ಕಾಡಾನೆ ಹಾವಳಿ ತಡೆಗೆ ಸೋಲಾರ್‌ ಫೆನ್ಸಿಂಗ್‌

| Published : Feb 28 2025, 12:45 AM IST

ಸಾರಾಂಶ

ಕಾಡಿನ ಸುತ್ತ ಫೆನ್ಸಿಂಗ್ ಹಾಕುವಾಗ ಯಾರೂ ವಿರೋಧವ್ಯಕ್ತಪಡಿಸಬಾರದು. ಕಾಮಸಮುದ್ರ ಹೋಬಳಿಯ ಸುತ್ತಲೂ ಇರುವ ಅರಣ್ಯದ ಸುತ್ತ ಈಗಾಗಲೇ ಬಹುತೇಕ ಸೋಲಾರ್ ಫೆನ್ಸಿಂಗ್ ಅಳವಡಿಸಲಾಗಿದೆ, ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಆಗ ಕಾಡಾನೆಗಳ ನಿಯಂತ್ರಣ ಸಾಧ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗಡಿ ಭಾಗದಲ್ಲಿ ಅರಣ್ಯ ಸುತ್ತಮುತ್ತಲು ಬಾಕಿ ಇರುವ ಸೋಲಾರ್ ಫೆನ್ಸಿಂಗ್ ಪೂರ್ಣಗೊಳಿಸಲು ಸರ್ಕಾರದ ಜೊತೆ ಚರ್ಚಿಸಲಾಗಿದ್ದು ಆದಷ್ಟು ಬೇಗ ಪೂರ್ಣಗೊಳಿಸಿ ಕಾಡಾನೆಗಳು ಗ್ರಾಮಗಳತ್ತ ಬಾರದಂತೆ ಕ್ರಮವಹಿಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಇತ್ತೀಚೆಗೆ ತಾಲೂಕಿನ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಸಾಕರಸನಹಳ್ಳಿ ಗ್ರಾಮದ ರೈತ ಮಹಿಳೆ ಮಂಜುಳರನ್ನು ಒಂಟಿ ಆನೆ ದಾಳಿಗೆ ಬಲಿಯಾಗಿದ್ದು ಮೃತರ ಕುಟುಂಬಕ್ಕೆ ೫ ಲಕ್ಷ ರು.ಗಳ ಚೆಕ್ ವಿತರಿಸಿ ಮಾತನಾಡಿ, ಸಂತ್ರಸ್ತ ಕುಟುಂಬಕ್ಕೆ ಉಳಿದ ೧೦ ಲಕ್ಷ ರು.ಗಳನ್ನು ಇನ್ನು ಒಂದು ವಾರದೊಳಗೆ ಹಸ್ತಾಂತರ ಮಾಡಲಾಗುವುದು ಎಂದರು,

ಫೆನ್ಸಿಂಗ್‌ ಕಾರ್ಯ ವಿರೋಧಿಸಬೇಡಿ

ಈ ಹಿಂದೆಯೇ ತಳೂರು ಗ್ರಾಮದ ಬಳಿ ಬಾಕಿ ಫೆನ್ಸಿಂಗ್ ಕಾಮಗಾರಿ ಅರಣ್ಯ ಇಲಾಖೆ ಕೈಗೊಂಡಾದ ಗ್ರಾಮಸ್ಥರು ಅಡ್ಡಿಪಡಿಸಿದ್ದರಿಂದ ವಿಳಂಬವಾಗಿದೆ, ಅದು ಪೂರ್ಣವಾಗಿದ್ದರೆ ಎರಡು ಜೀವಗಳು ಉಳಿಯುತ್ತಿತ್ತು, ಆದ್ದರಿಂದ ಕಾಡಿನ ಸುತ್ತ ಫೆನ್ಸಿಂಗ್ ಹಾಕುವಾಗ ಯಾರೂ ವಿರೋಧವ್ಯಕ್ತಪಡಿಸಬಾರದೆಂದು ಸಲಹೆ ನೀಡಿದರು. ಕಾಮಸಮುದ್ರ ಹೋಬಳಿಯ ಸುತ್ತಲೂ ಇರುವ ಅರಣ್ಯದ ಸುತ್ತ ಈಗಾಗಲೇ ಬಹುತೇಕ ಸೋಲಾರ್ ಫೆನ್ಸಿಂಗ್ ಅಳವಡಿಸಲಾಗಿದೆ, ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಆನೆಗಳು ಗ್ರಾಮಗಳತ್ತ ಬಾರದಂತೆ ತಡೆಯಲು ಸರ್ಕಾರ ಹಾಗೂ ಇಲಾಖೆ ಬದ್ಧವಾಗಿದೆ ಎಂದರು.ಕಾಡಂಚಿನ ಮನೆಗಳಿಗೆ ರಸ್ತೆ ನಿರ್ಮಾಣಕ್ಕೆ ನೀಡಿದ್ದ ಭರವಸೆಯಂತೆ ನಡೆದುಕೊಳ್ಳುವೆ ಮತ್ತು ೨೪ ಗಂಟೆಯೂ ಗಡಿ ಭಾಗದ ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಳಿಸದೆ ಸಮರ್ಪಕವಾಗಿ ಪೂರೈಸುವಂತೆ ಈಗಾಗಲೇ ಬೆಸ್ಕಾಂಗೆ ಸೂಚಿಸಲಾಗಿದೆ, ರೈತರ ಬೆಳೆ ರಕ್ಷಣೆಗಾಗಿ ತ್ರೀಪೇಸ್ ವಿದ್ಯುತ್ ಸರಬರಾಜಿಗೂ ಸೂಚನೆ ನೀಡಲಾಗಿದೆ, ಆದರೂ ಕೆಲವು ಕಡೆ ಸಮಸ್ಯೆ ಕಾಡುತ್ತಿದೆ, ಈ ಬಗ್ಗೆ ಶುಕ್ರವಾರ ಬೆಸ್ಕಾಂ ಕಚೇರಿಯಲ್ಲಿ ಸಭೆ ಕರೆಯಲಾಗಿದೆ ಎಂದು ಹೇಳಿದರು.ಮನೆ ಬಳಿ ಬಾಳೆ ಬೆಳಸಬೇಡಿ

ಡಿಸಿಎಫ್ ಸರೀನಾ ಸಿಗಲೇಕರ್ ಮಾತನಾಡಿ, ಕಾಡಾನೆಗಳನ್ನು ನಿಯಂತ್ರಿಸಲು ಹಾಗೂ ಕಾರ್ಯಚರಣೆ ಮಾಡಲು ಸಿಬ್ಬಂದಿಗೆ ನುರಿತ ತಜ್ಞರಿಂದ ತರಬೇತಿಯನ್ನು ನೀಡಲಾಗುವುದು, ಗಡಿಭಾಗದ ಗ್ರಾಮಸ್ಥರು ಮನೆ ಬಳಿ ಬಾಳೆಗಿಡಗಳನ್ನು ಬೆಳೆಸಬಾರದು. ಇದರಿಂದಲೇ ಆನೆಗಳು ಮನೆಗಳ ಬಳಿ ಬಂದು ಪುಂಡಾಟಿಕೆ ಮಾಡುತ್ತಿದೆ ಎಂದರಲ್ಲದೆ ಆನೆಗಳಿಂದ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಗ್ರಾಮಸ್ಥರಿಗೆ ತಿಳುವಳಿಕೆ ಮೂಡಿಸಲಾಗುತ್ತಿದೆ. ಆದರೂ ಆಗಾಗ ಇಂತಹ ಅವಘಡ ಸಂಭವಿಸುತ್ತಿವೆ. ಆನೆಗಳಿಂದ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ ಹೆಚ್ಚಿಸಲು ರೈತರಿಂದ ಬೇಡಿಕೆ ಇದೆ, ಇದನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.ಈ ವೇಳೆ ಎಸಿಎಫ್ ಗಿರೀಶ್, ಆರ್‌ಎಫ್‌ಒ ಶ್ರೀಲಕ್ಷ್ಮೀ, ಡಿಆರ್‌ಎಫ್‌ಗಳಾದ ನಾಗೇಶ್, ಸಂತೋಷ್, ಮುಖಂಡರಾದ ಎಸ್.ಕೆ.ಜಯಣ್ಣ, ಮುನಿರಾಜು ಇದ್ದರು.