ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಭಗವದ್ಗೀತೆಯಲ್ಲಿ ಹೆಜ್ಜೆ-ಹೆಜ್ಜೆಗೂ ಕಾಣಸಿಗುವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನೆಮ್ಮದಿ ಬದುಕು ಸಾಗಿಸಬಹುದು ಎಂದು ಪಂ. ಆದಿಶೇಷಾಚಾರ್ಯ ಯಲಗೂರ ಹೇಳಿದರು.ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪೂರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಗೀತಾಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿನ ಹಲವು ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರವಿದೆ. ಕೃಷ್ಣ ನುಡಿದಂತೆ ನಾವು ನಡೆದಲ್ಲಿ ಉತ್ತಮ ಜೀವನ ನಡೆಸಬಹುದು. ಅರ್ಜುನನನ್ನು ನಿಮಿತ್ತ ಮಾಡಿಕೊಂಡು ಇಡೀ ಮಾನವಕುಲಕ್ಕೆನೇ ಆತ ದಿವ್ಯ ಸಂದೇಶ ನೀಡಿದ್ದಾನೆ. ಅದನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು ಎಂದರು.
ಅಧರ್ಮರನ್ನು ಸಂವಾರ ಮಾಡುವುದೇ ನಿನ್ನಧರ್ಮ. ದೌರ್ಬಲ್ಯ ಬಿಸಾಕಿ ಅನ್ಯಾಯ ತಡೆದಲ್ಲಿ ಅದುವೇ ಭಗವಂತನ ಪೂಜೆ ಎಂದು ಕೃಷ್ಣ ಅರ್ಜುನನಿಗೆ ಹೇಳುವುದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾನೆ. ಧರ್ಮದ ಪಾಲನೆ ಮಾಡಿದಲ್ಲಿ ಖಂಡಿತವಾಗಿಯೂ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಯಾವುದೇ ಫಲ ನಿರೀಕ್ಷಿಸದೇ ನಮ್ಮ ಕರ್ತವ್ಯ ನಿಷ್ಠೆಯಿಂದ ಮಾಡಿದರೆ ದೇವರು ಒಲಿಯುತ್ತಾನೆ ಎಂಬ ಸಂದೇಶ ಗೀತೆಯಲ್ಲಿದೆಂದರು.ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಗೀತೆ ಸಾರ ಮನುಕುಲಕ್ಕೆ ದಾರಿದೀಪವಾಗಿದೆ. ಅದರ ಸರ್ವಕಾಲಿಕ ಚಿಂತನೆಗಳು ಹಲವು ಸಾವಿರ ವರ್ಷಗಳ ನಂತರವೂ ನಿತ್ಯನೂತನವಾಗಿವೆ. ಅದು ಗೀತೆಯ ಹಿರಿಮೆ ಎಂದು ಬಣ್ಣಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ, ಭಗವದ್ಗೀತೆಯು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗದೇ ಇಡೀ ದೇಶದ ಜನತೆ ಸಾಂಸ್ಕೃತಿಕವಾಗಿ ಒಂದು ಮಾಡಿದೆ. ವಿದ್ಯಾರ್ಥಿಗಳು ನಮ್ಮ ನೈಜ ಸಂಸ್ಕೃತಿ ಮತ್ತು ಪರಂಪರೆ ಅರಿಯಬೇಕು. ದೇಶ ಹಾಗೂ ಧರ್ಮಗ್ರಂಥಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಸ್ವಪ್ನಾಗೌಡರ ಪ್ರಾರ್ಥಿಸಿ, ಉಪನ್ಯಾಸಕಿ ಎಸ್.ಪಿ.ದೇಶಪಾಂಡೆ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಶ್ರವಣಾ ಸಿದ್ನಾಳ ವಂದಿಸಿದರು. ಐಕ್ಯೂಸಿ ಸಂಯೋಜಕ ಡಾ.ಎಸ್.ಎಸ್.ಹಂಗರಗಿ ವೇದಿಕೆ ಮೇಲಿದ್ದರು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.