ಸಾರಾಂಶ
ದೇಶ ಕಾಪಾಡುವ ಜವಾಬ್ದಾರಿಯ ನಿಟ್ಟಿನಲ್ಲಿ ಗಡಿಯಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ವೀರ ಯೋಧರು ರಾಷ್ಟ್ರದ ಬಹು ದೊಡ್ಡ ಶಕ್ತಿ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ದೇಶ ಕಾಪಾಡುವ ಜವಾಬ್ದಾರಿಯ ನಿಟ್ಟಿನಲ್ಲಿ ಗಡಿಯಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ವೀರ ಯೋಧರು ರಾಷ್ಟ್ರದ ಬಹು ದೊಡ್ಡ ಶಕ್ತಿಯಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಪ್ರಜೆಯು ಅವರ ಸ್ಮರಣೆ ಮಾಡಬೇಕೆಂದು ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ನುಡಿದರು.ಪಟ್ಟಣದ ಎಂ.ಜಿ.ಹೌಸಿಂಗ್ ಕಾಲೋನಿಯಲ್ಲಿರುವ ಶ್ರೀ ಉದ್ಭವ ಬಸವೇಶ್ವರ ದೇವಸ್ಥಾನದಲ್ಲಿ ಭಾರತೀಯ ಸೇನೆಯಲ್ಲಿ ಸುಮಾರು 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಿಎಚ್‌ಎಂ ಹುದ್ದೆಯಿಂದ ನಿವೃತ್ತರಾದ ಯೋಧ ಶಂಕರೆಪ್ಪ ಸಿದ್ದಪ್ಪ ಮಲಕನ್ನವರ ಅವರು ಶನಿವಾರ ಬೈಲಹೊಂಗಲಕ್ಕೆ ಆಗಮಿಸಿದ ಪ್ರಯುಕ್ತ ತಾಲೂಕು ಮಾಜಿ ಸೈನಿಕರ ಸಮನ್ವಯ ಸಮಿತಿ, ಗೆಳೆಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡ ಸ್ವಾಗತ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಜೀವನದಲ್ಲಿ ಯೋಧ ಆಗಬೇಬೇಕಾದರೆ ಪೂರ್ವ ಜನ್ಮದ ಪುಣ್ಯ ಇರಬೇಕು. ಸೇವಾ ಅವಧಿಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಕರ್ತವ್ಯ ಯಶಸ್ವಿಗೊಳಿಸಿ ತಾಯ್ನಾಡಿಗೆ ಆಗಮಿಸಿದ ನಿವೃತರಾದಂತ ಸೈನಿಕರು ಬದುಕಿನಲ್ಲಿ ಸದಾ ಕ್ರೀಯಾಶೀಲರಾಗಿರಬೇಕೆಂದರು.
ತವಗ ಮಠದ ಸಿದ್ದಲಿಂಗಯ್ಯ ಸ್ವಾಮೀಜಿ, ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಸಾನ್ನಿಧ್ಯ ವಹಿಸಿ ಸೈನಿಕರ ಯಶೋಗಾಥೆಯ ಕುರಿತು ಮಾತನಾಡಿದರು. ರೈತ ಧುರೀಣ ಶಂಕರೆಪ್ಪ ಯಡಳ್ಳಿ ಸಭೆಯ ಅಧ್ಯಕ್ಷತೆ ವಹಿಸಿದರು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಖರ ಮಾಡಲಗಿ, ಬೆಳಗಾವಿ ಎಕೆಎಂಎಸ್‌ಎಸ್ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ, ಶ್ರೀ ಉದ್ಭವ ಬಸವೇಶ್ವರ ಸೇವಾ ಸಂಘದ ಅಧ್ಯಕ್ಷ ಗಂಗಪ್ಪ ಗುಗ್ಗರಿ, ಮಾಜಿ ಸೈನಿಕರ ಸಮನ್ವಯ ಸಮೀತಿಯ ತಾಲೂಕಾಧ್ಯಕ್ಷ ಬಿ.ಬಿ.ಬೋಗೂರ, ಯೋಧನ ತಾಯಿ ಕಾಶವ್ವ, ಪತ್ನಿ ಸುನೀತಾ ಮಲಕನ್ನವರ, ಸೋಮಲಿಂಗಪ್ಪ ಹರ್ಲಾಪೂರ, ಉಳವಪ್ಪ ದೇಗಾಂವಿ, ಮಲ್ಲಿಕಾರ್ಜುನ ಅಂಬೋಜಿ, ಮಾಜಿ ತಾಪಂ ಸದಸ್ಯ ಸುಭಾಶ ಮಲಕನ್ನವರ, ಕಾಡಪ್ಪ ಮಲಕನ್ನವರ, ಚಚಡಿಯ ಮಲ್ಲನಗೌಡಾ ಪಾಟೀಲ, ವೇಧಿಕೆ ಮೇಲಿದ್ದರು. ಮಲ್ಲಕನ್ನವರ ಕುಟುಂಬಸ್ಥರು, ನೂರಾರು ಸಂಖ್ಯೆಯಲ್ಲಿ ಮಾಜಿ ಸೈನಿಕರು ಪಾಲ್ಗೊಂಡಿದ್ದರು.ನಿವೃತ ಶಿಕ್ಷಕ ಬಸವರಾಜ ನಾಗನೂರ ಸ್ವಾಗತಿಸಿದರು. ಶಿಕ್ಷಕ ಶಶಿಧರ ಬೆಳ್ಳಿಕಟ್ಟಿ ನಿರೂಪಿಸಿದರು. ಚಂದ್ರಪ್ಪ ಗೌಡರ ವಂದಿಸಿದರು. ಇದಕ್ಕೂ ಮುಂಚೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಶ್ರೀ ಉದ್ಭವ ಬಸವೇಶ್ವರ ದೇವಸ್ಥಾನದವರೆಗೆ ನಿವೃತ ಯೋಧರ ಕುಟುಂಬಸ್ಥರನ್ನು ಸಾರೋಟದಲ್ಲಿ ಮೆರವಣಿಗೆ ಮಾಡಲಾಯಿತು. ತಾಲೂಕು ಮಾಜಿ ಸೈನಿಕರ ಸಮನ್ವಯ ಸಮಿತಿಯ ಸದಸ್ಯರಿಂದ ಬೈಕ್ ರ್‍ಯಾಲಿ ಜರುಗಿತು. ನಿವೃತ ಯೋಧ ಶಂಕರ ಮಲಕನ್ನವರ ಅವರನ್ನು ಸಂಬಂಧಿಗಳು, ಗೆಳೆಯರ ಬಳಗ, ಅಭಿಮಾನಿಗಳು ಸನ್ಮಾನಿಸಿದರು. ವಿವಿಧ ಕ್ಷೇತ್ರದ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.