ಮಂಡ್ಯದ ಜೆಡಿಎಸ್-ಬಿಜೆಪಿ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ

| Published : Mar 29 2024, 12:48 AM IST

ಸಾರಾಂಶ

ಮಂಡ್ಯದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಮೊಟ್ಟಮೊದಲ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆ ಉಭಯ ಪಕ್ಷಗಳ ನಾಯಕರ ಅಭೂತಪೂರ್ವ ಒಗ್ಗಟ್ಟಿಗೆ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಮೊಟ್ಟಮೊದಲ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆ ಉಭಯ ಪಕ್ಷಗಳ ನಾಯಕರ ಅಭೂತಪೂರ್ವ ಒಗ್ಗಟ್ಟಿಗೆ ಸಾಕ್ಷಿಯಾಯಿತು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕೆ.ಸಿ.ನಾರಾಯಣಗೌಡ, ಕೆ.ರಾಮದಾಸ್, ಜಿಲ್ಲಾಧ್ಯಕ್ಷ ಇಂದ್ರೇಶ್‌ ಮತ್ತಿತರ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಸಮನ್ವಯತೆಯಿಂದ ಕೆಲಸ ಮಾಡಿ, ರಾಜ್ಯದ ಎಲ್ಲಾ 28 ಸ್ಥಾನಗಳ ಗೆಲುವಿಗೆ ಶ್ರಮಿಸುವ ಒಕ್ಕೊರಲಿನ ತೀರ್ಮಾನವನ್ನು ಸಭೆ ಕೈಗೊಂಡಿತು. ಮಂಡ್ಯದಲ್ಲಿ ಜೆಡಿಎಸ್‌ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ನಾರಾಯಣ ಗೌಡ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ಕುಮಾರಸ್ವಾಮಿಯವರಿಗೆ ನೀವು ನಾಮಪತ್ರ ಸಲ್ಲಿಸಿ ಹೋಗಿ, ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಧೈರ್ಯ ತುಂಬಿದರು. ಜೆಡಿಎಸ್ ಬಿಡಲು ಮುಂದಾಗಿದ್ದ ಕೆ.ಎಸ್.ವಿಜಯ್‌ಆನಂದ್ ಕೂಡ ಭಾಗಿಯಾಗಿದ್ದು ವಿಶೇಷವಾಗಿತ್ತು. ಜೆಡಿಎಸ್-ಬಿಜೆಪಿ ಮೈತ್ರಿ ಹಾಲು-ಜೇನಿನಂತೆ: ಎಚ್ಡಿಕೆ

ನಾನು ಪಲಾಯನವಾದಿಯಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಡಕ್ಕೆ ಮಣಿದು, ಜನರ ಅಪೇಕ್ಷೆಗೆ ತಲೆಬಾಗಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಲು ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ನಗರದಲ್ಲಿ ಗುರುವಾರ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಆರಂಭದಲ್ಲಿ ಡಿ.ಸಿ.ತಮ್ಮಣ್ಣ ಹಾಗೂ ಪುಟ್ಟರಾಜು ಸ್ಪರ್ಧೆ ಮಾಡಬೇಕೆಂದು ಚರ್ಚೆ ನಡೆದಿದ್ದು ನಿಜ. ಆದರೆ, ಎರಡೂ ಪಕ್ಷದ ಕಾರ್ಯಕರ್ತರು, ನಾಯಕರು ನಿಮ್ಮ ಅವಶ್ಯಕತೆ ಇದೆ, ಬರಲೇಬೇಕೆಂದು ಆದೇಶ ಮತ್ತು ಸಲಹೆ ಕೊಟ್ಟಿದ್ದರು. ಸ್ಪರ್ಧಿಸುವ ಆದೇಶ ಕಾರ್ಯಕರ್ತರಿಂದ ಬಂದಿದೆ. ಹಾಗಾಗಿ ಜನರ ನಿರೀಕ್ಷೆಯನ್ನು ಹುಸಿಗೊಳಿಸದೆ, ಅವರ ಭಾವನೆಗಳಿಗೆ ಧಕ್ಕೆ ತರದೆ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಸಹಜವಾದ ಮೈತ್ರಿ. ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿ ನಿರ್ಧಾರ ಮಾಡಲಾಗಿದೆ. ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆ ಹಾಲು-ಜೇನಿನಂತೆ ಮಧುರವಾಗಿದೆ. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ದೇವೇಗೌಡರು ಹೇಳಿರಲಿಲ್ಲ. ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು ಎಂದರು.

ರಾಜ್ಯಕ್ಕೆ ಸುಭದ್ರ ಸರ್ಕಾರದ ಅವಶ್ಯಕತೆ ಇದೆ. ಈ ಚುನಾವಣೆ ನಂತರ ಮುಂದಿನ ಡಿಸೆಂಬರ್ ತಿಂಗಳೊಳಗೆ ಸರ್ಕಾರ ಪತನವಾಗಲಿದೆ. ಸರ್ಕಾರ ಬೀಳಿಸುವುದಕ್ಕೆ ನಾವು, ವಿಜಯೇಂದ್ರ ಕಷ್ಟಪಡಬೇಕಿಲ್ಲ. ಅವರೇ ಅವರ ಸರ್ಕಾರವನ್ನು ಬೀಳಿಸಿಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.

ಸಂಸದೆ ಸುಮಲತಾ ಬಗ್ಗೆ ಮಾತನಾಡಿ, ಅವರು ನನಗೆ ಶಾಶ್ವತ ಶತ್ರುವೇನಲ್ಲ. ನಾನು ಹಾಗೂ ಅಂಬರೀಶ್ ಹಲವು ವರ್ಷದ ಸ್ನೇಹಿತರು. ಸುಮಲತಾ ಅವರೂ ಕೂಡ ನನಗೆ ಊಟ ಬಡಿಸಿದ್ದಾರೆ. ಅವರೂ ಸಹ ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ಸುಮಲತಾ ಅವರೂ ಬೆಂಬಲಿಗರ ಸಭೆ ನಡೆಸಿ ನಿರ್ಧಾರ ಮಾಡಿ ನನಗೆ ಬೆಂಬಲ ಘೋಷಣೆ ಮಾಡುತ್ತಾರೆ. ಅಗತ್ಯವಿದ್ದರೆ ಅವರನ್ನು ಭೇಟಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಗುರುವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ನಂಜಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಅಕ್ಕಿ, ಬೆಲ್ಲದ ಮೂಲಕ ತುಲಾಭಾರ ಸೇವೆ ಸಮರ್ಪಿಸಿದರು. ನಂತರ, ಪಾರ್ವತಿದೇವಿ, ಸುಬ್ರಹ್ಮಣ್ಯ, ನಾರಾಯಣಸ್ವಾಮಿ ದೇವಾಲಯಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು.ಮಂಡ್ಯದ ಬಿಜೆಪಿ-ಜೆಡಿಎಸ್‌ ಸಮನ್ವಯ ಸಭೆಗೆ ಸುಮ ಗೈರು:ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಸಂಸದೆ ಸುಮಲತಾ ಮೌನಕ್ಕೆ ಶರಣಾಗಿದ್ದಾರೆ. ಅಲ್ಲದೆ, ಗುರುವಾರ ನಗರದಲ್ಲಿ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆಗೂ ಹಾಜರಾಗದೆ ದೂರ ಉಳಿದಿದ್ದು, ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.ಸುಮಲತಾ ಮೌನ ನಡೆಗೆ ಮೈತ್ರಿ ನಾಯಕರು ಮುನಿಸು ಪ್ರದರ್ಶಿಸುತ್ತಿರುವಂತೆ ಕಂಡು ಬರುತ್ತಿದೆ. ಹೀಗಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆ.ಸಿ.ನಾರಾಯಣಗೌಡ ಅವರೂ ಸಹ ಸುಮಲತಾ ಹೆಸರನ್ನು ಸ್ಮರಿಸುವ ಗೋಜಿಗೂ ಹೋಗಲಿಲ್ಲ.

ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅವರು ಶನಿವಾರ (ಮಾ.30) ಬೆಂಗಳೂರಿನ ತಮ್ಮ ನಿವಾಸದಲ್ಲಿ ಬೆಂಬಲಿಗರು, ಆಪ್ತರ ಸಭೆ ಕರೆದಿದ್ದು ತಮ್ಮ ಮುಂದಿನ ರಾಜಕೀಯ ನಡೆಯನ್ನು ನಿರ್ಧರಿಸಲಿದ್ದಾರೆ.

ಅಂದು ಮಧ್ಯಾಹ್ನ 2.30ಕ್ಕೆ ಸಭೆ ನಿಗದಿಪಡಿಸಿದ್ದು, ಮುಂದಿನ ರಾಜಕೀಯ ನಡೆ ಹೇಗಿರಬೇಕೆಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುವ ಮೂಲಕ ಜೆಡಿಎಸ್-ಬಿಜೆಪಿ ಮೈತ್ರಿ ಒಪ್ಪಿ ಮೈತ್ರಿ ಧರ್ಮ ಪಾಲಿಸುವುದೋ ಅಥವಾ ಬಿಜೆಪಿ ಹೈಕಮಾಂಡ್‌ನಿಂದ ಸಿಗಬಹುದಾದ ಸ್ಥಾನ-ಮಾನಗಳನ್ನು ನಿರೀಕ್ಷಿಸುವುದೋ ಅಥವಾ ರಾಜಕೀಯವಾಗಿ ತಟಸ್ಥ ಧೋರಣೆ ಅನುಸರಿಸುವುದೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ಗೆ ನಿದ್ದೆ ಬರ್ತಿಲ್ಲ: ಬಿವೈವಿಒಂಭತ್ತು ತಿಂಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಅಧಿಕಾರದ ಅಮಲಿನಿಂದ ತೇಲುತ್ತಿದೆ. ಕಷ್ಟದಲ್ಲಿರುವ ಜನರ ಬಗ್ಗೆ ಮುಖ್ಯಮಂತ್ರಿಗಳಿಗೆ ಕನಿಕರವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.ನಗರದಲ್ಲಿ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲವಿದೆ. ೮೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನ-ಜಾನುವಾರುಗಳು ಕುಡಿಯುವ ನೀರು, ಮೇವಿಲ್ಲದೆ ಪರಿತಪಿಸುತ್ತಿವೆ. ಬರಗಾಲದಿಂದ ತತ್ತರಿಸುತ್ತಿರುವ ಜನರ ಜೀವನಕ್ಕೆ ಭದ್ರತೆ ಒದಗಿಸದೆ ಗ್ಯಾರಂಟಿ ಸಮಾವೇಶಗಳನ್ನು ನಡೆಸುತ್ತಾ ದುಂದುವೆಚ್ಚ ಮಾಡುತ್ತಿದೆ ಎಂದು ಟೀಕಿಸಿದರು.ಕಾಂಗ್ರೆಸ್ ಜಾತಿ-ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದೆ. ಬಿಜೆಪಿ-ಜೆಡಿಎಸ್ ರಾಜ್ಯದಲ್ಲಿ ಒಂದಾಗುತ್ತಿದ್ದಂತೆ ಕಾಂಗ್ರೆಸ್‌ಗೆ ನಿದ್ರೆ ಬರುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ತತ್ತರಿಸಿ ಹೋಗಿದ್ದಾರೆ. ಭಯದಿಂದ ಮಂತ್ರಿಯಾಗಿರುವವರು ಚುನಾವಣೆ ಅಭ್ಯರ್ಥಿ ಆಗಲಿಲ್ಲ. ಜನರಿಂದ ಜನರಿಗಾಗಿ ಇರುವ ಕುಮಾರಸ್ವಾಮಿ ಮಂಡ್ಯದಿಂದ ಸಂಸದರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ರಾಜ್ಯದ ೨೮ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ೨೮ಕ್ಕೆ ೨೮ ಸ್ಥಾನಗಳನ್ನು ಗೆಲ್ಲುವುದೇ ನಮ್ಮ ಗುರಿ. ಮೈಮರೆಯುವ ಪ್ರಶ್ನೆಯೇ ಇಲ್ಲ. ದೇವೇಗೌಡರು, ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಎಲ್ಲರೂ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ನಾವೇ ನಾಯಕರು, ಅಭ್ಯರ್ಥಿ ಎಂದು ತಿಳಿದು ಕಾರ್ಯಕರ್ತರು ಕೆಲಸ ಮಾಡಬೇಕು. ಚುನಾವಣೆ ಮುಗಿಯುವವರೆಗೂ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಮಂಡ್ಯದಿಂದಲೇ ಮೊದಲ ಫಲಿತಾಂಶ ಹೊರಬರಬೇಕು ಎಂದು ಹೇಳಿದರು.