ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ತೀವ್ರ ಗಾಯಗೊಂಡು ಹುತಾತ್ಮರಾದ ಸೈನಿಕ ಪಿ.ಪಿ.ದಿವಿನ್ ಅಂತ್ಯಕ್ರಿಯೆ ಹುಟ್ಟೂರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಆಲೂರು ಸಿದ್ದಾಪುರದ ಬಳಿಯ ಮಾಲಂಬಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿತು.ಸಾಂಪ್ರದಾಯಿಕ ವಿಧಿ ವಿಧಾನಗಳ ನಂತರ ಮಾಲಂಬಿಯ ಜಮೀನಿನಲ್ಲಿ ಅಗ್ನಿಸ್ಪರ್ಶ ಮಾಡುವುದರೊಂದಿಗೆ ದಿವಿನ್ ಕಾಯ ಪಂಚಭೂತಗಳಲ್ಲಿ ಲೀನವಾಯಿತು.ಇದಕ್ಕೂ ಮೊದಲು ಮೇಜರ್ ನಿಖಿಲ್ ಹಾಗೂ ಸುಬೇದಾರ್ ಮಹೇಶ್ ಜಾಧವ್ ನೇತೃತ್ವದಲ್ಲಿ ಆಗಮಿಸಿದ್ದ ಭಾರತೀಯ ಸೇನಾ ತಂಡ ಹಾಗೂ ಪೊಲೀಸರು ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿದರು.
ಮಂಗಳವಾರ ರಾತ್ರಿ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಸೇನಾ ವಾಹನದ ಮೂಲಕ ಕುಶಾಲನಗರಕ್ಕೆ ತರಲಾಗಿತ್ತು, ಬುಧವಾರ ಬೆಳಗ್ಗೆ 8 ರಿಂದ 11 ಗಂಟೆ ವರೆಗೆ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿತ್ತು.ಬಳಿಕ ದಿವಿನ್ ಪಾರ್ಥಿವ ಶರೀರವನ್ನು ಸೇನಾ ವಾಹನದಲ್ಲಿ ಕುಶಾಲನಗರದ ಪ್ರಮುಖ ಬೀದಿಯಿಂದ ಮೆರವಣಿಗೆ ಹೊರಟು ಕೂಡಿಗೆ, ಹೆಬ್ಬಾಲೆ ಮಾರ್ಗದಲ್ಲಿ ತಂದು ಹುಟ್ಟೂರಾದ ಆಲೂರು ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು,
ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರೊಬೆಷನರಿ ಎಸ್‌ಪಿ ಬೆನಕ ಪ್ರಸಾದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ತಹಸೀಲ್ದಾರ್ ಶ್ರೀಧರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸದಸ್ಯರಾದ ಸೂದನ ಈರಪ್ಪ, ಚಂದ್ರಾವತಿ ಬಡ್ಡಡ್ಕ, ಪ್ರಮುಖರಾದ ಎಚ್.ಎಸ್.ಚಂದ್ರಮೌಳಿ ಇತರರು ಅಂತಿಮ ನಮನ ಸಲ್ಲಿಸಿದರು.ಹುತಾತ್ಮ ದಿವಿನ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ವೀಕ್ಷಣೆಗೆ ಆಲೂರು ಸಿದ್ದಾಪುರದ ಶಾಲಾ ಆವರಣದಲ್ಲಿ ಶಾಸಕ ಡಾ.ಮಂತರ್ ಗೌಡ ಸಿದ್ಧತೆ ಮಾಡಿಸಿದ್ದರು.
ನಂತರ ನೇರವಾಗಿ ಮಾಲಂಬಿಯ ಮನೆಗೆ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ಆ ಸಂದರ್ಭದಲ್ಲಿಯೂ ಸಹ ಸಾರ್ವಜನಿಕರ ದರ್ಶನಕ್ಕೆ ಕೆಲಕಾಲ ಪಾರ್ಥಿವ ಶರೀರವನ್ನು ಇಡಲಾಗಿತ್ತು, ಗ್ರಾಮಸ್ಥರು, ಬಂಧು-ಬಳಗದವರು, ಅಗಲಿದ ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.ಹುತಾತ್ಮ ಯೋಧ ದಿವಿನ್ ತಾಯಿ ಜಲಜಾಕ್ಷಿ ಅವರು ಅಂತಿಮ ನಮನ ಸಲ್ಲಿಸುವ ಸಂದರ್ಭದಲ್ಲಿ ಬಂಧು-ಬಳಗದವರು ಜೋರಾಗಿ ಅಳುತ್ತಾ ಕಣ್ಣೀರಿಟ್ಟ ಹೃದಯ ವಿದ್ರಾವಕ ದೃಶ್ಯ ಮನಕಲಕುವಂತಿತ್ತು. ಯೋಧ ದಿವಿನ್ ಕುಟುಂಬದ ಸಂಬಂಧಿ ಚಿರಾಗ್ ಅಂತ್ಯಸಂಸ್ಕಾರದ ಸಾಂಪ್ರದಾಯಿಕ ವಿಧಿಗಳನ್ನು ನೆರವೇರಿಸಿದರು.
ಆಲೂರು ಸಿದ್ದಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಜನರು ಅಂತಿಮ ದರ್ಶನದಲ್ಲಿ ಪಾಲ್ಗೊಂಡು ದಿವಿನ್‌ಗೆ ಗೌರವ ನಮನ ಸಲ್ಲಿಸಿದರು....................
-ಹುತಾತ್ಮ ಯೋಧನಿಗೆ ಗೌರವ ನೀಡುವ ಸಲುವಾಗಿ ಆಲೂರು ಸಿದ್ದಾಪುರ ಸಂಪೂರ್ಣ ಬಂದ್ ಆಗಿತ್ತು. ಅಂಗಡಿ ಮುಂಗಟ್ಟು ಬಂದ್ ಮಾಡಿ ಯೋಧನಿಗೆ ನಮನ ಸಲ್ಲಿಸಿದರು.
-ಆಲೂರು ಸಿದ್ದಾಪುರದ ಶಾಲೆಗಳಿಂದ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಬಂದು ನಮನ ಸಲ್ಲಿಸಿದರು..................
ಕಣ್ಣೀರಿಟ್ಟ ಹೆತ್ತ ಕರುಳು...ಹುತಾತ್ಮ ದಿವಿನ್ ನನ್ನು ನೆನೆದು ತಾಯಿ ಜಲಜಾಕ್ಷಿ ಕಣ್ಣೀರಿಟ್ಟರು. ಮುಂದಿನ ಪೆಬ್ರವರಿಯಲ್ಲಿ ಮಗನ ವಿವಾಹ ಸಿದ್ಧತೆ ಮಾಡಿಕೊಂಡಿದ್ದೆವು. ಇದೇ ತಿಂಗಳು ಮನೆಗೆ ಬರುತ್ತೇನೆ ಅಂದಿದ್ದ. ಈ ಹಿಂದೆ ರಜೆಯಲ್ಲಿ ಬಂದಾಗ ಅವನ ತಂದೆ ಮೃತ ಪಟ್ಟಿದ್ದರು. ಈಗ ಇವನೇ ನನ್ನ ಬಿಟ್ಟು ಹೋಗಿದ್ದಾನೆ ಎಂದು ಅಮ್ಮ ಕಣ್ಣೀರಿಟ್ಟರು.
ಮಗ ಬಂದ ನಂತರ ವಿವಾಹ ಕಾಗದ ಹಾಗೂ ಬಟ್ಟೆ ಖರೀದಿಸಲು ತೆರಳಲು ಸಿದ್ಧತೆ ಮಾಡಿಕೊಂಡಿದ್ದೆವು. ದಿವಿನ್ ತುಂಬಾ ವರ್ಷದಿಂದ ಸೇನೆಗೆ ಸೇರುವ ಹಂಬಲವಿತ್ತು.
ಇದೇ ಆಲೂರು ಶಾಲಾ ಕಾಲೇಜು ಮೈದಾನದಲ್ಲಿ ಕಠಿಣ ಪರಿಶ್ರಮ ಪಡುತ್ತಿದ್ದ.ವಿಧಿಯಾಟ ಬೇರೆಯಾಗಿರುವುದು ಬೇಸರ ತಂದಿದೆ. ಈ ರೀತಿಯಲ್ಲಿ ನನ್ನ ಮಗನನ್ನು ನೋಡುತ್ತೇನೆ ಎಂದುಕೊಂಡಿರಲಿಲ್ಲ. ನಾನು ಶ್ರೀನಗರ ಉದಂಪುರ್ ಆಸ್ಪತ್ರೆಗೆ ತೆರಳಿದ ತರುವಾಯ ಒಂದು ದಿನ ಕಳೆದ ನಂತರ ನನ್ನ ಮಗನನ್ನು ನೋಡಿದಾಗ ನನ್ನನ್ನು ಕಣ್ಣು ಬಿಟ್ಟು ನೋಡಿದ ಎಂದು ತಾಯಿ ಜಲಜಾಕ್ಷಿ ಕಣ್ಣೀಟ್ಟರು.