ಹಾಸನದಿಂದ ತಾಲೂಕಿನ ಹೆಗ್ಗದ್ದೆ ಗ್ರಾಮದವರಗಿನ 45 ಕಿ. ಮೀ. ಚತುಷ್ಪಥ ಕಾಮಗಾರಿ 2016ರಿಂದ 2026ರವರೆಗಿನ 10 ವರ್ಷಗಳ ಕಾಲ ನಡೆದಿದ್ದು, ಈ ಒಂದು ದಶಕದಲ್ಲಿ ಶಿರಾಡಿಘಾಟ್‌ನಲ್ಲಿ ಪ್ರಯಾಣಿಸಿದವರಿಗೆ ನರಕದರ್ಶನವಾಗಿದೆ. ತೀರ ಹದಗೆಟ್ಟ ಹೆದ್ದಾರಿ ಸದ್ಯ ಅಂತಿಮ ಹಂತಕ್ಕೆ ತಲುಪಿದ್ದು ಬಹುತೇಕ ರಸ್ತೆ ಕಾಂಕ್ರೀಟಿಕರಣ ಮುಕ್ತಾಯವಾಗಿದ್ದು, ಭಾರಿ ಪ್ರಮಾಣದ ಭೂಕುಸಿತ ಸಂಭವಿಸುತ್ತಿದ್ದ ದೊಡ್ಡತಪ್ಪಲೆ ಸಮೀಪ ಭಾರಿ ಗಾತ್ರದ ತಡೆಗೋಡೆ ಕಾಮಗಾರಿ ಹಾಗೂ ರೈಲ್ವೆ ಸೇತುವೆ ಮೇಲ್ಭಾಗದಲ್ಲಿ ಮತ್ತೊಂದು ತಡೆಗೋಡೆ ಕಾಮಗಾರಿ ನಡೆಸಲಾಗುತ್ತಿದೆ. ಮಳೆಯಿಲ್ಲದಿರುವುದು ಸದ್ಯ ಕಾಮಗಾರಿ ವೇಗವಾಗಿ ನಡೆಸಲು ಸಹಾಯಕವಾಗಿದ್ದು ಇನ್ನೊಂದು ವಾರದಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳಲಿದ್ದು ನಂತರ ಚತುಷ್ಪಥ ರಸ್ತೆ ಉದ್ಘಾಟನೆಗೊಳ್ಳಲಿದೆ ಎನ್ನಲಾಗುತ್ತಿದೆ.

ವಿದ್ಯಾಕಾಂತರಾಜ್

ಕನ್ನಡಪ್ರಭ ವಾರ್ತೆ ಸಕಲೇಶಪುರ

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನಲ್ಲಿ ಮಳೆಗಾಲದ ವೇಳೆ ಸಂಭವಿಸುತ್ತಿದ್ದ ಭೂಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ‘ಸಾಯಿಲ್ ನೈಲಿಂಗ್’ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ.ರಾಷ್ಟ್ರೀಯ ಹೆದ್ದಾರಿ 75 ತಾಲೂಕಿನ ಹೆಗ್ಗದ್ದೆ ಗ್ರಾಮದಿಂದ 26 ಕಿ. ಮೀ. ದೂರದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆವರಗೆ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವುದು ಸಾಮಾನ್ಯ ವಿಚಾರವಾಗಿತ್ತು. ಇದರಿಂದಾಗಿ ಮಳೆಗಾಲದಲ್ಲಿ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವುದು ಅನಿಶ್ಚಿತತೆಯನ್ನು ಹುಟ್ಟುಹಾಕಿತ್ತು. ಅದರಲ್ಲೂ ಹೆಗ್ಗದ್ದೆ-ಸಕಲೇಶಪುರ ನಡುವಿನ 14 ಮೀ. ಅಂತರದಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯಿಂದಾಗಿ ಮಳೆಗಾಲದ ವೇಳೆ ಭೂಕುಸಿತದಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಘಾಟ್‌ನಲ್ಲಿ ಪ್ರಯಾಣಿಕರು ರಾತ್ರಿ ಕಳೆದ ನಿದರ್ಶನಗಳು ಹಲವು ಇದೆ. ಭೂಕುಸಿತ ತಡೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾಂಕ್ರಿಟ್ ತಡೆಗೋಡೆ, ಗ್ಯಾರಿಯನ್ ವಾಲ್‌ನಂತಹ ಹಲವು ಕ್ರಮ ಕೈಗೊಂಡಿತ್ತಾದರೂ ಇದರಿಂದ ಯಾವುದೇ ಪರಿಣಾಮವು ದಕ್ಕದ ಪರಿಣಾಮ ಹೆದ್ದಾರಿ ಪ್ರಾಧಿಕಾರ ಮುಂದುವರಿದ ದೇಶಗಳಿಂದ ತಂತ್ರಜ್ಞಾನವನ್ನು ಆಮದು ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಭೂಕುಸಿತ ಸಂಭವಿಸಲಿರುವ ಹಾಗೂ ಈಗಾಗಲೇ ಭೂಕುಸಿತ ಸಂಭವಿಸುತ್ತಿರುವ ಬೆಟ್ಟಗಳನ್ನು ಗುರುತಿಸಿರುವ ಪ್ರಾಧಿಕಾರ ಮೊದಲ ಹಂತದಲ್ಲಿ ನಾಲ್ಕು ಹಾಗೂ ಎರಡನೇ ಹಂತದಲ್ಲಿ ಮೂರು ಗುಡ್ಡಗಳಿಗೆ ಸಾಯಿಲ್ ನೈಲಿಂಗ್ ಹಾಗೂ ಹೈಡ್ರೋ ಮಲ್ಚಿಂಗ್ ತಂತ್ರಜ್ಞಾನ ಅಳವಡಿಕೆ ಮುಂದಾಗಿದ್ದು, ಈಗಾಗಲೇ ಎರಡನೇ ಹಂತದ ಮೂರು ಕಾಮಗಾರಿ ಸುಮಾರು ₹ 15 ಕೋಟಿ ವೆಚ್ಚದಲ್ಲಿ ಆರಂಭಿಸಲು ಸಿದ್ಧತೆ ನಡೆದಿದ್ದರೆ, ಸುಮಾರು ₹ 20 ಕೋಟಿ ವೆಚ್ಚದ ಮೊದಲ ಹಂತದ ಕಾಮಗಾರಿ ಇನ್ನೂ ಟೆಂಡರ್‌ ಹಂತದಲ್ಲಿದೆ. ಹಾಸನದಿಂದ ತಾಲೂಕಿನ ಹೆಗ್ಗದ್ದೆ ಗ್ರಾಮದವರಗಿನ 45 ಕಿ. ಮೀ. ಚತುಷ್ಪಥ ಕಾಮಗಾರಿ 2016ರಿಂದ 2026ರವರೆಗಿನ 10 ವರ್ಷಗಳ ಕಾಲ ನಡೆದಿದ್ದು, ಈ ಒಂದು ದಶಕದಲ್ಲಿ ಶಿರಾಡಿಘಾಟ್‌ನಲ್ಲಿ ಪ್ರಯಾಣಿಸಿದವರಿಗೆ ನರಕದರ್ಶನವಾಗಿದೆ. ತೀರ ಹದಗೆಟ್ಟ ಹೆದ್ದಾರಿ ಸದ್ಯ ಅಂತಿಮ ಹಂತಕ್ಕೆ ತಲುಪಿದ್ದು ಬಹುತೇಕ ರಸ್ತೆ ಕಾಂಕ್ರೀಟಿಕರಣ ಮುಕ್ತಾಯವಾಗಿದ್ದು, ಭಾರಿ ಪ್ರಮಾಣದ ಭೂಕುಸಿತ ಸಂಭವಿಸುತ್ತಿದ್ದ ದೊಡ್ಡತಪ್ಪಲೆ ಸಮೀಪ ಭಾರಿ ಗಾತ್ರದ ತಡೆಗೋಡೆ ಕಾಮಗಾರಿ ಹಾಗೂ ರೈಲ್ವೆ ಸೇತುವೆ ಮೇಲ್ಭಾಗದಲ್ಲಿ ಮತ್ತೊಂದು ತಡೆಗೋಡೆ ಕಾಮಗಾರಿ ನಡೆಸಲಾಗುತ್ತಿದೆ. ಮಳೆಯಿಲ್ಲದಿರುವುದು ಸದ್ಯ ಕಾಮಗಾರಿ ವೇಗವಾಗಿ ನಡೆಸಲು ಸಹಾಯಕವಾಗಿದ್ದು ಇನ್ನೊಂದು ವಾರದಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳಲಿದ್ದು ನಂತರ ಚತುಷ್ಪಥ ರಸ್ತೆ ಉದ್ಘಾಟನೆಗೊಳ್ಳಲಿದೆ ಎನ್ನಲಾಗುತ್ತಿದೆ.

ದಂಪತಿಗಳೇ ಅಧಿಕಾರಿಗಳು:

ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ವಹಣೆಗೆ ಒಳಪಡುವ ಶಿರಡಿಘಾಟ್‌ನ ೨೬ ಕಿ. ಮೀ. ರಸ್ತೆ ನಿರ್ವಹಣೆಯ ಹೊಣೆ ಹೊತ್ತಿರುವು ಅಧಿಕಾರಿಗಳು ಪತಿ ಹಾಗೂ ಪತ್ನಿ ಎನ್ನುವುದೇ ವಿಶೇಷ. ಪತಿ ಅನೀಸ್ ಶಿರಾಡಿಘಾಟ್‌ನ ಸೆಕ್ಷನ್ ಎಂಜಿನಿಯರ್‌ ಆಗಿದ್ದರೆ, ಪತ್ನಿ ಎಇಇ ಸಲ್ಮಾ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದಾರೆ.