ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಶಿಷ್ಟ ಜಾತಿಗೆ ಲಭ್ಯವಿರುವ ಶೇ.15ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ವೇಳೆ ರೋಸ್ಟರ್ ಬಿಂದು ನಿಗದಿಯಲ್ಲಿ ಯಾವ ವರ್ಗಕ್ಕೂ ಅನ್ಯಾಯವಾಗದಂತೆ ಪ್ರತಿ 25 ಹುದ್ದೆಗಳ ನೇಮಕಾತಿಗೂ ರೋಸ್ಟರ್ ಬಿಂದುವನ್ನು ರ್‍ಯಾಂಡಮೈಜ್ (ಯಾದೃಚ್ಛಿಕ) ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.ತನ್ಮೂಲಕ ಒಳ ಮೀಸಲಾತಿಯ ರೋಸ್ಟರ್ ಬಿಂದು ಬಗ್ಗೆ ಬಲಗೈ ಸಮುದಾಯಗಳಿಂದ ವ್ಯಕ್ತವಾಗಿದ್ದ ಆಕ್ರೋಶಕ್ಕೆ ಪರಿಹಾರ ಕಂಡುಕೊಳ್ಳಲು ತಕ್ಕಮಟ್ಟಿಗೆ ಯಶಸ್ವಿಯಾಗಿದೆ.
100 ಬಿಂದುಗಳ ರೋಸ್ಟರ್‌ನಲ್ಲಿ ಶೇ.50 ಹುದ್ದೆಗಳು ಸಾಮಾನ್ಯ ವರ್ಗ ಹಾಗೂ ಶೇ.50 ರಷ್ಟು ಹುದ್ದೆಗಳು ಮೀಸಲಾತಿ ಅಡಿ ಬರುತ್ತವೆ. ಈ ಪೈಕಿ ಸಮ ಸಂಖ್ಯೆ ಬಿಂದುಗಳಾದ 2, 4, 6, 8 ರಿಂದ 100 ರವರೆಗಿನ ಸಮ ಸಂಖ್ಯೆಗಳನ್ನು ಸಾಮಾನ್ಯ ವರ್ಗಕ್ಕೆ ಗುರುತಿಸಲಾಗಿದೆ.ಉಳಿದ ಶೇ.50 ರಷ್ಟು ಹುದ್ದೆಗಳಲ್ಲಿ ಬೆಸ ಸಂಖ್ಯೆಗಳ ಬಿಂದುಗಳಾದ 1, 3, 5, 7 ರಿಂದ 99 ರವರೆಗೆ ಎಸ್ಸಿ, ಎಸ್ಟಿ ಹಾಗೂ ಓಬಿಸಿಯ ಮೀಸಲಾತಿ ವರ್ಗಗಳಿಗೆ ಹಂಚಿಕೆ ಮಾಡಲಾಗಿರುತ್ತದೆ.
ಈ ಪೈಕಿ ಪರಿಶಿಷ್ಟ ಜಾತಿಗೆ (ಶೇ.15) 1, 9, 15, 23, 27, 33, 41, 49, 53, 59, 67, 75, 81, 89 ಮತ್ತು 93 ಅನ್ನು ನಿಗದಿಪಡಿಸಲಾಗಿದೆ.
ಆದರೆ, ಇತ್ತೀಚೆಗೆ ಒಳ ಮೀಸಲಾತಿ ಜಾರಿ ವೇಳೆ 1 ರ ರೋಸ್ಟರ್ ಬಿಂದುವನ್ನು ಎಡಗೈ (ಗ್ರೂಪ್ ಎ) ಸಮುದಾಯಗಳಿಗೆ, 9ರ ಬಿಂದುವನ್ನು ಬಲಗೈ ಸಮುದಾಯಗಳಿಗೆ (ಗ್ರೂಪ್ ಬಿ) ಹಾಗೂ 15 ರ ಬಿಂದುವನ್ನು ಸಿ ಗ್ರೂಪ್‌ನ ಜಾತಿಗಳಿಗೆ ಗುರುತಿಸಿ ದಾವಣಗೆರೆ ವಿಶ್ವವಿದ್ಯಾಲಯವು ನೇಮಕಾತಿ ಅಧಿಸೂಚನೆ ಹೊರಡಿಸಿತ್ತು.
ರೋಸ್ಟರ್ ಬಿಂದುವಿನಲ್ಲಿ ಎಡಗೈಗೆ ಮೊದಲ ಆದ್ಯತೆ ನೀಡಿದರೆ ಬಲಗೈ ಪ್ರಾತಿನಿಧ್ಯತೆ ಕಳೆದುಕೊಳ್ಳಲಿದೆ. ಬಲಗೈ ಜಾತಿಗಳು ಪ್ರತಿ ನೇಮಕಾತಿ ವೇಳೆಯೂ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ಇದರಿಂದ ತೀವ್ರ ಅನ್ಯಾಯವಾಗುತ್ತದೆ ಎಂದು ಬಲಗೈ ಜಾತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.ಸಂಪುಟ ಕಂಡುಕೊಂಡ ಪರಿಹಾರವೇನು?:
ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದ ತಾಂತ್ರಿಕ ಸಮಿತಿಯು, ಪ್ರತಿ ಬ್ಲಾಕ್ ಅಂದರೆ ಪ್ರತಿ 25 ಹುದ್ದೆಗಳಿಗೆ ಸಮಾನ ಆದ್ಯತೆ ನೀಡಲು ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಪ್ರಥಮ ಬಿಂದುಗಳನ್ನು ರ್‍ಯಾಂಡಮೈಜ್ ಮಾಡಲು ಶಿಫಾರಸು ಮಾಡಿದೆ.ಮೊದಲ 25 ಹುದ್ದೆಗಳಿಗೆ ಎ, ಬಿ, ಸಿ ಹಾಗೂ 20-50 ಹುದ್ದೆಗಳಿಗೆ ಬಿ, ಸಿ, ಎ ಹಾಗೂ 50-75 ಹುದ್ದೆಗಳಿಗೆ ಸಿ,ಎ,ಬಿ, ಹಾಗೂ 75-100 ಹುದ್ದೆಗಳಿಗೆ ಎ,ಬಿ,ಸಿ ಹುದ್ದೆಗಳಿಗೆ ಕ್ರಮವಾಗಿ ಅವಕಾಶ ನೀಡಲಾಗುವುದು.
ಈ ವೇಳೆ ಪ್ರತಿ 25 ಹುದ್ದೆಗಳ ನೇಮಕಾತಿ ವೇಳೆಯೂ ಪ್ರಥಮ ರೋಸ್ಟರ್ ಬಿಂದು ಮೂರೂ ವರ್ಗಗಳಿಗೆ ಸಮಾನವಾಗಿ ಬದಲಾಗುತ್ತದೆ. ಹೀಗಾಗಿ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದು ಶಿಫಾರಸು ಮಾಡಿತ್ತು.ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ರ್‍ಯಾಂಡಮೈಜ್ ಆಧಾರದ ಮೇಲೆ ರೋಸ್ಟರ್ ಬಿಂದು ನಿಗದಿ ಮಾಡಲು ತೀರ್ಮಾನ ಮಾಡಲಾಗಿದೆ.8 ಹುದ್ದೆಗಿಂತ ಕಡಿಮೆಯಿದ್ದ ಹುದ್ದೆಗೆ ಮೊದಲು ಒಳ ಮೀಸಲಾತಿಯಿಲ್ಲ:
ಯಾವುದೇ ಸಂಸ್ಥೆಗಳಲ್ಲಿ 8 ಹುದ್ದೆಗಳಿಗಿಂತ ಕಡಿಮೆ ಹುದ್ದೆಗಳಿಗೆ ಪ್ರಪ್ರಥಮವಾಗಿ ಒಳ ಮೀಸಲಾತಿ ಆಧಾರಿತ ನೇಮಕಾತಿ ಪ್ರಕ್ರಿಯೆ ತೆಗೆದುಕೊಳ್ಳುವಾಗ ಪ್ರಥಮ ಬಿಂದು ಮೀಸಲಾತಿಗಾಗಿ 3 ವರ್ಗಗಳ (ಎ,ಬಿ,ಸಿ) ಪೈಕಿ ಹೆಚ್ಚು ಅರ್ಹತೆ ಹೊಂದಿರುವವರಿಗೆ ನೀಡಬೇಕು ಎಂದು ಸಂಪುಟ ತೀರ್ಮಾನ ಮಾಡಿದೆ.ಹೀಗಾಗಿ 8 ಹುದ್ದೆಗಳಿಗಿಂತ ಕಡಿಮೆ ಹುದ್ದೆಗಳಿಗೆ ಮೊದಲ ಬಾರಿಗೆ ನೇಮಕಾತಿ ಮಾಡಿದರೆ ಎಸ್ಸಿ ಒಳ ಮೀಸಲಾತಿ ಅನ್ವಯವಾಗುವುದಿಲ್ಲ. ಆದರೆ, ಮುಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ಈಗಾಗಲೇ ಮೀಸಲಾತಿ ಪಡೆದಿರುವ ವರ್ಗವನ್ನು ಹೊರತುಪಡಿಸಿ ಎರಡನೇ ಸುತ್ತಿನ ನೇಮಕಾತಿಯಲ್ಲಿ ಬೇರೆ ವರ್ಗಗಳಿಂದ ಬಿಂದು ಪ್ರಾರಂಭ ಮಾಡಲು ತೀರ್ಮಾನಿಸಲಾಗಿದೆ.