ನರಗುಂದ ತಾಲೂಕಲ್ಲಿ ಎಗ್ಗಿಲ್ಲದೇ ಸಾಗಿದೆ ಮಣ್ಣು ಗಣಿಗಾರಿಕೆ

| Published : Jul 03 2025, 11:48 PM IST

ನರಗುಂದ ತಾಲೂಕಲ್ಲಿ ಎಗ್ಗಿಲ್ಲದೇ ಸಾಗಿದೆ ಮಣ್ಣು ಗಣಿಗಾರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದ ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಎಗ್ಗಿಲ್ಲದೇ ಅಕ್ರಮ ಮಣ್ಣು ದಂಧೆ, ಸಾಗಾಟ ಬಲು ಜೋರಾಗಿಯೇ ನಡೆಯುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಎಗ್ಗಿಲ್ಲದೇ ಅಕ್ರಮ ಮಣ್ಣು ದಂಧೆ, ಸಾಗಾಟ ಬಲು ಜೋರಾಗಿಯೇ ನಡೆಯುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.

ಖನಿಜ ಸಂಪನ್ಮೂಲ ಹೊಂದಿದ ಗುಡ್ಡದ ಅಂಚಿಗೂ ಕನ್ನ ಹಾಕಿದ್ದಾರೆ. ಫಲವತ್ತಾದ ಭೂಮಿಯಲ್ಲಿ ಹಣದ ಆಸೆಗೆ ಮಣ್ಣು ಆಗೆದು ದಂಧೆಕೋರರಿಗೆ ರೈತರು ನೀಡುತ್ತಿದ್ದಾರೆ. ದೊಡ್ಡ ದೊಡ್ಡ ಯಂತ್ರಗಳನ್ನು ಉಪಯೋಗಿಸಿ ಮಣ್ಣು (ಗರಸು)ನ್ನು ರಾಜಾರೋಷವಾಗಿ ಟಿಪ್ಪರ್‌ಗಳಲ್ಲಿ ತುಂಬಿಕೊಂಡು ಊರ ತುಂಬಾ ಓಡಾಡುತ್ತಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಕಣ್ಣಿಗೆ ಕಂಡರೂ ಕಾಣದಂತೆ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ರೈತರಿಗೆ ಹಣದ ಆಮಿಷ: ಸರ್ಕಾರದ ಪರವಾನಗಿ ಪಡೆಯದೆ ಮಣ್ಣು ದಂಧೆಕೋರರ ಹಣಕ್ಕೆ ಮರುಳಾಗಿ ಕೆಲವು ರೈತರು ತಮ್ಮ ಜಮೀನುಗಳಲ್ಲಿ ರಾತ್ರಿ ಸಮಯದಲ್ಲಿ ಜೆಸಿಬಿ ಯಂತ್ರಗಳ ಮೂಲಕ ಗರಸು ತೆಗೆಸಿ ಮಾರಾಟ ಮಾಡುವ ದಂಧೆ ತಾಲೂಕಿನಲ್ಲಿ ಜೋರಾಗಿ ನಡೆದಿದೆ.

ಯಾವುದೇ ರೈತರ ಜಮೀನಿನಲ್ಲಿ 3 ಫುಟ್‌ ಮಾತ್ರ ಮಣ್ಣು ಸಮತಟ್ಟ ಮಾಡಲು ಮಾತ್ರ ಅವಕಾಶ ಇರುತ್ತದೆ. ಆದರೆ ಇಂದು 20 ರಿಂದ 30 ಫುಟ್‌ ತೆಗ್ಗು ತೆಗೆದು ಮಣ್ಣು (ಗರಸನ್ನು) ಯಂತ್ರಗಳ ಮೂಲಕ ತೆಗೆದು ದಂಧೆಕೋರರು ಮಾರಾಟ ಮಾಡಿದರೂ ಕೂಡ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ್ದು ಸಾರ್ವಜನಿಕರಿಗೆ ಅಧಿಕಾರಿಗಳ ಮೇಲೆ ಹಲವಾರು ರೀತಿ ಅನುಮಾನ ವ್ಯಕ್ತಪವಾಗಿದೆ. ಪಟ್ಟಣದ ಗುಡ್ಡದ ಸುತ್ತಮುತ್ತ ಮತ್ತು ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಈ ಮಣ್ಣು ಮಾಫಿಯಾ ನಡೆದಿದೆ.

ಈ ಅಕ್ರಮ ಮಣ್ಣು ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಂತರ ತೆರಿಗೆ ವಂಚನೆ ಆಗುತ್ತಿದೆ. ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮಕೈಗೊಳಬೇಕು, ಅಕ್ರಮ ಮಣ್ಣು ಲೂಟಿ ಮಾಡಲು ಉಪಯೋಗಿಸುವ ವಾಹನ ಜಪ್ತಿಮಾಡಿ ಕ್ರಮ ಕೈಗೊಳ್ಳಬೇಕು, ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ನಮ್ಮ ಪುರಸಭೆ ವ್ಯಾಪ್ತಿಯ ಗುಡ್ಡದಲ್ಲಿ ಅಕ್ರಮ ಖಡಿ, ಮಣ್ಣು, ಗರಸು ಸಾಗಾಟ ಮಾಡುವುದು ಕಂಡು ಬಂದರೆ ಅವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಕೂಡ ಅವರು ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆಂದು ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ ಹೇಳಿದರು.

ಕಂದಾಯ ಇಲಾಖೆಯ ಜಮೀನುಗಳಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಕ್ರಮ ಮಣ್ಣು (ಗರಸು) ಸಾಗಾಟ ಮಾಡಿದರೆ ಅಂಥವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು, ಗ್ರಾಮೀಣ ಭಾಗದ ಜಮೀನಿನಲ್ಲಿ ಮಣ್ಣು ಸಾಗಾಟದ ಬಗ್ಗೆ ಪರಿಶೀಲನೆ ಮಾಡಲು ನಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳಿದರು.

ಪಟ್ಟಣದ ಗುಡ್ಡದ ಸುತ್ತಮುತ್ತಲೂ ಮತ್ತು ಗ್ರಾಮೀಣ ಭಾಗದಲ್ಲಿ ದಂಧೆಕೋರರು ರಾತ್ರಿ ಸಮಯದಲ್ಲಿ ಮಣ್ಣು(ಗರಸ)ನ್ನು ಸರ್ಕಾರದ ಪರವಾನಗಿ ಹೊಂದದೆ ಅಕ್ರಮವಾಗಿ ಸಾಗಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ. ಸಂಬಂದ ಪಟ್ಟ ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈ ದಂಧೆಗೆ ಕಡಿವಾಣ ಹಾಕದಿದ್ದರೆ ಕರವೇ ಸಂಘಟನೆಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ನಬಿಸಾಬ ಕಿಲ್ಲೇದಾರ ಹೇಳಿದರು.