ದೇಶದ ಸಂರಕ್ಷಣೆಯಲ್ಲಿ ಸೈನಿಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಪ್ರತಿಯೊಬ್ಬ ಭಾರತೀಯನೂ ದೇಶಭಕ್ತಿಯ ಜೊತೆಗೆ ಸೈನಿಕನಾಗಿ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ವಿಠ್ಠಲ ಚೌಗಲಾ ಕರೆ ನೀಡಿದರು.

ಹಾನಗಲ್ಲ: ದೇಶದ ಸಂರಕ್ಷಣೆಯಲ್ಲಿ ಸೈನಿಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಪ್ರತಿಯೊಬ್ಬ ಭಾರತೀಯನೂ ದೇಶಭಕ್ತಿಯ ಜೊತೆಗೆ ಸೈನಿಕನಾಗಿ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ವಿಠ್ಠಲ ಚೌಗಲಾ ಕರೆ ನೀಡಿದರು.

ಭಾನುವಾರ ಇಲ್ಲಿನ ಮಹಾತ್ಮಾಗಾಂಧಿ ವೃತ್ತದ ಕನಕದಾಸ ಪುತ್ಥಳಿಯ ಬಳಿ ಕಾರ್ಗಿಲ್ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ದೇಶದ ಪ್ರಜೆಗಳು ದೇಶಭಕ್ತರಾಗುವ ಮೂಲಕ ಈ ರಾಷ್ಟ್ರದ ಸಂರಕ್ಷಣೆಗೆ ಕಂಕಣ ಬದ್ಧರಾಗಬೇಕು. ಅನ್ನದಾತ ರೈತ ಹಾಗೂ ದೇಶ ಕಾಯುವ ಸೈನಿಕ ಇಬ್ಬರೂ ಈ ದೇಶದ ಬೆನ್ನೆಲುಬು. ನಾವುಗಳು ದೇಶಕ್ಕಾಗಿ ಪರಿಶ್ರಮಿಸುವವರನ್ನು ಗೌರವಿಸಬೇಕು. ಕಾರ್ಗಿಲ್‌ ಯುದ್ಧದಲ್ಲಿ ೫೦೦ಕ್ಕೂ ಅಧಿಕ ಸೈನಿಕರು ಪ್ರಾಣತ್ಯಾಗ ಮಾಡಬೇಕಾಯಿತು. ದೇಶಕ್ಕೆ ಸಂಕಷ್ಟಗಳು ಎದುರಾದಾಗ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಸೈನಿಕನಂತೆ ಹೋರಾಟಕ್ಕೆ ಸಿದ್ಧವಾಗಬೇಕು. ಸ್ವತಂತ್ರ ಭಾರತದಲ್ಲಿ ಕಾರ್ಗಿಲ್ ಯುದ್ಧ ಭಾರತದ ಸೈನಿಕರ ಬಲಿದಾನವಾದರೂ, ಅದು ನಮ್ಮ ದೇಶದ ಬಹುದೊಡ್ಡ ಗೆಲುವು ಎಂದರು.

ಮಾಜಿ ಸೈನಿಕ ಅಶೋಕ ಗದ್ದಿಗೌಡರ ಮಾತನಾಡಿ, ಭಾರತ ಸದೃಢ-ಸುರಕ್ಷಿತವಿದೆ ಎಂದರೆ ಅದು ಭಾರತೀಯ ಸೈನ್ಯದಿಂದ. ದೇಶದ ಸುರಕ್ಷತೆಯ ಸಂದರ್ಭದಲ್ಲಿ ಜಾತಿ ಧರ್ಮ ಮರೆತು ಒಟ್ಟಾಗಿ ನಿಲ್ಲಬೇಕು. ಯುವ ಸಮುದಾಯ ಜಾಲತಾಣಗಳಲ್ಲಿ ತಮ್ಮನ್ನು ಕಳೆದುಕೊಳ್ಳುವ ಬದಲು ದೇಶಭಕ್ತಿಯ ಮೂಲಕ ತಮ್ಮನ್ನು ದೇಶಕ್ಕಾಗಿ ಅರ್ಪಿಸಿಕೊಳ್ಳುವಂತಾಗಬೇಕು. ಇಂದಿನ ಪೀಳಿಗೆ ಭಾರತದ ಇತಿಹಾಸವನ್ನು ಅರಿಯಬೇಕಾಗಿದೆ. ಅರಾಜಕತೆಯನ್ನು ಸೃಷ್ಟಿಸುವವರಿಂದ ದೂರವಿರಬೇಕಾಗಿದೆ. ನಾವು ತ್ಯಾಗಕ್ಕೆ ಸಿದ್ಧವಾಗದಿದ್ದರೆ ದೇಶದ ಹಿತ ಸಾಧಿಸಲು ಸಾಧ್ಯವಿಲ್ಲ ಎಂದರು.

ಧರ್ಮಧ್ವಜ ಅಭಿಯಾನದ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ಮಾತನಾಡಿ, ಸೈನಿಕರೆಂದರೆ ದೇಶ ಕಟ್ಟುವ ಕಾರ್ಯದಲ್ಲಿ ಬಲಿಕೊಟ್ಟಾದರೂ ದೇಶಪ್ರೇಮ ಮೆರೆಯುವಂಥವರು. ದೇಶ ರಕ್ಷಿಸುವ ಈ ಸೈನಿಕರನ್ನು ನಿತ್ಯವೂ ಸ್ಮರಿಸಬೇಕು. ಯುವಕರನ್ನು ದೇಶಸೇವೆಗೆ ಸಜ್ಜುಗೊಳಿಸಲು ಅಗ್ನಿವೀರ ತರಬೇತಿಗೊಳಿಸಲಾಗಿದೆ. ಈ ವರ್ಷವೂ ಮತ್ತೆ ನೂರಾರು ಯುವಕರಿಗೆ ಅಗ್ನಿವೀರ ತರಬೇತಿ ನಡೆಸುವ ಉದ್ದೇಶ ಹೊಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಶಂಕರಗೌಡ ಪಾಟೀಲ, ಮಾಜಿ ಸೈನಿಕರಾದ ರೇವಣಪ್ಪ ಕೊಪ್ಪದ, ಕೋಟೆಪ್ಪಗೌಡ ಪಾಟೀಲ, ಕುಮಾರ ಯಳವಟ್ಟಿ, ಸಂತೋಷ ಆರೇರ, ಮೌನೇಶ ಬಡಿಗೇರ, ಪಕ್ಕೀರೇಶ ಅಂಬಿಗೇರ, ಬಾಹುಬಲಿ ಉಪಾಧ್ಯಾಯ, ಚಂದ್ರು ರಾಮಾಪುರ, ಜಗದೀಶ ಮಡಿವಾಳರ ಸೇರಿದಂತೆ ಮಾಜಿ ಸೈನಿಕರ ಕುಟುಂಬದವರು, ಗಣ್ಯರಾದ ದಾನಪ್ಪ ಗಂಟೇರ, ಮಹೇಶ ಪವಾಡಿ, ಪರಶುರಾಮ ಖಂಡೂನವರ, ವಿಜಯಕುಮಾರ ದೊಡ್ಡಮನಿ, ಅಣ್ಣಪ್ಪ ಚಿಕ್ಕಣ್ಣನವರ, ರಾಮು ಯಳ್ಳೂರ, ಮಹೇಶ ಹಿರೇಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೆರವಣಿಗೆ: ಪಟ್ಟಣದ ಕುಮಾರೇಶ್ವರ ವಿರಕ್ತಮಠದಿಂದ ಮಹಾತ್ಮಾಗಾಂಧಿ ವೃತ್ತದವರೆಗೆ ಕಾರ್ಗಿಲ ದಿನಾಚರಣೆ ಅಂಗವಾಗಿ ಮಾಜಿ ಸೈನಿಕರು ಬೈಕ್ ಹಾಗೂ ಕಾರ್ ರ‍್ಯಾಲಿ ನಡೆಸಿದರು.