14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ ಅವರು ದೇಶದ ವಿವಿಧ ಗಡಿ ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕಳೆದ ಬುಧವಾರ ರಾತ್ರಿ ಅವರು ಕೋಲ್ಕತ್ತಾದಲ್ಲಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಶಿರೂರ ಗ್ರಾಮ ಸೇರಿದಂತೆ ತಾಲೂಕಿನಲ್ಲಿ ಶೋಕದ ಛಾಯೆ ಆವರಿಸಿತ್ತು.

ಕುಂದಗೋಳ:

ಕೋಲ್ಕತ್ತಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಕಾಲಿಕ ಮರಣ ಹೊಂದಿದ ತಾಲೂಕಿನ ಶಿರೂರ ಗ್ರಾಮದ ಯೋಧ ಸಂತೋಷ ರಾಮಪ್ಪ ಹೊನ್ನಪ್ಪನವರ (38) ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಶುಕ್ರವಾರ ರಾತ್ರಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ ಅವರು ದೇಶದ ವಿವಿಧ ಗಡಿ ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕಳೆದ ಬುಧವಾರ ರಾತ್ರಿ ಅವರು ಕೋಲ್ಕತ್ತಾದಲ್ಲಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಶಿರೂರ ಗ್ರಾಮ ಸೇರಿದಂತೆ ತಾಲೂಕಿನಲ್ಲಿ ಶೋಕದ ಛಾಯೆ ಆವರಿಸಿತ್ತು.

ಶುಕ್ರವಾರ ರಾತ್ರಿ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಹೂಮಳೆಗರೆದು ನಮಸ್ಕರಿಸಿ ಅಂತಿಮ ನಮನ ಸಲ್ಲಿಸಿದರು. ಮೆರವಣಿಗೆಯ ಉದ್ದಕ್ಕೂ ಮೃತರ ತಂದೆ ರಾಮಪ್ಪ, ತಾಯಿ ಮಂಜವ್ವ, ಪತ್ನಿ ಕಾವ್ಯಾ ಹಾಗೂ ಪುಟ್ಟ ಮಗಳ ಆಕ್ರಂದನ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿತು. ಏಳು ವರ್ಷಗಳ ಹಿಂದೆ ವಿವಾಹವಾಗಿದ್ದ ಸಂತೋಷ ಕುಟುಂಬಕ್ಕೆ ದೊಡ್ಡ ಆಧಾರಸ್ತಂಭವಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಅವರು ಯೋಧನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸರ್ಕಾರದಿಂದ ಬರಬೇಕಾದ ಸೌಲಭ್ಯಗಳನ್ನು ಶೀಘ್ರವಾಗಿ ಕೊಡಿಸುವ ಭರವಸೆ ನೀಡಿದರು. ಕುಂದಗೋಳ ತಹಸೀಲ್ದಾರ್ ರಾಜು ಮಾವರಕರ್ ಕೂಡ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕಾವ್ಯಾಗೆ ಹಸ್ತಾಂತರಿಸಲಾಯಿತು. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಸಹ ಸಕಲ ಸರ್ಕಾರಿ ಗೌರವ ಸಮರ್ಪಿಸಲಾಯಿತು.

ಈ ವೇಳೆ ಕಲ್ಯಾಣಪುರ ಮಠದ ಶ್ರೀಅಭಿನವ ಬಸವಣ್ಣಜ್ಜನವರು, ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ್, ಪೊಲೀಸ್ ಉಪಾಧೀಕ್ಷಕ ಶಿವಾನಂದ ಕಟವಿ, ಸಿಪಿಐ ಸಮೀರ ಮುಲ್ಲಾ, ಪಶು ವೈದ್ಯಾಧಿಕಾರಿ ಡಾ. ಹನುಮಂತಗೌಡ ಪಾಟೀಲ, ಪಿಡಿಒ ಬಿ. ರಾಘವೇಂದ್ರ, ಗ್ರಾಮ ಲೆಕ್ಕಾಧಿಕಾರಿ ಈರಣ್ಣ ರಂಗಪ್ಪನವರ, ಮುಖಂಡರಾದ ರುದ್ರಣ್ಣ ಗಾಣಿಗೇರ, ಅಶೋಕ ಘೊರ್ಪಡೆ, ಗ್ರಾಮದ ಮಾಜಿ ಯೋಧರು, ನೂರಾರು ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ವೀರ ಯೋಧನಿಗೆ ಕಣ್ಣೀರಿನ ವಿದಾಯ ಹೇಳಿದರು.

ಬಿಎಸ್‌ಎಫ್ ಯೋಧ ಸಂತೋಷ ಹೊನ್ನಪ್ಪನವರ ಅವರನ್ನು ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.