ಸಾರಾಂಶ
‘ಸೂರ್ಯ ಘರ್’ ಯೋಜನೆ ಕುರಿತು ಜಾಗೃತಿ ಮೂಡಿಸಲು ‘ಸೂರ್ಯ ರಥ ಯಾತ್ರೆಗೆ’ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಶನಿವಾರ ಅಧಿಕೃತ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆಗಳ ಚಾವಣಿ ಮೇಲೆ ಸೋಲಾರ್ ಫಲಕ ಅಳವಡಿಸುವ ಮೂಲಕ ವಿದ್ಯುತ್ ಒದಗಿಸುವ ‘ಸೂರ್ಯ ಘರ್’ ಯೋಜನೆ ಕುರಿತು ಜಾಗೃತಿ ಮೂಡಿಸಲು ‘ಸೂರ್ಯ ರಥ ಯಾತ್ರೆಗೆ’ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಶನಿವಾರ ಅಧಿಕೃತ ಚಾಲನೆ ನೀಡಿದರು.ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದಿಂದ ಗೃಹ ಬಳಕೆಗೆ ಮಾತ್ರ ನೆರವು ನೀಡುವ ಸೂರ್ಯ ಘರ್ ಯೋಜನೆಯ ಕುರಿತ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿದರು.
ಈ ವೇಳೆ ಮಾತನಾಡಿದ ಅವರು, ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿ ರಾಜ್ಯದಲ್ಲಿ ಈವರೆಗೆ 10 ಸಾವಿರ ಮಂದಿ ಅರ್ಜಿಸಲ್ಲಿಸಿದ್ದಾರೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ತಲುಪುವಂತೆ ಮಾಡಲು ವ್ಯಾಪಕ ಪ್ರಚಾರ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು pmsuryaghar.gov.in ವೆಬ್‌ಸೈಟ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.ಯೋಜನೆ ಅನುಷ್ಠಾನಕ್ಕೆ ರಾಜ್ಯದಲ್ಲಿ 229 ಖಾಸಗಿ ಪೂರೈಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ. ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಿಕೊಂಡು ಗ್ರಿಡ್ ಜತೆಗೆ ಸಂಪರ್ಕಿಸುವುದರಿಂದ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಜತೆಗೆ ಹೆಚ್ಚುವರಿ ಆದಾಯ ಗಳಿಸಬಹುದು. ನಿರ್ವಹಣಾ ವೆಚ್ಚವೂ ಕಡಿಮೆಯಾಗಿದ್ದು, ಹೆಚ್ಚುವರಿ ಜಾಗದ ಅಗತ್ಯವೂ ಇಲ್ಲ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಬೆಸ್ಕಾಂ ನಿರ್ದೇಶಕ (ಹಣಕಾಸು) ದರ್ಶನ್ ಹಾಜರಿದ್ದರು.