ಕಾರ್ಖಾನೆಗಳಿಂದ ಸಮಸ್ಯೆ ಪರಿಹಾರ ಕೇವಲ ಭ್ರಮೆ

| Published : Nov 01 2025, 02:30 AM IST

ಕಾರ್ಖಾನೆಗಳಿಂದ ಸಮಸ್ಯೆ ಪರಿಹಾರ ಕೇವಲ ಭ್ರಮೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿ ಹಣ ಹೂಡಿಕೆ ಮಾಡುವುದು ದೊಡ್ಡ ಸಂಗತಿ ಎಂದು ಭಾವಿಸಿರುವುದೇ ಬಹುದೊಡ್ಡ ತಪ್ಪು,

ಕೊಪ್ಪಳ: ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಬೇಕು ಅಂತೇನಿಲ್ಲ, ಅವುಗಳಿಂದ ಎಲ್ಲ ಸಮಸ್ಯೆ ಪರಿಹಾರ ಆಗಿದೆ ಎಂಬುದು ಕೇವಲ ಭ್ರಮೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ನಗರಸಭೆ ಸಂಕೀರ್ಣದ ಬಳಿ ಜಂಟಿ ಕ್ರಿಯಾ ವೇದಿಕೆ (ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ) ಮೂಲಕ ಹಮ್ಮಿಕೊಂಡಿರುವ ಬಿಎಸ್ ಪಿಎಲ್ ಕಾರ್ಖಾನೆ ಅನುಮತಿ ರದ್ಧತಿ ಹಾಗೂ ಇತರೆ ಕಾರ್ಖಾನೆಗಳ ವಿಸ್ತೀರ್ಣ ಮತ್ತು ಆರಂಭ ವಿರೋಧಿಸಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹಕ್ಕೆ ಗಾಂಧೀಜಿ ಮತ್ತು ಬಾಬಾಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇಲ್ಲಿ ಹಣ ಹೂಡಿಕೆ ಮಾಡುವುದು ದೊಡ್ಡ ಸಂಗತಿ ಎಂದು ಭಾವಿಸಿರುವುದೇ ಬಹುದೊಡ್ಡ ತಪ್ಪು, ಹಣದ ಲೆಕ್ಕದಲ್ಲಿ ಜನರಿಗೆ ಬದುಕು ಸಿಗಲ್ಲ. ಜಿಂದಾಲ್ ನಂತಹ ಬೃಹತ್ ಕಾರ್ಖಾನೆ ಏನು ಹೇಳಿ ಬಳ್ಳಾರಿಯಲ್ಲಿ ಬಂದಿತ್ತು ಅದ್ಯಾವುದೂ ಆಗದೇ ಅಲ್ಲಿ ಜನ ಕಂಗಾಲಾಗಿದ್ದಾರೆ, ಬಹುತೇಕ ಕಂಪನಿಗಳು ಈಗ ಉದ್ಯೋಗ ಕಡಿತ ಆರಂಭಿಸಿವೆ. ಈಗ ಉದ್ಯೋಗ ಕೊಡ್ತಿವಿ ಅಂದವರು ಮುಂದೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಅದು ಏನೇ ಇದ್ದರೂ ಉದ್ಯೋಗಕ್ಕಿಂತ ಮೊದಲು ಆರೋಗ್ಯ ಹಾಗೂ ಬದುಕು ಮುಖ್ಯ ಎಂದರು.

ರೈತ ಚಳವಳಿಯ ಮುಂಚೂಣಿ ನಾಯಕ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕಾರ್ಖಾನೆಗಳಿಂದ ಬರುತ್ತಿರುವ ಧೂಳು ಮತ್ತು ಹೊಗೆಯಿಂದ ಪರಿಸರ ವಿನಾಶವಾಗಿದೆ, ಬೆಳೆ ಹೋಗಿದೆ, ಬೆಳೆ ವಿಷಕಾರಿಯಾಗಿವೆ ಜತೆಗೆ ಇಲ್ಲಿನ ನದಿಯಿಂದ ನೀರನ್ನು ಹೇರಳವಾಗಿ ಬಳಸಿಕೊಂಡು ರೈತರಿಗೆ ಎರಡನೆ ಬೆಳೆಗೆ ನೀರಿಲ್ಲ, ಕುಡಿಯುವ ನೀರು ಮಲೀನವಾಗಿವೆ ಎಂಬ ಸಾಮಾನ್ಯ ಪ್ರಜ್ಞೆ ಇಟ್ಟುಕೊಳ್ಳದಿರುವದು ವಿಷಾಧಕರ ಸಂಗತಿ ಎಂದರು.

ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೋರಾಟಕ್ಕೆ ಕೊಟ್ಟ ಚಾಲನೆ ನಿಲ್ಲಿಸಬಾರದು, ಹೋರಾಟದ ಮೂಲಕ ಬದುಕು, ಉಸಿರು ಮರಳಿ ಕೊಟ್ಟರೆ ಶ್ರೀಗಳು ಇಲ್ಲಿನ ಜನರಿಗೆ ಮಾಡುವ ಬಹುದೊಡ್ಡ ಉಪಕಾರವಾದೀತು, ನಾವು ನಿಮ್ಮನ್ನು ದೇವರಂತೆ ಪೂಜಿಸುತ್ತೇವೆ ಎಂದು ಮನವಿ ಮಾಡಿದರು. ಅಲ್ಲದೇ ರಾಜ್ಯ ರೈತ ಸಂಘ ಮತ್ತು ಸಂಯುಕ್ತ ಹೋರಾಟ ಸಮಿತಿ ಮೂಲಕ ರಾಜ್ಯಮಟ್ಟದ ಬೃಹತ್ ಆಂದೋಲನ ಮಾಡಲು ಸಜ್ಜಾಗೋಣ ಎಂದರು.

ವೇದಿಕೆ ಮೇಲೆ ಇದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.ಗೊಂಡಬಾಳ ಮಾತನಾಡಿ, ಸ್ವಾತಂತ್ರ್ಯ ಪಡೆದು ೭೫ ವರ್ಷಗಳ ನಂತರ ಮತ್ತೆ ಮತ್ತೆ ಹೋರಾಟ ಮಾಡಬೇಕಿರುವದು ದುರಂತ ಎಂದರು.

ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಎ.ಎಂ.ಮದರಿ, ಮಹಿಳಾ ಹೋರಾಟಗಾರ್ತಿ ಶಶಿಕಲಾ, ಜಂಟಿ ಕ್ರಿಯಾ ವೇದಿಕೆ ಹೋರಾಟ ಸಂಚಾಲಕ ಕೆ. ಬಿ.ಗೋನಾಳ, ಡಿ. ಎಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ನಜೀರಸಾಬ್ ಮೂಲಿಮನಿ, ಶರಣು ಗಡ್ಡಿ, ಎಸ್.ಎ.ಗಫಾರ್, ಬಸವರಾಜ ಶೀಲವಂತರ, ಎಸ್.ಬಿ. ರಾಜೂರ, ರವಿ ಕಾಂತನವರ, ಚಿಟ್ಟಿಬಾಬು ಸಿಂಧನೂರು, ಭೀಮಸೇನ ಕಲಿಕೇರಿ, ಶರಣು ಪಾಟೀಲ್, ಹನುಮಂತಪ್ಪ, ಬಸವರಾಜ ಯರದಿಹಾಳ, ಮೂಕಣ್ಣ ಮೇಸ್ತ್ರೀ, ಮಂಗಳೇಶ ರಾಠೋಡ, ಬಸವರಾಜ ನರೇಗಲ್, ರಮೇಶ ಪಾಟೀಲ್ ಬೇರಿಗಿ, ಗವಿಸಿದ್ದಪ್ಪ ಹಲಿಗಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಹಾದೇವಪ್ಪ ಮಾವಿನಮಡು, ದುರುಗೇಶ ಹಿರೇಮನಿ ವಟಪರ್ವಿ, ಸುಂಕಮ್ಮ ಗಾಂಧಿನಗರ, ಭೀಮಪ್ಪ ಯಲಬುರ್ಗಾ, ಚನ್ನಬಸಪ್ಪ ಅಪ್ಪಣ್ಣವರ ಅನೇಕರಿದ್ದರು.

ಇದಕ್ಕೂ ಮೊದಲು ಅಶೋಕ ವೃತ್ತದಲ್ಲಿ ಪ್ರತಿಭಟನಾರ್ಥವಾಗಿ ಘೋಷಣೆ ಕೂಗಿ ಅಲ್ಲಿಂದ ಮೆರವಣಿಗೆ ಮೂಲಕ ನಗರಸಭೆ ಮುಂದೆ ಬಂದು ಧರಣಿ ನಡೆಸಿದರು. ನ.೧ ರಂದು ಕೊಪ್ಪಳದ ಕಲ್ಯಾಣ ನಗರ ನಿವಾಸಿಗಳು ಪ್ರತಿಭಟನೆ ಮಾಡುವರು.