ರೈತರ ಸಮಸ್ಯೆ ಇಲಾಖಾ ವ್ಯಾಪ್ತಿಯಲ್ಲೇ ಬಗೆಹರಿಸಿ: ತಹಸೀಲ್ದಾರ್ ಶರತ್ ಕುಮಾರ್

| Published : Jul 26 2024, 01:38 AM IST

ರೈತರ ಸಮಸ್ಯೆ ಇಲಾಖಾ ವ್ಯಾಪ್ತಿಯಲ್ಲೇ ಬಗೆಹರಿಸಿ: ತಹಸೀಲ್ದಾರ್ ಶರತ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಸಭೆಯಲ್ಲಿ ಭಾಗವಹಿಸಿದ್ದ ತಾಲೂಕು ರೈತ ಸಂಘದ ಮುಖಂಡರು ತಾಲೂಕಿನ ಬೆಸ್ಕಾಂ, ಲೋಕೋಪಯೋಗಿ, ಕಂದಾಯ, ಅರಣ್ಯ, ತೋಟಗಾರಿಕೆ, ಕೃಷಿ, ನೀರಾವರಿ, ಅಬಕಾರಿ, ಪುರಸಭೆ ಸೇರಿ ಇತರೆ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನಲ್ಲಿ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ರೈತ ಸಂಘಟನೆ ಗಮನಕ್ಕೆ ತಂದಿದ್ದು, ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ತಹಸೀಲ್ದಾರ್ ಶರತ್ ಕುಮಾರ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ತಾಲೂಕು ರೈತರ ಕುಂದು ಕೊರತೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ತಾಲೂಕಿನ ರೈತರ ಸಮಸ್ಯೆಗಳನ್ನು ತಮ್ಮ ಇಲಾಖೆಯ ವ್ಯಾಪ್ತಿಯಲ್ಲೇ ಬಗೆಹರಿಸಲು ಮುಂದಾಗಬೇಕು, ಸಾಧ್ಯವಾಗದಿದ್ದಾಗ ನಮ್ಮ ಗಮನಕ್ಕೆ ತರಬೇಕೆಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ ರೈತರ ಕೃಷಿ ಚಟುವಟಿಕೆಗೆ ಅಸಮರ್ಪಕ ವಿದ್ಯುತ್ ಪೂರೈಕೆ, ಟ್ರಾನ್ಸ್ ಫಾರ್ಮರ್ ಅಳವಡಿಕೆಗೆ ನೂರೆಂಟು ತೊಂದರೆ, ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಮುಂದಾಗದ ಅಬಕಾರಿ ಇಲಾಖೆ, ಉಪಯೋಗವಾಗದ ಕುಡಿಯುವ ನೀರಿನ ಘಟಕಗಳು, ಸರ್ಕಾರಿ ಬಸ್ ಸೇವೆಗಳ ಅವ್ಯವಸ್ಥೆ, ಬರ್ಗಾವತಿ ಕೆರೆಗೆ ಕಲುಷಿತ ನೀರು ಸೇರ್ಪಡೆ, ಸ್ವಚ್ಛತೆ ಮತ್ತು ಸುಂಕದ ವಿಚಾರವಾಗಿ ಪುರಸಭೆ ಜಾಣ ಕುರುಡು ಪ್ರದರ್ಶನ, ಕಾಡು ಪ್ರಾಣಿಗಳ ಮತ್ತು ಮಂಗಗಳ ಹಾವಳಿಗೆ ಕಡಿವಾಣ ಹಾಕಲು ವಿಫಲವಾಗಿರುವ ಅರಣ್ಯ ಇಲಾಖೆ, ಗುಂಡಿ ಮಯವಾಗಿರುವ ರಸ್ತೆಗಳನ್ನು ಸರಿಪಡಿಸದ ಲೋಕೋಪಯೋಗಿ ಇಲಾಖೆ, ಸರಿಯಾದ ಸಂಪರ್ಕ ರಸ್ತೆ ಮತ್ತು ಪುಟ್ ಬಾತ್ ನಿರ್ಮಿಸದ ಕೆಶಿಪ್ ಸಂಸ್ಥೆ, ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ವಿಫಲವಾದ ಶಿಕ್ಷಣ ಇಲಾಖೆ ಮತ್ತು ಇನ್ನಿತರ ರೈತರ ಸಮಸ್ಯೆಗಳಿಗೆ ಅಧಿಕಾರಿಗಳ ಭರವಸೆಯ, ಹಾರಿಕೆಯ ಉತ್ತರಗಳು ಬೇಡ. ಅವುಗಳಿಗೆಲ್ಲ ನಿರ್ದಿಷ್ಟ ಅವಧಿಯೊಳಗೆ ಪರಿಹಾರ ಸಿಗುವಂತಾಗಬೇಕೆಂದು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು. ಹದಿನೈದು ದಿನಗಳೊಳಗಾಗಿ ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾದರೆ ತಾಲೂಕು ರೈತ ಸಂಘದಿಂದ ಬೃಹತ್ ರಸ್ತೆ ತಡೆ ಚಳುವಳಿಯನ್ನು ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದರು.

ಶ್ರೀಪತಿಹಳ್ಳಿ ರಾಜಣ್ಣ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣಕ್ಕೆ ನಾಡಪ್ರಭು ಮಾಗಡಿ ಕೆಂಪೇಗೌಡರ ಹೆಸರನ್ನು ಇಡಬೇಕೆಂದು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ತಾಲೂಕು ರೈತ ಸಂಘದ ಮುಖಂಡರು ತಾಲೂಕಿನ ಬೆಸ್ಕಾಂ, ಲೋಕೋಪಯೋಗಿ, ಕಂದಾಯ, ಅರಣ್ಯ, ತೋಟಗಾರಿಕೆ, ಕೃಷಿ, ನೀರಾವರಿ, ಅಬಕಾರಿ, ಪುರಸಭೆ ಸೇರಿ ಇತರೆ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ತಾಪಂ ಇಒ ಚಂದ್ರು, ಪುರಸಭಾ ಮುಖ್ಯಾಧಿಕಾರಿ ಶಿವರುದ್ರಯ್ಯ, ಶಿಕ್ಷಣಾಧಿಕಾರಿ ಚಂದ್ರಶೇಖರ್, ಅಕ್ಷರದಾಸೋಹ ಸಮಿತಿ ನಿರ್ದೇಶಕ ಗಂಗಾಧರ್, ಅರಣ್ಯಾಧಿಕಾರಿ ಚೈತ್ರ, ಮಂಜುನಾಥ್, ಕೃಷಿ ಅಧಿಕಾರಿ ವಿಜಯ ಸವಣೂರು, ಬೆಸ್ಕಾಂ ಎಇಇ ಶಿವರಾಜ್, ಪೊಲೀಸ್ ಅಧಿಕಾರಿ ಸಿದ್ದರಾಜು, ಮುಖಂಡ ಕಲ್ಕೆರೆ ಶಿವಣ್ಣ, ರೈತ ಸಂಘದ ಗೌರವಾಧ್ಯಕ್ಷ ಜುಟ್ಟನಹಳ್ಳಿ ಜಯರಾಮ್, ಶಿವಲಿಂಗಯ್ಯ, ತಾಲೂಕು ಯುವ ಘಟಕ ರವಿಕುಮಾರ್, ನವನಿರ್ಮಾಣ ವೇದಿಕೆಯ ಶ್ರೀಪತಿಹಳ್ಳಿ ರಾಜಣ್ಣ, ಬಾಚೇನಹಟ್ಟಿ ಮಹಾಂತೇಶ್, ಬುಡನ್ ಸಾಬ್, ಕಾಂತರಾಜ್ ಸೇರಿ ಇತರರಿದ್ದರು.