ಕೃಷ್ಣಚಾರಿ ಅವರ ಕಲಾಕೃತಿಗಳು ಇದಕ್ಕೆ ಉತ್ತಮ ಉದಾಹರಣೆಯಾಗಿವೆ ಎಂದರು. ಹಾಸನದಲ್ಲಿ ಸಮರ್ಪಕವಾದ ಆರ್ಟ್ ಗ್ಯಾಲರಿ ನಿರ್ಮಾಣವಾದರೆ ಜಿಲ್ಲೆಯ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ದೊರೆಯಲಿದೆ. ಇಂತಹ ಕಲಾ ಪ್ರದರ್ಶನಗಳಿಗೆ ಹೆಚ್ಚಿನ ಮೆರಗು ದೊರೆಯುವುದಲ್ಲದೆ, ಸ್ಥಳೀಯ ಕಲಾವಿದರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಸಿಗಲಿದೆ. ಹೀಗಾಗಿ ಹಾಸನದಲ್ಲಿ ಕಲಾ ಗ್ಯಾಲರಿ ನಿರ್ಮಾಣದ ಕುರಿತು ಸಂಸದರು, ಶಾಸಕರು ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಗಮನಹರಿಸಬೇಕು. ಕಲಾವಿದರಿಗೆ ಶಾಶ್ವತ ಪ್ರದರ್ಶನ ವೇದಿಕೆ ಕಲ್ಪಿಸುವುದು ಜಿಲ್ಲೆಯ ಸಾಂಸ್ಕೃತಿಕ ಬೆಳವಣಿಗೆಗೆ ಮಹತ್ವದ ಕೊಡುಗೆಯಾಗಲಿದೆ ಎಂದು ಕಾರದಕಟ್ಟಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಪ್ರಕೃತಿ, ಪರಿಸರ ಹಾಗೂ ಮಾನವನ ನಡುವಿನ ಅವಿನಾಭಾವ ಸಂಬಂಧವನ್ನು ವಿಭಿನ್ನ ಕಲಾತ್ಮಕ ದೃಷ್ಟಿಕೋನದಲ್ಲಿ ಕಟ್ಟಿಕೊಡುವ ಮೂಲಕ ಯುವ ಚಿತ್ರಕಲಾವಿದ ಕೃಷ್ಣಚಾರಿ ಅವರು ತಮ್ಮದೇ ಆದ ಕಲಾ ಭಾಷೆಯನ್ನು ರೂಪಿಸಿಕೊಂಡಿದ್ದಾರೆ ಎಂದು ನಿರ್ಮಲಾ ಕಲಾ ಶಾಲೆಯ ನಿವೃತ್ತ ಪ್ರಾಚಾರ್ಯ ಆರ್. ಸಿ. ಕಾರದಕಟ್ಟಿ ಅಭಿಪ್ರಾಯಪಟ್ಟರು.ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರ್ಥಿಕ ನೆರವಿನೊಂದಿಗೆ ಆಯೋಜಿಸಿದ್ದ ಕಲಾವಿದ ಕೃಷ್ಣಚಾರಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿ, ಕೃಷ್ಣಚಾರಿ ಅವರ ಕಲಾಕೃತಿಗಳು ಕೇವಲ ಕಣ್ಣಿಗೆ ಕಾಣುವ ದೃಶ್ಯಗಳನ್ನು ಚಿತ್ರಿಸುವುದಕ್ಕೆ ಸೀಮಿತವಾಗಿಲ್ಲ. ಅವುಗಳ ಹಿಂದೆ ಪರಿಸರದ ಬಗ್ಗೆ ಕಾಳಜಿ, ಪ್ರಕೃತಿಯ ಸೂಕ್ಷ್ಮತೆಯನ್ನು ಗ್ರಹಿಸುವ ಮನಸ್ಸು ಹಾಗೂ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಪ್ರಶ್ನಿಸುವ ಚಿಂತನೆಯೂ ಅಡಗಿದೆ. ಇದೇ ಅವರ ಕಲಾ ಪ್ರಯೋಗದ ವಿಶೇಷತೆ ಎಂದು ಹೇಳಿದರು. ಕಲಾ ಅಭ್ಯಾಸದಲ್ಲಿ ಕೃಷ್ಣಚಾರಿ ಅವರು ಸಾಂಪ್ರದಾಯಿಕ ಮಾಧ್ಯಮಗಳ ಜತೆಗೆ ನೈಸರ್ಗಿಕ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಸೃಜನಾತ್ಮಕವಾಗಿ ಬಳಸಿಕೊಂಡು ತಮ್ಮ ಕಲ್ಪನೆಗಳಿಗೆ ರೂಪ ನೀಡಿದ್ದಾರೆ. ಒಂದೇ ರೀತಿಯ ತಂತ್ರಕ್ಕೆ ಸೀಮಿತವಾಗದೆ ವಿಭಿನ್ನ ಮಾಧ್ಯಮಗಳೊಂದಿಗೆ ಪ್ರಯೋಗ ನಡೆಸಿರುವುದು ಅವರ ಕಲಾಕೃತಿಗಳಿಗೆ ವೈವಿಧ್ಯತೆ ನೀಡಿದೆ ಎಂದರು. ಈ ಏಕವ್ಯಕ್ತಿ ಪ್ರದರ್ಶನದಲ್ಲಿ ವಿವಿಧ ಹಂತಗಳಲ್ಲಿ ಅವರು ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದ್ದು, ಪ್ರತಿಯೊಂದು ಕೃತಿಯೂ ನೋಡುಗರಲ್ಲಿ ವಿಭಿನ್ನ ಭಾವನೆ ಮತ್ತು ಚಿಂತನೆಯನ್ನು ಮೂಡಿಸುವ ಸಾಮರ್ಥ್ಯ ಹೊಂದಿದೆ. ಪ್ರಶಸ್ತಿ ಪಡೆದಿರುವ ಹೆಮ್ಮೆಯ ಕಲಾಕೃತಿಗಳೂ ಪ್ರದರ್ಶನದಲ್ಲಿರುವುದು ವಿಶೇಷವಾಗಿದೆ ಎಂದು ತಿಳಿಸಿದರು. ನಾವು ಸಾಮಾನ್ಯವಾಗಿ ಸುತ್ತಮುತ್ತಲಿನ ಪರಿಸರವನ್ನು ನೋಡುವ ದೃಷ್ಟಿಕೋನವೇ ಬದಲಾಗಬೇಕು. ಕಲಾವಿದನ ಕಣ್ಣುಗಳಿಂದ ನೋಡಿದಾಗ ಸಾಮಾನ್ಯವಾಗಿ ಕಾಣುವ ವಸ್ತುಗಳಲ್ಲಿಯೂ ಸೌಂದರ್ಯ, ಅರ್ಥ ಮತ್ತು ಕಲಾತ್ಮಕತೆ ಗೋಚರಿಸುತ್ತದೆ. ಕೃಷ್ಣಚಾರಿ ಅವರ ಕಲಾಕೃತಿಗಳು ಇದಕ್ಕೆ ಉತ್ತಮ ಉದಾಹರಣೆಯಾಗಿವೆ ಎಂದರು. ಹಾಸನದಲ್ಲಿ ಸಮರ್ಪಕವಾದ ಆರ್ಟ್ ಗ್ಯಾಲರಿ ನಿರ್ಮಾಣವಾದರೆ ಜಿಲ್ಲೆಯ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ದೊರೆಯಲಿದೆ. ಇಂತಹ ಕಲಾ ಪ್ರದರ್ಶನಗಳಿಗೆ ಹೆಚ್ಚಿನ ಮೆರಗು ದೊರೆಯುವುದಲ್ಲದೆ, ಸ್ಥಳೀಯ ಕಲಾವಿದರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಸಿಗಲಿದೆ. ಹೀಗಾಗಿ ಹಾಸನದಲ್ಲಿ ಕಲಾ ಗ್ಯಾಲರಿ ನಿರ್ಮಾಣದ ಕುರಿತು ಸಂಸದರು, ಶಾಸಕರು ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಗಮನಹರಿಸಬೇಕು. ಕಲಾವಿದರಿಗೆ ಶಾಶ್ವತ ಪ್ರದರ್ಶನ ವೇದಿಕೆ ಕಲ್ಪಿಸುವುದು ಜಿಲ್ಲೆಯ ಸಾಂಸ್ಕೃತಿಕ ಬೆಳವಣಿಗೆಗೆ ಮಹತ್ವದ ಕೊಡುಗೆಯಾಗಲಿದೆ ಎಂದು ಕಾರದಕಟ್ಟಿ ಮನವಿ ಮಾಡಿದರು.
ಚಿತ್ರಕಲಾವಿದ ಬಿ.ಎಸ್. ದೇಸಾಯಿ ಮಾತನಾಡಿ, ಯುವ ಕಲಾವಿದ ಕೃಷ್ಣಚಾರಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಹಲವು ಕಾರಣಗಳಿಂದ ವಿಶಿಷ್ಟವಾಗಿದೆ. ಕಲೆಯ ಸ್ವಾದವನ್ನು ಅನುಭವಿಸುವಂತೆ ಮಾಡುವುದರ ಜತೆಗೆ, ಪ್ರತಿಯೊಂದು ಕಲಾಕೃತಿಯೂ ನೋಡುಗರನ್ನು ತಮ್ಮದೇ ರೀತಿಯಲ್ಲಿ ಚಿಂತಿಸುವಂತೆ ಮಾಡುತ್ತದೆ ಎಂದರು. ಒಂದು ಚಿತ್ರವನ್ನು ನೂರು ಮಂದಿ ನೋಡಿದರೂ ಪ್ರತಿಯೊಬ್ಬರಿಗೂ ವಿಭಿನ್ನ ಅನುಭವವಾಗಬಹುದು. ಅವರ ವೈಯಕ್ತಿಕ ಅನುಭವ, ಚಿಂತನೆ ಹಾಗೂ ದೃಷ್ಟಿಕೋನದ ಆಧಾರದ ಮೇಲೆ ಕಲಾಕೃತಿಯ ಅರ್ಥ ಬದಲಾಗುತ್ತದೆ. ಇದೇ ಕಲೆಯ ಶಕ್ತಿ ಎಂದು ಹೇಳಿದರು. ಕೃಷ್ಣಚಾರಿ ಅವರ ಹಲವು ಕಲಾಕೃತಿಗಳು ನೋಡುಗರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕುವ ಹಾಗೂ ಚಿಂತನೆಗೆ ಪ್ರೇರೇಪಿಸುವ ಗುಣ ಹೊಂದಿವೆ. ಕಲಾವಿದ ತನ್ನ ಕೈಚಳಕ, ಕಲ್ಪನೆ ಮತ್ತು ಅನುಭವವನ್ನು ಎಳೆಎಳೆಯಾಗಿ ಕಲಾಕೃತಿಯ ಮೂಲಕ ಹೊರತರುವ ಪ್ರಕ್ರಿಯೆ ಈ ಪ್ರದರ್ಶನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ವಿವರಿಸಿದರು.ಚಿತ್ರಕಲೆಯ ಪ್ರಾತ್ಯಕ್ಷಿಕೆ:
ಇದೇ ಸಂದರ್ಭದಲ್ಲಿ ಚಿತ್ರಕಲಾವಿದ ಬಿ. ಎಸ್. ದೇಸಾಯಿ ಅವರು ಚಿತ್ರಕಲೆಯ ಪ್ರಾತ್ಯಕ್ಷಿಕೆ ನಡೆಸಿ, ಕಲಾಕೃತಿ ರೂಪುಗೊಳ್ಳುವ ವಿವಿಧ ಹಂತಗಳನ್ನು ಕಲಾಭಿಮಾನಿಗಳಿಗೆ ಪರಿಚಯಿಸಿದರು. ಕಲೆಯನ್ನು ಕೇವಲ ನೋಡುವುದಷ್ಟೇ ಅಲ್ಲದೆ, ಅದರ ಸೃಜನಾತ್ಮಕ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಅವಕಾಶವೂ ಪ್ರಾತ್ಯಕ್ಷಿಕೆಯ ಮೂಲಕ ದೊರೆಯಿತು. ಕೃಷ್ಣಚಾರಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಪರಿಸರ, ಪ್ರಕೃತಿ, ಮಣ್ಣು, ಜೀವವೈವಿಧ್ಯತೆ ಹಾಗೂ ಮಾನವ-ಪ್ರಕೃತಿ ಸಂಬಂಧವನ್ನು ವಿವಿಧ ಆಯಾಮಗಳಲ್ಲಿ ಅಭಿವ್ಯಕ್ತಿಪಡಿಸಿರುವ ಕಲಾಕೃತಿಗಳು ಪ್ರದರ್ಶನಕ್ಕೆ ಇಡಲಾಗಿದ್ದು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆದವು.ಕಾರ್ಯಕ್ರಮದಲ್ಲಿ ಎಸ್. ಆರ್. ಎಸ್. ಪ್ರಜ್ಞಾ ವಿದ್ಯಾಶಾಲೆಯ ಕಾರ್ಯದರ್ಶಿ ಎಂ. ನಟರಾಜು, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಹೆಚ್.ಎಸ್. ಮಂಜುನಾಥ್, ಡಿವೈಎಸ್‌ಪಿ ಬಾಲರಾಜು, ಹಿರಿಯ ವ್ಯಂಗ್ಯಚಿತ್ರಕಾರ ಎಂ.ವಿ. ಶಿವರಾಮ್, ಸಾಹಿತಿ ಅನಂತರಾಜು ಸೇರಿದಂತೆ ಕಲಾವಿದರು, ಕಲಾಸಕ್ತರು ಹಾಗೂ ಸಾರ್ವಜನಿಕರು ಇದ್ದರು.