ಸಾರಾಂಶ
ಸೋಮರಡ್ಡಿ ಅಳವಂಡಿಕೊಪ್ಪಳ: ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಸಬ್ಸಿಡಿಯಲ್ಲಿ ಸೋಲಾರ್ ಪಂಪ್‌ಸೆಟ್‌ಗಳನ್ನು ನೀಡಲು ಮುಂದಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಇನ್ಮುಂದೆ ರಾಜ್ಯ ರೈತರು ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಂಡು, ವಿದ್ಯುತ್ ಸಮಸ್ಯೆಯಿಂದ ಪಾರಾಗಬಹುದು.ಮಿತಿಮೀರಿದ ವಿದ್ಯುತ್ ಕೊರತೆ. ಲೋಡ್ ಶೆಡ್ಡಿಂಗ್‌ನಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ಇದೊಂದು ಶುಭಸುದ್ದಿಯಾಗಲಿದೆ ಎಂದೇ ಹೇಳಲಾಗುತ್ತದೆ.ಏನಿದು ಸೋಲಾರ್ ಪಂಪ್‌ಸೆಟ್?: ರೈತರ ಪಂಪ್‌ಸೆಟ್‌ಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಶೇ.30, ರಾಜ್ಯ ಸರ್ಕಾರ ಶೇ.30 ಸಬ್ಸಿಡಿ ನೀಡುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರ ಕೊಡುವ ಶೇ.30 ಸಬ್ಸಿಡಿಯನ್ನು ಶೇ.50ಕ್ಕೆ ಹೆಚ್ಚಳ ಮಾಡಿ, ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದೆ. ಸೋಲಾರ್ ಪಂಪ್‌ಸೆಟ್‌ಗಳಿಗೆ ಸಬ್ಸಿಡಿಯ ಮೊತ್ತ ಶೇ.80ಕ್ಕೆ ಏರಿಕೆಯಾಗಿದೆ.ಇದರಿಂದ ರೈತರು ಶೇ.20 ತಮ್ಮ ಪಾಲನ್ನು ಹಾಕಿ, ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಬಹುದಾಗಿದೆ.ರಾಜ್ಯ ಸರ್ಕಾರ ಈಗ ತೆಗೆದುಕೊಂಡಿರುವ ತೀರ್ಮಾನದ ಅನುಸಾರ ಗರಿಷ್ಠ 10 ಎಚ್‌ಪಿವರೆಗೂ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಬಹುದಾಗಿದೆ. ಇದಕ್ಕೆ ತಗಲುವ ವೆಚ್ಚದ ಶೇ.80ರಷ್ಟನ್ನು ರಾಜ್ಯ, ಕೇಂದ್ರ ಸರ್ಕಾರ ಕೊಡುತ್ತದೆ. ಉಳಿದಿರುವುದನ್ನು ರೈತರು ತಮ್ಮ ಪಾಲು ಪಾವತಿ ಮಾಡಬಹುದು.ಎಷ್ಟೆಷ್ಟು ವೆಚ್ಚ?: ಈಗ ಮಾರುಕಟ್ಟೆಯಲ್ಲಿ ಸೋಲಾರ್ ಪಂಪ್‌ಸೆಟ್‌ಗಳು 5 ಎಚ್‌ಪಿ ₹4 ಲಕ್ಷಕ್ಕೆ ದೊರೆಯುತ್ತವೆ. 7.5-10 ಎಚ್‌ಪಿ ಪಂಪ್‌ಸೆಟ್ ವೆಚ್ಚ ₹6-8 ಲಕ್ಷ ಆಗುತ್ತದೆ. ಇದು ಕಂಪನಿಯಿಂದ ಕಂಪನಿಗೆ ಬೇರೆ ಬೇರೆಯಾಗಿರುತ್ತದೆ. ಆದರೆ, ಇದರಲ್ಲಿ ಈಗಿರುವ ರೈತ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸಲು ಸಾಧ್ಯವಾಗುವುದಿಲ್ಲ. ಸೋಲಾರ್‌ಗಾಗಿಯೇ ಇರುವ ಪಂಪ್‌ಗಳನ್ನೇ ನೀಡಲಾಗುತ್ತದೆ. ಪಂಪ್ ಸಹ ಘಟಕ ವೆಚ್ಚದಲ್ಲಿಯೇ ಸೇರಿಕೊಂಡಿದೆ. ಹಾಗೊಂದು ವೇಳೆ ಈಗಿರುವ ಪಂಪ್‌ಸೆಟ್‌ಗಳಿಗೂ ಸೋಲಾರ್ ಡ್ರೈವ್ ಅಳವಡಿಸುವುದಕ್ಕೂ ತಂತ್ರಜ್ಞಾನದಲ್ಲಿ ಅವಕಾಶ ಇದ್ದು, ಇದಕ್ಕೆ ತಗಲುವ ವೆಚ್ಚ ಹೆಚ್ಚಳವಾಗುತ್ತದೆ.ಎಷ್ಟು ಗಂಟೆ?: ಸೋಲಾರ್ ಪಂಪ್‌ಸೆಟ್ ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆಯ ಅವಧಿಯಲ್ಲಿ 8-10 ಗಂಟೆ ಕಾರ್ಯ ನಿರ್ವಹಿಸುತ್ತದೆ. ಉಳಿದಂತೆ 5-8 ಗಂಟೆಯವರೆಗೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ ಎನ್ನಲಾಗಿದೆ.ಟೆಂಡರ್ ಪ್ರಕ್ರಿಯೆ ಬಾಕಿ: ರೈತರಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸುವ ಕುರಿತು ಇನ್ನೇನು ಟೆಂಡರ್ ಕರೆಯುವುದೊಂದೇ ಬಾಕಿ ಇದೆ. ಇನ್ನೊಂದು ತಿಂಗಳೊಳಗಾಗಿ ಟೆಂಡರ್ ಕರೆಯಲಾಗುತ್ತದೆ. ಈಗಾಗಲೇ ಕೆಲವೊಂದು ಭಾಗದಲ್ಲಿ ಟೆಂಡರ್ ಸಹ ಕರೆಯಲಾಗಿದೆ. ಟೆಂಡರ್‌ಗೆ ಮುಂದೆ ಬರುವ ಕಂಪನಿಗಳು ದರ ಕೋಟ್ ಮಾಡಿದರೆ ರೈತರ ಪಂಪ್‌ಸೆಟ್ ದರ ಪಕ್ಕಾ ಗೊತ್ತಾಗಲಿದೆ.ಈಗಾಗಲೇ ರಾಜ್ಯದ ಹಲವೆಡೆ ಸೋಲಾರ್ ಪಂಪ್‌ಸೆಟ್ ಸಹ ಅಳವಡಿಸಿಕೊಂಡು ರೈತರು ಬೆಳೆ ಬೆಳೆಯುತ್ತಿದ್ದಾರೆ. ಘಟಕದ ವೆಚ್ಚವನ್ನು ತಾವೇ ಭರಿಸಬೇಕಾಗಿದ್ದರಿಂದ ರೈತರಿಗೆ ಹೊರೆಯಾಗುತ್ತಿತ್ತು. ಆದರೆ, ಈಗ ಶೇ.80 ಸಬ್ಸಿಡಿ ನೀಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ.ರೈತರಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸಲು ಶೇ.80 ಸಬ್ಸಿಡಿ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ. ಕೇಂದ್ರ ಶೇ.30, ರಾಜ್ಯ ಸರ್ಕಾರ ಶೇ.50 ಸಬ್ಸಿಡಿ ನೀಡಲಿದೆ. ಟೆಂಡರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಂಡು ಯಶಸ್ವಿಯಾದ ಅನೇಕ ರೈತರು ಇದ್ದಾರೆ. ಈಗ ಸಬ್ಸಿಡಿ ನೀಡಿದರೆ ಇನ್ನಷ್ಟು ರೈತರಿಗೆ ಅನುಕೂಲವಾಗಲಿದೆ ಎಂದು ಸೆಲ್ಕೋ ಸೋಲಾರ್ ಕಂಪನಿಯ ಕೊಪ್ಪಳ ಶಾಖೆ ಮ್ಯಾನೇಜರ್ ಮಂಜುನಾಥ ಹೇಳಿದರು.