ಸಾರಾಂಶ
ಸಾರಿಗೆ ನೌಕರರಿಗೆ ಬರಬೇಕಾದ 38 ತಿಂಗಳ ಹಿಂಬಾಕಿಯನ್ನು ನಿವೃತ್ತರಿಗೂ ಸಹಿತ ಕೂಡಲೇ ಬಿಡುಗಡೆ ಮಾಡಬೇಕು, ಈಗಾಗಲೇ ಮುಖ್ಯಮಂತ್ರಿ ಹೇಳಿದಂತೆ 14 ತಿಂಗಳ ಹಿಂಬಾಕಿಯನ್ನು ದೀಪಾವಳಿ ಮುನ್ನವೇ ಬಿಡುಗಡೆ ಮಾಡಬೇಕು.
ಧಾರವಾಡ:
ಸಾರಿಗೆ ನೌಕರರ ನಾಲ್ಕು ನಿಗಮಗಳ ಸಂಘಟನೆಯು ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಚ್. ನೀರಲಕೇರಿ ಹೇಳಿದರು.ಇಲ್ಲಿಯ ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ನಡೆದ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ವಿಚಾರ ಸಂಕಿರಣ ಸಭೆಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರಿಗೆ ಬರಬೇಕಾದ 38 ತಿಂಗಳ ಹಿಂಬಾಕಿಯನ್ನು ನಿವೃತ್ತರಿಗೂ ಸಹಿತ ಕೂಡಲೇ ಬಿಡುಗಡೆ ಮಾಡಬೇಕು, ಈಗಾಗಲೇ ಮುಖ್ಯಮಂತ್ರಿ ಹೇಳಿದಂತೆ 14 ತಿಂಗಳ ಹಿಂಬಾಕಿಯನ್ನು ದೀಪಾವಳಿ ಮುನ್ನವೇ ಬಿಡುಗಡೆ ಮಾಡಲು ಆಗ್ರಹಿಸಿದರು. ರಾಜ್ಯದ ನಾಲ್ಕು ನಿಗಮಗಳ ಬೇಡಿಕೆ ಈಡೇರಿಸಲು ಎಲ್ಲ ಸಂಘಟನೆಗಳು ಒಗ್ಗಟ್ಟಾಗಿ ಸರ್ಕಾರಕ್ಕೆ ಸಲ್ಲಿಸಿದಲ್ಲಿ ನ್ಯಾಯ ಸಿಗಲು ಸಾಧ್ಯ ಎಂದರು.
ಸಾರಿಗೆ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ ಘೋರ್ಪಡೆ, ಮಾತನಾಡಿ, ಸಾರಿಗೆ ನೌಕರರ ಕಾನೂನಾತ್ಮಕ ಹೋರಾಟ ಅವಶ್ಯವಾಗಿದೆ. ನಾವು ಸದಾ ನಿಮ್ಮ ಬೆಂಬಲಕ್ಕಿದ್ದೇವೆ ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸಾರಿಗೆ ನಿಗಮಗಳ ಕೂಟದ ರಾಜ್ಯ ಗೌರವಾಧ್ಯಕ್ಷ ಬಿ.ಎಸ್. ಸುರೇಶ, ನೌಕರರ 14 ತಿಂಗಳ ಹಿಂಬಾಕಿ ಸರ್ಕಾರ ಘೋಷಿಸಿದ್ದು, ಉಳಿದ 24 ತಿಂಗಳ ಹಿಂಬಾಕಿಯನ್ನು ಆಯಾ ನಿಗಮಗಳು ನೀಡಲು ಒತ್ತಾಯಿಸಿದರು.
ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ನಿರ್ಣಯಿಸುವ ಅಧಿಕಾರವನ್ನು ಪಿ.ಎಚ್. ನೀರಲಕೇರಿ, ಬಿ.ಎಸ್. ಸುರೇಶ, ಬ್ಯಾಟರಾಜು. ರಾಜಶೇಖರ್ ಘೋರ್ಪಡೆ ಹಾಗೂ ಚಂದ್ರಶೇಖರ ಅವರಿಗೆ ನೀಡಿದೆ ಎಂದು ನಿರ್ಣಯಿಸಲಾಯಿತು. ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೂಟದ ಅಧ್ಯಕ್ಷ ಚಂದ್ರಶೇಖರ ಮಾತನಾಡಿದರು. ವೇದಿಕೆಯಲ್ಲಿ ಎಚ್.ಎ. ಜಾಗಿರದಾರ, ವಿ.ಜಿ. ಕೊಂಗವಾಡದ, ಸಿದ್ದಣ್ಣ ಕಂಬಾರ, ಆರ್.ಎಸ್. ಕುಲಕರ್ಣಿ, ವಿ.ಕೆ. ನಡುವಿನಮಣಿ ಇದ್ದರು.