ಜನರ ಸಮಸ್ಯೆಗಳನ್ನು ಆಲಿಸಲು ಸರ್ಕಾರವೇ ಅವರ ಬಳಿಗೆ ಬರುವ ವ್ಯವಸ್ಥೆ ಇದಾಗಿದೆ. ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆಯುವ ಪರಿಸ್ಥಿತಿ ಬದಲಾಗಬೇಕು.

ಭಟ್ಕಳ: ತಾಲೂಕಿನ ಬೇಂಗ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಜಾಸೇವೆ ಆಂದೋಲನ ಸಭೆ ಡೆಪ್ಯುಟಿ ಸ್ಪೀಕರ್ ಮಂಕಾಳ ಎಸ್. ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಆಲಿಸಲು ಸರ್ಕಾರವೇ ಅವರ ಬಳಿಗೆ ಬರುವ ವ್ಯವಸ್ಥೆ ಇದಾಗಿದೆ. ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆಯುವ ಪರಿಸ್ಥಿತಿ ಬದಲಾಗಬೇಕು. ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಗೂ ಸೂಕ್ತ ಸ್ಪಂದನೆ ದೊರೆಯಬೇಕು ಎಂಬುದು ಸರ್ಕಾರದ ಆಶಯ ಎಂದ ಅವರು, ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ವ್ಯವಸ್ಥೆಗೆ ತೆರೆ ಎಳೆದು, ಆಡಳಿತವನ್ನೇ ಜನರ ಮನೆ ಬಾಗಿಲಿಗೆ ತರುವ ಉದ್ದೇಶದಿಂದ ಪ್ರಜಾಸೇವಾ ಅಭಿಯಾನ ಜಾರಿಗೊಳಿಸಲಾಗಿದೆ ಎಂದರು.

ಸಾರ್ವಜನಿಕರು ಸಲ್ಲಿಸುವ ಅಹವಾಲುಗಳಿಗೆ ಆದ್ಯತೆ ನೀಡಿ, ಗರಿಷ್ಠ 15 ದಿನಗಳೊಳಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅರ್ಜಿ ಸ್ವೀಕರಿಸಿ ಕಳುಹಿಸುವುದಷ್ಟೇ ಈ ಅಭಿಯಾನದ ಉದ್ದೇಶವಲ್ಲ. ಸಮಸ್ಯೆ ಬಗೆಹರಿಯುವವರೆಗೂ ಅದರ ಮೇಲೆ ನಿಗಾ ವಹಿಸಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು. ತಾಲೂಕು ಮಟ್ಟದಲ್ಲಿ ಸಾಧ್ಯವಾಗದಿದ್ದರೆ ಜಿಲ್ಲಾ ಮಟ್ಟಕ್ಕೆ, ಅಲ್ಲಿಯೂ ಪರಿಹಾರ ದೊರೆಯದಿದ್ದರೆ ರಾಜ್ಯಮಟ್ಟಕ್ಕೆ ಕೊಂಡೊಯ್ದು ಸಂಬಂಧಪಟ್ಟ ಇಲಾಖೆಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರು ಅರ್ಜಿ ಸಲ್ಲಿಸಿದ ಬಳಿಕ ತಮ್ಮ ಕೆಲಸ ಏನಾಯಿತು ಎಂದು ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ಇನ್ನು ಇರಬಾರದು. ಅರ್ಜಿ ಯಾವ ಇಲಾಖೆಯಲ್ಲಿದೆ, ಯಾವ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂಬ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲಾಗುತ್ತದೆ. ತಕ್ಷಣ ಪರಿಹರಿಸಬಹುದಾದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಹೆಚ್ಚಿನ ಸಮಯ ಅಗತ್ಯವಿರುವ ಅಹವಾಲುಗಳನ್ನು 15 ದಿನಗಳೊಳಗೆ ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮ ವಹಿಸಬೇಕು. ಪರಿಹಾರ ಸಾಧ್ಯವಾಗದಿದ್ದರೆ ಅದಕ್ಕೆ ಸೂಕ್ತ ಕಾರಣ ತಿಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.

ಪ್ರಜಾಸೇವಾ ಅಂದೋಲನ ಸಭೆಯಲ್ಲಿ ಒಟ್ಟು 73 ಅರ್ಜಿಗಳು ಬಂದಿದೆ. ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ವಿತರಿಸಲಾಯಿತು. ತಹಸೀಲ್ದಾರ್ ಉಷಾ ಪಾವಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಆಯುಕ್ತ ಜೆ. ಮಹೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಜನಾರ್ದನ ದೇವಾಡಿಗ, ಡಿವೈಎಸ್ಪಿ ಗಿರೀಶ್ ಎಸ್.ವಿ., ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜು ನಾಯ್ಕ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಂ. ವಂದಿಸಿದರು.