ಸಾರಾಂಶ
ಚಿತ್ರದುರ್ಗ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಕಾರ್ಯ ಮಾಡುತ್ತಿದೆ ಎಂದು ವಿಧಾನ ಪತಿಷತ್ ಸದಸ್ಯ ಪುಟ್ಟಣ್ಣಯ್ಯ ಹೇಳಿದರು.
ನಗರದ ದುರ್ಗದಸಿರಿ ಹೋಟೇಲ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇದುವರೆಗೂ ಶಿಕ್ಷಕರ, ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುವುದರ ಮೂಲಕ ಸರ್ಕಾರದಿಂದ ಸೌಲಭ್ಯ ಕೊಡಿಸಲಾಗಿದೆ. ಇದರಲ್ಲಿ ಯಾವುದೇ ರಾಜಕಾರಣ ಮಾಡಿಲ್ಲ. ಸರ್ಕಾರ ತನ್ನ 7ನೇ ವತನ ಆಯೋಗದ ಶಿಫಾರಸ್ಸಿನಂತೆ ವೇತನ ನೀಡಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದರು.
2006ರ ನಂತರ ನೌಕರಿ ಸೇರಿದವರಿಗೆ ಮೊದಲಿನಂತೆಯೇ ನಿವೃತ್ತಿ ವೇತನ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗಿದೆ. ಅನುದಾನಿತ ಮತ್ತು ಅನುದಾನ ರಹಿತ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಪರವಾಗಿ ಸರ್ಕಾರ ವಿಶೇಷ ಕಾಳಜಿ ತೋರಿದ್ದು, ಅವರಿಗೂ ಸಹಿತ ನೆರವಾಗಲು ಸರ್ಕಾರ ಪಣ ತೊಟ್ಟಿದೆ.
ಶಿಕ್ಷಕರು ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಸಲುವಾಗಿ ಬೆಂಗಳೂರಿನಲ್ಲಿ 140 ದಿನ ಹೋರಾಟ ಮಾಡಿದರು. ಅಂದಿನ ಬಿಜೆಪಿ ಸರ್ಕಾರ ಇದರ ಬಗ್ಗೆ ಯಾವ ರೀತಿಯ ಕಾಳಜಿ ತೋರಿಸಲಿಲ್ಲ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಣಮಿಸಿದೆ. ಆರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕೆಂದು ತೀರ್ಮಾನ ಮಾಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೈಲಾರಪ್ಪ, ಕೆಡಿಪಿ ಸಭೆಯ ಸದಸ್ಯ ಕೆ.ಸಿ.ನಾಗರಾಜ್, ಮುದಸಿರ್ ನವಾಜ್, ಜಿಪಂ.ಮಾಜಿ ಸದಸ್ಯರಾದ ನರಸಿಂಹರಾಜು, ಲಕ್ಷ್ಮೀಕಾಂತ, ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ವೆಂಕಟೇಶ್ ಸೇರಿ ಹಲವರು ಭಾಗವಹಿಸಿದ್ದರು.