ನೀರಿನ ಬವಣೆ ಬಗೆಹರಿಸಿ: ಗ್ರಾಮಸ್ಥರ ಅಳಲು

| Published : Feb 05 2024, 01:48 AM IST

ಸಾರಾಂಶ

ಕಳೆದ 12 ದಿನಗಳಿಂದ ಗ್ರಾಮಕ್ಕೆ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಕೊರಟಗೆರೆ ತಾಲೂಕು ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ಗೊಂದಿಹಳ್ಳಿ ಗ್ರಾಮದ ಗ್ರಾಮಸ್ಥರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡು ಹೊಸದಾಗಿ ಒಂದು ಕೊಳವೆಬಾವಿ ಕೊರೆಸಿಕೊಟ್ಟು ಪ್ರಸ್ತುತ ತಲೆದೋರಿರುವ ನೀರಿನ ಬವಣೆಯನ್ನು ಬಗೆಹರಿಸಬೇಕೆಂದು ಪಟ್ಟುಹಿಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕಳೆದ 12 ದಿನಗಳಿಂದ ಗ್ರಾಮಕ್ಕೆ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಕೊರಟಗೆರೆ ತಾಲೂಕು ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ಗೊಂದಿಹಳ್ಳಿ ಗ್ರಾಮದ ಗ್ರಾಮಸ್ಥರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡು ಹೊಸದಾಗಿ ಒಂದು ಕೊಳವೆಬಾವಿ ಕೊರೆಸಿಕೊಟ್ಟು ಪ್ರಸ್ತುತ ತಲೆದೋರಿರುವ ನೀರಿನ ಬವಣೆಯನ್ನು ಬಗೆಹರಿಸಬೇಕೆಂದು ಪಟ್ಟುಹಿಡಿದರು.

ಕುಡಿಯುವ ನೀರಿನ ಸಮಸ್ಯೆಯಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಗೊಂದಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇನ್ನೆರಡು ದಿನಗಳೊಳಗೆ ಹೊಸ ಕೊಳವೆ ಬಾವಿ ಕೊರೆಸಲು ಕ್ರಮವಿಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೀರ್ತಿ ಕೆ ನಾಯಕ್ ಅವರಿಗೆ ನಿರ್ದೇಶನ ನೀಡಿದರು.

ಕೊರಟಗೆರೆ ತಾಲೂಕು ಜೆಟ್ಟಿ ಅಗ್ರಹಾರದಲ್ಲಿರುವ ಕೆರೆಗೆ ಹೇಮಾವತಿ ನಾಲೆ ನೀರು ತುಂಬಿಸಿದರೆ ಗೊಂದಿಹಳ್ಳಿ ಗ್ರಾಮಕ್ಕೂ ನೀರು ಪೂರೈಕೆ ಮಾಡಬಹುದಾಗಿದೆ ಎಂಬ ಗ್ರಾಮಸ್ಥರ ಸಲಹೆಯನ್ನು ಆಲಿಸಿದ ಅವರು ಕುಡಿಯುವ ನೀರಿನ ಸಮಸ್ಯೆಯನ್ನು ಬೇಗನೆ ಪರಿಹರಿಸಬೇಕು ಎಂದು ಸ್ಥಳದಲ್ಲಿಯೇ ದೂರವಾಣಿ ಮೂಲಕ ಸಂಬಂಧಿಸಿದ ಎಂಜಿನಿಯರ್‌ ಅನಿಲ್‌ಕುಮಾರ್‌ ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರಲ್ಲದೆ ಗ್ರಾಮಸ್ಥರ ಮನವಿಯಂತೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿತಂತ್ರಣಾಧಿಕಾರಿಗೆ ಸೂಚನೆ ನೀಡಿದರು.

ಇದಕ್ಕೂ ಮುನ್ನ ಬೆಳಿಗಿನ ಜಾವ 6.30 ಗಂಟೆಗೆ ತುಮಕೂರು ತಾಲೂಕು ಊರ್ಡಿಗೆರೆ ಹಾಗೂ ಸೀತಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ನರಸಯ್ಯನಪಾಳ್ಯ, ಭೋವಿ ಕಾಲೋನಿ, ನಾಗೋಜಿ ಪಾಳ್ಯ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರು ಮೇವಿನ ಬಗ್ಗೆ ಪರಿಶೀಲಿಸಿದರು.

ಗ್ರಾಮಗಳಲ್ಲಿ ನೀರಿನ ಅಭಾವ ಬಾರದಂತೆ ಕ್ರಮವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಕೂಡಲೇ ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಒದಗಿಸುವತ್ತ ಯೋಜನೆ ರೂಪಿಸಬೇಕು. ಈಗಾಗಲೇ ಹೊಸದಾಗಿ ಕೊರೆದಿರುವ ಕೊಳವೆಬಾವಿಗೆ ಕೂಡಲೇ ಮೋಟಾರ್‌ ಅಳವಡಿಸಿ ಗ್ರಾಮಸ್ಥರಿಗೆ ನೀರಿನ ಅನುಕೂಲ ಮಾಡಿಕೊಡಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಧುಮತಿ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ದನ-ಕರುಗಳ ಮೇವಿಗೆ ಅನುಕೂಲವಾಗುವಂತೆ ದೊಡ್ಡವಾಡಿ ಬೆಟ್ಟಕ್ಕೆ ಹೋಗಲು ಒತ್ತುವರಿಯಾಗಿರುವ ನಕಾಶೆ ದಾರಿಯನ್ನು ತೆರವು ಮಾಡಿಕೊಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಪಶುಸಂಗೋಪನಾ ಇಲಾಖೆಯಿಂದ ಮೇವಿನ ಕಿಟ್ ಪಡೆದು ಬೆಳೆದಿರುವ ನಾಗೋಜಿಪಾಳ್ಯದ ರೈತ ರಾಜಣ್ಣನ ಮೇವು ತಾಕಿಗೆ ಭೇಟಿ ನೀಡಿ ಮಾಹಿತಿ ಪಡೆದು ರೈತನ ಮನೆಯಲ್ಲಿ ಹಾಲು ಸೇವಿಸಿದ ಜಿಲ್ಲಾಧಿಕಾರಿಗಳು ರಾಜಣ್ಣ ಅವರು 10 ಕುಂಟೆ ಜಮೀನಿನಲ್ಲಿ ತಮ್ಮ ರಾಸುಗಳಿಗಾಗುವಷ್ಟು ಮೇವನ್ನು ಉತ್ಪಾದಿಸಿರುವಂತೆ ಉಳಿದ ರೈತರೂ ಸಹ ತಮ್ಮ ಜಾನುವಾರುಗಳಿಗೆ ಮೇವನ್ನು ಉತ್ಪಾದಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವೈ.ಜಿ. ಕಾಂತರಾಜು ಹಾಗೂ ಡಾ. ಮಂಜುನಾಥ ಅವರು ಉಪಸ್ಥಿತರಿದ್ದು ಮೇವಿನ ಕಿಟ್ ಪಡೆದು ಬೆಳೆಯುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ನಂತರ ಕೊರಟಗೆರೆ ತಾಲೂಕು ಇರಕಸಂದ್ರ ಕಾಲೋನಿಯ ರೇಣುಕಾನಗರ, ಇರಕಸಂದ್ರ ಕಾಲೋನಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ನೀರಿಲ್ಲದೆ ತೋಟಗಳು ಒಣಗುತ್ತಿದ್ದು, ತೋಟಗಾರಿಕೆ ಬೆಳೆಗೆ ಬಳಸಿಕೊಳ್ಳಲು ೧೫ ದಿನಗಳಿಗೊಮ್ಮೆ ಕೆರೆಯ ನೀರನ್ನು ಬಿಡಬೇಕೆಂಬ ಸ್ಥಳೀಯರ ಮನವಿಯನ್ನು ಆಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ರೈತರ ಅನುಕೂಲಕ್ಕಾಗಿ ಇರಕಸಂದ್ರ ಕಾಲೋನಿ ಕೆರೆ ನೀರನ್ನು ಕಾಲುವೆಗೆ ಬಿಡಲು ಕ್ರಮ ಕೈಗೊಳ್ಳಬೇಕು. ನೀರು ಬಿಡುವ ಬಗ್ಗೆ ಐಸಿಸಿ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕೆಂದು ಉಪವಿಭಾಗಾಧಿಕಾರಿ ಶಿವಪ್ಪ ಅವರಿಗೆ ತಾಕೀತು ಮಾಡಿದರು. ನೀರು ಹರಿಸುವ ಮುನ್ನ ಕಾಲುವೆಯಲ್ಲಿರುವ ಹೂಳನ್ನೆತ್ತಿ, ಗಿಡ-ಗಂಟೆಗಳನ್ನು ಸ್ವಚ್ಛಗೊಳಿಲು ಸಣ್ಣ ನೀರಾವರಿ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಬೇಕೆಂದು ತಹಸೀಲ್ದಾರ್‌ ಕೆ. ಮಂಜುನಾಥ್ ಅವರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಗ್ರಾಮಗಳಲ್ಲಿ ಸರ್ಕಾರ ಖಾತರಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳ ಲಾಭ ಪಡೆಯುತ್ತಿರುವ ಬಗ್ಗೆ ಮಹಿಳಾ ಫಲಾನುಭವಿಗಳಿಂದ ಮಾಹಿತಿ ಪಡೆದರು. ಉಳಿದಂತೆ ಮೇವಿನ ಕೊರತೆಯಿಂದ ಗೋಶಾಲೆ ತೆರೆಯುವ, ಸ್ಮಶಾನ ಭೂಮಿ ಮಂಜೂರು, ದೇವಸ್ಥಾನ ಜೀರ್ಣೋದ್ಧಾರದ ಬಗ್ಗೆ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಸ್ಥಳೀಯ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.