ಸ್ಥಳೀಯ ಶಾಸಕರ ಸಹಕಾರದಿಂದ ಸಮಸ್ಯೆ ಪರಿಹರಿಸಿ: ಸಚಿವ ಎನ್.ಎಸ್. ಬೋಸರಾಜು

| Published : Jan 04 2025, 12:33 AM IST

ಸ್ಥಳೀಯ ಶಾಸಕರ ಸಹಕಾರದಿಂದ ಸಮಸ್ಯೆ ಪರಿಹರಿಸಿ: ಸಚಿವ ಎನ್.ಎಸ್. ಬೋಸರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ಅಧಿಕಾರಿಗಳು ಇನ್ಮುಂದಾದರೂ ಕುಂಟು ನೆಪ ಹೇಳದೆ ಕಾಮಗಾರಿ ಮುಗಿಸಲು ಮುತುವರ್ಜಿ ವಹಿಸಬೇಕು ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ಕುಷ್ಟಗಿ: ಇಲ್ಲ-ಸಲ್ಲದ ಕುಂಟು ನೆಪ ಹೇಳದೆ ಸ್ಥಳೀಯ ಶಾಸಕರ ಹಾಗೂ ಜನಪ್ರತಿನಿಧಿಗಳ ಸಹಕಾರವನ್ನು ಪಡೆಯುವ ಮೂಲಕ ಇನ್ನೊಂದು ವಾರದಲ್ಲಿ ಏತ ನೀರಾವರಿಯ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಮುಗಿಸಬೇಕು ಎಂದು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಎಂಜಿನಿಯರ್‌ಗಳಿಗೆ ಖಡಕ್ ಸೂಚನೆ ಕೊಟ್ಟರು.

ತಾಲೂಕಿನ ಕಡೇಕೊಪ್ಪ ಕ್ರಾಸಿನಲ್ಲಿರುವ ಏತನೀರಾವರಿ ಕೆರೆ ತುಂಬಿಸುವ ಕಾಮಗಾರಿಯ ಎರಡನೇಯ ಹಂತದ ಜಾಕ್ ವೆಲ್ ಪಂಪ್‌ಹೌಸಗೆ ಭೇಟಿ ನೀಡಿ ಬಳಿಕ ಮಾತನಾಡಿದರು

ರೈತರ ಒಳಿತಿಗಾಗಿ ಸಾವಿರಾರು ಕೋಟಿ ರೂಪಾಯಿಯ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ. ಎಲ್ಲ ಅಧಿಕಾರಿಗಳು ಇನ್ಮುಂದಾದರೂ ಕುಂಟು ನೆಪ ಹೇಳದೆ ಕಾಮಗಾರಿ ಮುಗಿಸಲು ಮುತುವರ್ಜಿ ವಹಿಸಬೇಕು ಎಂದರು.

ಸಮಸ್ಯೆಗಳಿದ್ದರೆ ಸ್ಥಳೀಯ ಶಾಸಕರ ಗಮನಕ್ಕೆ ತರುವ ಮೂಲಕ ಇತ್ಯರ್ಥಪಡಿಸಿಕೊಂಡು ಕೆಲಸ ಮಾಡಿಸಿಕೊಳ್ಳಬೇಕು. ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಒಪ್ಪಿಸುವ ಕೆಲಸ ಮಾಡಬೇಕು ಎಂದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಕಾಮಗಾರಿಗೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರುವ ಕೆಲಸ ಮಾಡುವುದಿಲ್ಲ. ಒಂದು ವೇಳೆ ಗಮನಕ್ಕೆ ತಂದರೆ ಸಮಸ್ಯೆ ಇತ್ಯರ್ಥ ಮಾಡಬಹುದು ಎಂದರು.

ಕುಷ್ಟಗಿ ಪಟ್ಟಣದಲ್ಲಿ ಸಣ್ಣ ನೀರಾವರಿ ಇಲಾಖೆಯ ಸಂಬಂದಪಟ್ಟ ಅಧಿಕಾರಿ, ಸಿಬ್ಬಂದಿ ಸಮರ್ಪಕ ಪ್ರಮಾಣದಲ್ಲಿಲ್ಲ. ಅನೇಕ ಕಟ್ಟಡಗಳು ಹಾಳುಬಿದ್ದಿದ್ದು, ಅಧಿಕಾರಿಗಳನ್ನು ನಿಯೋಜನೆ ಮಾಡಿದರೆ ರೈತರ ಕೆಲಸಗಳಿಗೆ ಅನೂಕೂಲವಾಗಲಿದೆ ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ಸುಮಾರು 12 ವರ್ಷಗಳಿಂದ ಬಾಕಿ ಇರುವ ಸಣ್ಣ ನೀರಾವರಿ ಇಲಾಖೆಯ ಹುದ್ದೆಗಳನ್ನು ಶೀಘ್ರದಲ್ಲಿ ತುಂಬಿಕೊಳ್ಳುವ ಕೆಲಸ ಮಾಡಲಾಗುತ್ತದೆ. ನಂತರ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಲ್ಲಿ ವರೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ರಾಘವನ್, ಅಭಿಯಂತ ಜೆ.ಜೆ. ರಾಠೋಡ್, ಅಧೀಕ್ಷಕ ನಿಂಗರಾಜ, ಸಣ್ಣ ನೀರಾವರಿ ಇಲಾಖೆಯ ಇಇ ಬಸವರಾಜ ಪಾಟೀಲ, ಎಇಇ ದೇವೇಂದ್ರಪ್ಪ, ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪೂರ ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.