ನಕ್ಸಲ್‌ ಪೀಡಿತ ಪ್ರದೇಶಕ್ಕೆ ಸೋಲಾರ್ ಭಾಗ್ಯ

| Published : May 18 2025, 11:52 PM IST

ಸಾರಾಂಶ

ಪೀತಬೈಲು ಹಾಗೂ ತಿಂಗಳ ಮಕ್ಕಿ ಮಲೆಕುಡಿಯ ಸಮುದಾಯದ ಮನೆಗಳ‌ಲ್ಲಿ ಕರ್ನಾಟಕ ಸರ್ಕಾರ ಹಾಗೂ ಸ್ಥಳೀಯ ಕಂಪನಿಗಳು ಸಿಎಸ್‌ಆರ್‌ ಫಂಡ್ ಒದಗಿಸುವ ಮೂಲಕ ಸೋಲಾರ್ ಬೆಳಕು ನೀಡಲು ಮುಂದಾಗಿದೆ.

ಪೀತಬೈಲು, ತಿಂಗಳ ಮಕ್ಕಿ ಮಲೆಕುಡಿಯ ಸಮುದಾಯದ ಮನೆಗಳಿಗೆ ಬೆಳಕು

ರಾಂ‌ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಕಳೆದ ನವೆಂಬರ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಬಳಿಕ ಹೆಬ್ರಿ ತಾಲೂಕು ಕಬ್ಬಿನಾಲೆ ಭಾಗದ ಘಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭವಾಗಿದ್ದು, ಇಲ್ಲಿನ ಮಲೆಕುಡಿಯ ಮನೆಗಳಿಗೆ ಸೋಲಾರ್‌ ದೀಪಗಳನ್ನು ಅಳವಡಿಸಲಾಗುತ್ತಿದೆ.

ಪೀತಬೈಲು ಹಾಗೂ ತಿಂಗಳ ಮಕ್ಕಿ ಮಲೆಕುಡಿಯ ಸಮುದಾಯದ ಮನೆಗಳ‌ಲ್ಲಿ ಕರ್ನಾಟಕ ಸರ್ಕಾರ ಹಾಗೂ ಸ್ಥಳೀಯ ಕಂಪನಿಗಳು ಸಿಎಸ್‌ಆರ್‌ ಫಂಡ್ ಒದಗಿಸುವ ಮೂಲಕ ಸೋಲಾರ್ ಬೆಳಕು ನೀಡಲು ಮುಂದಾಗಿದೆ.

ನಕ್ಸಲ್ ನಾಯಕ ವಿಕ್ರಂ ಗೌಡ ಮೃತಪಟ್ಟ ಪೀತಬೈಲು ಜಯಂತ ಗೌಡ ಮನೆ ಸೇರಿದಂತೆ ತಿಂಗಳಮಕ್ಕಿ ನಾರಾಯಣ ಗೌಡ, ಆನಂದ ಗೌಡ ತಿಂಗಳ‌ಮಕ್ಕಿ, ಲಕ್ಷ್ಮಣ್ ಗೌಡ ತಿಂಗಳಮಕ್ಕಿ, ಸುಧಾಕರ ಗೌಡ ಪೀತಬೈಲು ಈ 5 ಮನೆಗಳಿಗೆ ಈ ಸೋಲಾರ್ ಸೌಲಭ್ಯ ಒದಗಿಸಲಾಗುತ್ತಿದೆ. ಅದಕ್ಕಾಗಿ ಜಿಲ್ಲಾ ಪಂಚಾಯಿತಿ ಉಡುಪಿ, ಕೆಲ್‌ಟೆಕ್ ಎನರ್ಜೀಸ್ ಲಿಮಿಟೆಡ್ ವರಂಗ, ಸೆಲ್ಕೊ ಸೋಲಾರ್ ಲೈಟ್ ಪ್ರೈ.ಲಿ, ಜಿಲ್ಲಾ ಮಾಜಿ ಆರೋಗ್ಯ ಅಧಿಕಾರಿ ನಾಗಭೂಷನ್‌ ಉಡುಪ ಕೈ ಜೋಡಿಸಿದ್ದಾರೆ.

ಒಟ್ಟು ಖರ್ಚು: ಒಟ್ಟು 5.75 ಲಕ್ಷ ರು. ವೆಚ್ಚದ ಯೋಜನೆ ಇದಾಗಿದ್ದು, ಪ್ರತಿ‌ ಮನೆಯೊಂದಕ್ಕೆ 1.15 ಲಕ್ಷ ರು. ಖರ್ಚು ನಿಗದಿಯಾಗಿದೆ. ಇದರಲ್ಲಿ 545 ವ್ಯಾಟ್‌ನ ಸೋಲಾರ್ 2 ಪ್ಯಾನಲ್‌ಗಳು, 100 ಎಎಚ್‌ನ ಎರಡು ಬ್ಯಾಟರಿಗಳು, 1.4 ಕೆ.ವಿ.ಯ ಇನ್‌ವರ್ಟರ್ ಅಳವಡಿಸಲಾಗುತ್ತಿದೆ. ಇದರಲ್ಲಿ ಟಿವಿ‌, ಮಿಕ್ಸಿ, ಲೈಟ್, ಫ್ಯಾನ್‌ಗಳು ಕಾರ್ಯ ನಿರ್ವಹಿಸಬಹುದಾಗಿದೆ.

ನಕ್ಸಲ್‌ ಪೀಡಿತ ಪ್ರದೇಶ:

ನಾಡ್ಪಾಲು ಗ್ರಾಮದ ಪೀತಬೈಲು ನಕ್ಸಲ್‌ ಪೀಡಿತ ಪ್ರದೇಶ. ಇಲ್ಲಿಯೇ ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಆಗಿದ್ದ. ಈ ಪ್ರದೇಶದಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದೆ. ಹೆಬ್ರಿ ಪೇಟೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ. ಈ ಊರಿಗೆ ರಸ್ತೆಯಲ್ಲಿ ಸಾಗಬೇಕಾದರೆ ಸುಮಾರು 10 ಕಿ.ಮೀ. ನಡೆದುಕೊಂಡೇ ಸಾಗಬೇಕು. ಸೂಕ್ತ ರಸ್ತೆ ವ್ಯವಸ್ಥೆಯೇ ಇಲ್ಲ. ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್ ಕಂಬಗಳು ಉರುಳುವುದೇ ಹೆಚ್ಚು. ಅದರಲ್ಲೂ ಈ ಪ್ರದೇಶ ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಬರುವ ಕಾರಣ ಕರೆಂಟ್ ವ್ಯವಸ್ಥೆ ಕಲ್ಪಿಸಲು ಕಷ್ಟ ಸಾಧ್ಯ.ಮನಗೆದ್ದ ಎಎನ್‌ಎಫ್: ನಕ್ಸಲ್ ನಿಗ್ರಹ ಪಡೆಯ ಎಸ್‌ಐ ಸತೀಶ್ ಅವರ ತಂಡ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ತಿಂಗಳಮಕ್ಕಿ ಹಿರಿಜೀವ ನಾರಾಯಣ ಗೌಡ ಅವರಿಗೆ ಮನೆಕಟ್ಟಿ ಕೊಟ್ಟಿದ್ದರು. ಅದರಲ್ಲೂ ಪೀತಬೈಲು ಪ್ರದೇಶಕ್ಕೆ ಹೊಳೆದಾಟಿ ಸಾಗಲು ಅಣೆಕಟ್ಟು ಹಾಗೂ ಸೇತುವೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು.

ಕೋಟ್ :

ನನಗೆ ಸೋಲಾರ್ ಅಳವಡಿಸುವ ಮೂಲಕ ಕರೆಂಟ್ ಒದಗಿಸಿದ್ದು ಖುಷಿ ತಂದಿದೆ. ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ನಮಗೆ ಆಶಾಕಿರಣವಾಗಿದೆ. ಸರ್ಕಾರ ಹಾಗೂ ಸೋಲಾರ್ ಒದಗಿಸಿದ ಕಂಪನಿಗೆ ಕೃತಜ್ಞತೆ ಸಲ್ಲಿಸುತ್ತೇನೆ.। ನಾರಾಯಣ ಗೌಡ, ತಿಂಗಳ‌ಮಕ್ಕಿ

----------

ಸೌರಶಕ್ತಿ ಮಾನವನ ಬದುಕಿನಲ್ಲಿ ಶಿಕ್ಷಣ, ಆರೋಗ್ಯ, ಸೇವಾ ಚಟುವಟಿಕೆ ಸೇರಿದಂತೆ ಪ್ರಕೃತಿಗೆ ಪೂರಕವಾಗಿ ಬದುಕಲು ಸಹಕಾರಿಯಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿನ ಜನರಿಗೆ ಸಕಾಲದಲ್ಲಿ ಸಮರ್ಪಕವಾಗಿ ಬೆಳಕು ಒದಗಿಸುವುದೇ ನಮ್ಮ ಮೊದಲ ಗುರಿ.

। ಗುರು ಪ್ರಕಾಶ್ ಶೆಟ್ಟಿ, ಡೆಪ್ಯೂಟಿ ಜನರಲ್ ಮ್ಯಾನೇಜರ್, ಸೆಲ್ಕೋ ಸೋಲಾರ್