ಸಾರಾಂಶ
ತುಮಕೂರು ತಾಲೂಕು, ಕಸಬಾ ಹೋಬಳಿ, ಕೊತ್ತಿಹಳ್ಳಿ ಗ್ರಾಮದಲ್ಲಿ ಚರಂಡಿ ನೀರು ಸರಾಗವಾಗಿ ಹೋಗದೇ ದಲಿತರ ಮನೆಗಳಿಗೆ ನುಗ್ಗುತ್ತಿರುವ ಪರಿಣಾಮ ಮಾರಣಾಂತಿಕ ಕಾಯಿಲೆಗಳಿಗೆ ಆಸ್ಪದ ನೀಡುತ್ತಿದೆ
ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ತಾಲೂಕು, ಕಸಬಾ ಹೋಬಳಿ, ಕೊತ್ತಿಹಳ್ಳಿ ಗ್ರಾಮದಲ್ಲಿ ಚರಂಡಿ ನೀರು ಸರಾಗವಾಗಿ ಹೋಗದೇ ದಲಿತರ ಮನೆಗಳಿಗೆ ನುಗ್ಗುತ್ತಿರುವ ಪರಿಣಾಮ ಮಾರಣಾಂತಿಕ ಕಾಯಿಲೆಗಳಿಗೆ ಆಸ್ಪದ ನೀಡುತ್ತಿದೆ. ಈ ಕುರಿತು ನಿರ್ಲಕ್ಷ್ಯವಹಿಸಿರುವ ಸ್ಥಳೀಯ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ಗೆ ಮನವಿ ಸಲ್ಲಿಸಲಾಯಿತು.
ಕೊತ್ತಿಹಳ್ಳಿ ಗ್ರಾಮದಲ್ಲಿ ಮನೆಗಳ ಪಕ್ಕದಲ್ಲಿ ಹಾದು ಹೋಗಿರುವ ಚರಂಡಿ ನೀರು ಪರಿಶಿಷ್ಟ ಜಾತಿಯವರು ವಾಸಿಸುವ ಕಾಲೋನಿಯ ಒಳಗೆ ಮತ್ತು ಮನೆಗಳಿಗೂ ನುಗ್ಗುತ್ತಿದ್ದೆ. ಇದರಿಂದ ಹಲವಾರು ಜನರು ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಈ ಪ್ರದೇಶದಲ್ಲಿ ಕಲುಷಿತ ನೀರು ನಿಂತು ದುರ್ನಾತ ಬೀರುತ್ತಿರುವುದಲ್ಲದೇ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಡೆಂಘೀಯಂತಹ ಮಾರಕ ರೋಗಗಳ ಭೀತಿಯಿಂದ ಜೀವನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಈ ಭಾಗದಲ್ಲಿ ಸಮರ್ಪಕ ರಸ್ತೆ ಸೌಲಭ್ಯವಿಲ್ಲದೇ ತೊಂದರೆಯಾಗಿದ್ದು, ಇಲ್ಲಿ ವಾಸಿಸುವ ಬಹುತೇಕರು ಪರಿಶಿಷ್ಟ ಜಾತಿಗೆ ಸೇರಿದ ಮನೆಗಳು ಇವೆ ಎಂಬ ಕಾರಣಕ್ಕೆ ಕನಿಷ್ಟ ಮೂಲಭೂತ ಸೌಕರ್ಯಗಳಾದ ರಸ್ತೆ, ಸಮರ್ಪಕ ಚರಂಡಿ ವ್ಯವಸ್ಥೆ, ದಾರಿದೀಪ ಒಳಗೊಂಡಂತೆ ಯಾವುದನ್ನೂ ಸರಿಪಡಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರ ವರ್ಗದವರಿಗೆ ವಿಷಯ ತಿಳಿಸಿದ್ದಲ್ಲದೇ ಮನವಿ ಪತ್ರಗಳನ್ನು ನೀಡಿದರೂ ಗಮನಹರಿಸುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.