ಹಾರೋಹಳ್ಳಿ: ಸದಸ್ಯರು ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಸಂಘದ ಆರ್ಥಿಕ ಬೆಳವಣಿಗೆಗೆ ಸಹಕರಿಸಬೇಕು ಎಂದು ಮರಳವಾಡಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ್ ತಾವರ್ ಮನವಿ ಮಾಡಿದರು

ಹಾರೋಹಳ್ಳಿ: ಸದಸ್ಯರು ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಸಂಘದ ಆರ್ಥಿಕ ಬೆಳವಣಿಗೆಗೆ ಸಹಕರಿಸಬೇಕು ಎಂದು ಮರಳವಾಡಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ್ ತಾವರ್ ಮನವಿ ಮಾಡಿದರು.

ಮರಳವಾಡಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ಹಂತಹಂತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ. ರೈತರು ಹಾಗೂ ಸದಸ್ಯರ ಅಗತ್ಯಗಳಿಗೆ ಸ್ಪಂದಿಸುವುದು ಸಂಘದ ಪ್ರಮುಖ ಉದ್ದೇಶ. ಈಗಾಗಲೇ ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ನೆರವು ನೀಡಲಾಗಿದೆ. ರೈತರ ಅನುಕೂಲಕ್ಕಾಗಿ ಬೆಳೆ ಸಾಲ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ರೈತರ ಬೇಡಿಕೆ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿವಿಧ ಸಾಲ ಸೌಲಭ್ಯ ಪಡೆಯಿರಿ:

ವಾರ್ಷಿಕ ಆಯವ್ಯಯ ಮಂಡಿಸಿದ ಸಂಘದ ಸಿಇಒ ಉಮೇಶ್, ಸರ್ಕಾರ ಹಾಗೂ ಸಹಕಾರ ಸಂಘಗಳ ಮೂಲಕ ದೊರೆಯುವ ವಿವಿಧ ಸೌಲಭ್ಯಗಳನ್ನು ಅರ್ಹರು ಸದುಪಯೋಗ ಪಡಿಸಿಕೊಳ್ಳಬೇಕು. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸಂಘಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಹಸು, ಕುರಿ, ಮೇಕೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಸಾಲ ಸೌಲಭ್ಯಗಳು ಸಂಘದಲ್ಲಿ ಲಭ್ಯವಿದ್ದು, ಅರ್ಹ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘದ ಅಭಿವೃದ್ಧಿ ಹಾಗೂ ಸದಸ್ಯರ ಆರ್ಥಿಕ ಪ್ರಗತಿ ಪರಸ್ಪರ ಅವಲಂಬಿತವಾಗಿದ್ದು, ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಬೇಕು ಎಂದು ಉಮೇಶ್ ಹೇಳಿದರು.

22ಕೆಆರ್ ಎಂಎನ್ 3.ಜೆಪಿಜಿ

ಹಾರೋಹಳ್ಳಿ ತಾಲೂಕಿನ ಮರಳವಾಡಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ನಾರಾಯಣ್ ತಾವರ್ ಅಧ್ಯಕ್ಷೆಯಲ್ಲಿ ನಡೆಯಿತು.