನಿರ್ಲಕ್ಷತನ ಎಂದೂ ಮಾಡದಿರಿ. ಹೀಗೆ ಮಣ್ಣನ್ನು ನಿರ್ಲಕ್ಷ್ಯತನ ಮಾಡಿದರೇ, ಉಹಿಸಿಕೊಳ್ಳಲು ಸಾಧ್ಯವಾಗದೇ ಇರುವಷ್ಟು ನಷ್ಟವನ್ನು ಅನುಭವಿಸುತ್ತೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಈ ಭೂಮಿ ಮೇಲೆ ಬೆಲೆ ಕಟ್ಟಲಾಗದ ಸಂಪತ್ತು ಅಂತ ಏನಾದರೂ ಇದ್ದರೆ ಅದು ಮಣ್ಣು ಎಂದು ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ. ಚಂದನ್ ಗೌಡ ತಿಳಿಸಿದರು.

ಮೈಸೂರು ತಾಲೂಕು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಯನಹುಂಡಿ ಗ್ರಾಮದಲ್ಲಿ ನಡೆದ ರೈತ ಕಲ್ಯಾಣ ನಾಮಫಲಕ ಅನಾವರಣ, ಸಂಘದ ಉದ್ಘಾಟನೆ ಹಾಗೂ ಮಣ್ಣಿಗೆ ಮರುಜೀವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಣ್ಣು ನಮ್ಮನ್ನೆಲ್ಲ ಹೊತ್ತ ತಾಯಿ. ಆದ್ದರಿಂದ ಕೇವಲ ನಮ್ಮ ಕಾಲಡಿಯ ಮಣ್ಣು ಎಂಬ ಅಸಡ್ಡೆ ಯಾರೊಬ್ಬರೂ ತೋರದಿರಿ. ಮಣ್ಣಿನ ಬಗ್ಗೆ ನಿರ್ಲಕ್ಷತನ ಎಂದೂ ಮಾಡದಿರಿ. ಹೀಗೆ ಮಣ್ಣನ್ನು ನಿರ್ಲಕ್ಷ್ಯತನ ಮಾಡಿದರೇ, ಉಹಿಸಿಕೊಳ್ಳಲು ಸಾಧ್ಯವಾಗದೇ ಇರುವಷ್ಟು ನಷ್ಟವನ್ನು ಅನುಭವಿಸುತ್ತೇವೆ ಎಂದರು.

ರಾಸಾಯನಿಕ ಜಗತ್ತು ಮನುಕುಲಕ್ಕೆ ಆಪತ್ತಿನ ಬಳುವಳಿಯಾಗಿದ್ದು, ಈಗಲೂ ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ ನೀಡದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ನಿರಂತರ ರಾಸಾಯನಿಕ ಬಳಕೆಯಿಂದಾಗಿ ಇಂದು ಮಣ್ಣಿನ ಫಲವತ್ತತೆ ತೀವ್ರವಾಗಿ ಕುಸಿದಿದ್ದು, ಸೂಕ್ತ ಬೆಳೆ ಬೆಳೆಯಲಾಗದೇ ಅನ್ನದಾತ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಮಣ್ಣನ್ನು ಸಂರಕ್ಷಿಸದೇ ಹೋದಲ್ಲಿ ಮನುಕುಲ ಆಪತ್ತಿನ ದಿನಗಳನ್ನು ಎದುರಿಸಬೇಕಾದ ಸನ್ನಿವೇಶ ಎದುರಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸ್ನೇಹಿತ ಕಾನೂನುಗಳ ಮೂಲಕ ಮಣ್ಣಿನ ಗುಣಮಟ್ಟ ಮತ್ತು ಫಲವತ್ತತೆಯನ್ನು ಪುನರ್ ಸ್ಥಾಪಿಸಲು, ಮಣ್ಣು ಸಂರಕ್ಷಣಾ ಕಾಯ್ದೆಯನ್ನು ಕೂಡಲೇ ಸರ್ಕಾರ ಜಾರಿಗೆ ತರಬೇಕು. ಪಾರಂಪರಿಕ ಜೈವಿಕ ಕೃಷಿಯ ಜಾಗೃತಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರಾಸಾಯನಿಕ ಬಳಕೆಯಿಂದಾಗಿ ಉಂಟಾಗುತ್ತಿರುವ ದುಷ್ಪರಿಣಾಮದ ಬಗ್ಗೆ ರೈತ ಬಾಂಧವರಲ್ಲಿ ಜಾಗೃತಿ ಮೂಡಿಸಬೇಕು. ಈ ಸಂಬಂಧ ಸರ್ಕಾರಕ್ಕೆ ಈಗಾಗಲೇ ರೈತ ಕಲ್ಯಾಣ ಕೂಡ ಮನವಿ ಸಲ್ಲಿಸಿದೆ ಎಂದರು.

ರೈತ ಕಲ್ಯಾಣ ಪದಾಧಿಕಾರಿಗಳಾದ ಹೇಮಂತ್ ಕುಮಾರ್, ಜಗದೀಶ್ ಕಣೆನೂರು, ಪ್ರತಾಪ್, ಹರೀಶ್ ಪಿ. ಗೌಡ, ಅನಿಲ್, ಕಂದಸ್ವಾಮಿ, ಪುನೀತ್, ಮಾದೇಗೌಡ, ಸಂಜಯ್, ಲೋಕೇಶ್, ದಾಸೇಗೌಡ, ನವೀನ್ ಪಟೇಲ್, ಮಂಜು ದೇವನೂರು, ಶ್ರೀನಿವಾಸ್, ಕೆಂಡಗಣ್ಣ, ಮಂಚಯ್ಯ, ಶಿವಣ್ಣ, ರವಿ, ಶಂಕರ್, ಶ್ರೀನಿವಾಸ್, ಬಸವರಾಜ್, ಕಾಂಗ್ರೆಸ್ ಮುಖಂಡ ಹಿನಕಲ್ ಉದಯ್, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಜೆ. ಮಹದೇವು, ಮಹದೇವು, ಸೋಮೇಶ್ವರ ಗ್ರಾಪಂ ಅಧ್ಯಕ್ಷೆ ರಾಜಮ್ಮ ಮಾದೇಗೌಡ, ಪಿಡಿಒ ಪ್ರಕಾಶ್ ರಾಯನಹುಂಡಿ, ಶಶಿಕುಮಾರ್, ಆರ್.ಸಿ. ರಾಮ್, ಕೃಷ್ಣಪ್ಪ, ಸಜ್ಜೆಹುಂಡಿ ರವಿ, ನಾಗೇಶ್, ಮರೀಗೌಡನಹುಂಡಿ ಪ್ರಕಾಶ್, ಕುಮಾರ್, ದಾಸಪ್ಪ, ನಂಜಯ್ಯ, ವರುಣ ವಿಧಾನಸಭಾ ಕ್ಷೇತ್ರದ ರೈತ ಕಲ್ಯಾಣ ಸಂಘದ ಅಧ್ಯಕ್ಷ ನಾಗರಾಜು, ನಾರಾಯಣ್, ಮಹೇಶ್, ಸಂಘಟನಾ ಕಾರ್ಯದರ್ಶಿ ಯೋಗೇಶ್, ಮಲ್ಲೇಶ್, ನಂಜಪ್ಪ, ಶಿವರಾಜು, ರಾಮಣ್ಣ, ಜವರೇಗೌಡ, ಉನ್ನೇಗೌಡ, ಬೆಳ್ಳಿ ಸ್ವಾಮಿ, ಹುಚ್ಚಪ್ಪ ಇದ್ದರು.